ಬಳ್ಳಾರಿಯಲ್ಲಿ ಇನ್ಮುಂದೆ ಹೆಲ್ಮೆಟ್ ಕಡ್ಡಾಯ

KannadaprabhaNewsNetwork |  
Published : Jun 06, 2025, 12:42 AM IST
5 ಬಿಆರ್‌ವೈ 1ಹೆಲ್ಮೆಟ್ ಬಳಕೆ ಮಹತ್ವ ಕುರಿತು ಬಳ್ಳಾರಿಯ ಇಂದಿರಾ ವೃತ್ತದಲ್ಲಿ ಸಂಚಾರ ಠಾಣೆ ಸಿಪಿಐ ಅಯ್ಯನಗೌಡ ಪಾಟೀಲ್ ಅವರು ಜನರಲ್ಲಿ ಜಾಗೃತಿ ಮೂಡಿಸಿದರು.  | Kannada Prabha

ಸಾರಾಂಶ

ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದ್ದು, ಜನರನ್ನು ಸಾವಿನ ದವಡೆಯಿಂದ ಪಾರು ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಜೂ. 6 ರಿಂದ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಹೆಲ್ಮೆಟ್ ಇಲ್ಲದೆ ರಸ್ತೆಗಿಳಿಯುವವರಿಗೆ ದಂಡ ಪ್ರಯೋಗಕ್ಕೂ ಪೊಲೀಸ್ ಇಲಾಖೆ ಸಜ್ಜಾಗಿದೆ.

ಇಂದಿನಿಂದ ಹೆಲ್ಮೆಟ್‌ ಇಲ್ಲದೆ ಹೊರಗೆ ಬರಬೇಡಿ

ಬಿಸಿಲೂರು ಎಂಬ ಕಾರಣಕ್ಕೆ ವಿನಾಯಿತಿ ಇಲ್ಲ

ಜನಜಾಗೃತಿಗೆ ಚಾಲನೆ ನೀಡಿದ ಸಂಚಾರಿ ಪೊಲೀಸರು

ಹೆಲ್ಮೆಟ್ ಕುರಿತು ಅರಿವು ಮೂಡಿಸಲು ವಿವಿಧೆಡೆ ಅರಿವು

ಕನ್ನಡಪ್ರಭವಾರ್ತೆ ಬಳ್ಳಾರಿ

ನಗರದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಂದ ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದ್ದು, ಜನರನ್ನು ಸಾವಿನ ದವಡೆಯಿಂದ ಪಾರು ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಜೂ. 6 ರಿಂದ ದ್ವಿಚಕ್ರವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿದೆ. ಹೆಲ್ಮೆಟ್ ಇಲ್ಲದೆ ರಸ್ತೆಗಿಳಿಯುವವರಿಗೆ ದಂಡ ಪ್ರಯೋಗಕ್ಕೂ ಪೊಲೀಸ್ ಇಲಾಖೆ ಸಜ್ಜಾಗಿದೆ.

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದು ಕಾನೂನು ಬಾಹಿರ. ಆದರೆ, ಈವರೆಗೆ ಜಿಲ್ಲಾ ಪೊಲೀಸರು ಈ ಬಗ್ಗೆ ಗಂಭೀರವಾಗಿ ಯೋಚಿಸಿದಂತಿಲ್ಲ.ಆದರೆ, ನಗರದಲ್ಲಿ ಹೆಚ್ಚುತ್ತಿರುವ ಅಪಘಾತಗಳಲ್ಲಿ ಸಾವಿಗೀಡಾಗುವವರ ಪೈಕಿ ಬಹುತೇಕರು ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪುತ್ತಿರುವುದರಿಂದ ಹೆಲ್ಮೆಟ್ ಕಡ್ಡಾಯ ಕಾನೂನು ಜಾರಿ ಪರಿಣಾಮಕಾರಿ ಅನುಷ್ಠಾನಕ್ಕೆ ಮುಂದಾಗಿದೆ. ತಡವಾಗಿಯಾದರೂ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆಯ ನಿರ್ಧಾರ ಸ್ವಾಗತಾರ್ಹ ಎನಿಸಿದೆ.

ಯಾವ ವಿನಾಯಿತಿ ಇಲ್ಲ:

ಹೆಲ್ಮೆಟ್ ಕಡ್ಡಾಯ ವಿಚಾರದಲ್ಲಿ ಬಳ್ಳಾರಿಗೆ ಯಾವ ವಿನಾಯಿತಿಯೂ ಇಲ್ಲ ಎಂದು ಸಂಚಾರಿ ಠಾಣೆ ಸಿಪಿಐ ಅಯ್ಯನಗೌಡ ಸ್ಪಷ್ಟಪಡಿಸಿದರು.

ನಗರದ ಇಂದಿರಾ ಸರ್ಕಲ್ ನಲ್ಲಿ (ಸಂಗಮ ಸರ್ಕಲ್‌) ಜಿಲ್ಲಾ ಪೊಲೀಸ್ ಇಲಾಖೆಯಿಂದ ಗುರುವಾರ ಜರುಗಿದ ಹೆಲ್ಮೆಟ್ ಬಳಕೆಯ ಮಹತ್ವ ಕುರಿತು ಜಾಗೃತಿ ಕಾರ್ಯಕ್ರಮ ವೇಳೆ ಮಾತನಾಡಿದರು. ಬಿಸಿಲೂರು ಎಂಬ ಕಾರಣಕ್ಕೆ ಬಳ್ಳಾರಿಗೆ ಹೆಲ್ಮೆಟ್ ಬಳಕೆಯಿಂದ ವಿನಾಯಿತಿ ಎಂದು ಅನೇಕರು ಸುಳ್ಳುಸುದ್ದಿ ಹಬ್ಬಿಸಿದ್ದಾರೆ. ಹೆಲ್ಮೆಟ್ ಕಡ್ಡಾಯದ ಕಾನೂನು ಎಲ್ಲ ಜಿಲ್ಲೆಗಳಿಗೂ ಅನ್ವಯವಾಗುತ್ತದೆ. ಬಳ್ಳಾರಿಗೆ ಪ್ರತ್ಯೇಕವಾಗಿ ಇರುವುದಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸಿದಲ್ಲಿ ನಿಮ್ಮ ಜೀವಕ್ಕೆ ಹಾನಿಯಾಗಲಿದೆ. ಜನರು ತಮ್ಮ ಜೀವ ಸುರಕ್ಷತೆಗಾದರೂ ಹೆಲ್ಮೆಟ್ ಧರಿಸಬೇಕೇ ವಿನಾ, ಪೊಲೀಸರಿಗೆ ದಂಡ ನೀಡುವುದನ್ನು ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುವುದು ಸರಿಯಲ್ಲ. ದಂಡ ಹಾಕುವುದು ನಮ್ಮ ಉದ್ದೇಶವೂ ಅಲ್ಲ. ಆದರೆ, ಕಾನೂನು ಪಾಲನೆ ಮಾಡಲು ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ತಿಳಿಸಿದರಲ್ಲದೆ, ಐಎಸ್‌ಐ ಮಾರ್ಕ್ ಹೊಂದಿರುವ ಗುಣಮಟ್ಟದ ಹೆಲ್ಮೆಟ್ ಮಾತ್ರ ಧರಿಸಬೇಕು ಎಂದು ಸೂಚಿಸಿದರು.

ನೀನು ಉಳಿದ್ರೆ ಕುಟುಂಬ ಉಳಿಯುತ್ತೆ:

ಜನ ಜಾಗೃತಿ ವೇಳೆ ಹೆಲ್ಮೆಟ್ ಇಲ್ಲದೆ ಓಡಾಡುತ್ತಿದ್ದ ವಾಹನ ಸವಾರರಿಗೆ ಜೀವ ಸುರಕ್ಷತೆಯ ಪಾಠ ಮಾಡಿದ ನಗರ ಡಿವೈಎಸ್ಪಿನಂದಾರೆಡ್ಡಿ ಅವರು ಹೆಲ್ಮೆಟ್‌ ಮನೆಯಲ್ಲಿ ಯಾಕೆ ಇಟ್ಟು ಬಂದೆ ? ಹೆಲ್ಮೆಟ್ ಮಹತ್ವ ಗೊತ್ತಿಲ್ಲವೇ ? ಎಂದು ವಾಹನ ಸವಾರರನ್ನು ಪ್ರಶ್ನಿಸಿದರು. ನೀನೇ ಕುಟುಂಬ ಮುಖ್ಯಸ್ಥ ಅಂತೀಯಾ ? ಅಪಘಾತವಾದರೆ ಏನು ಗತಿ ? ನಿನ್ನ ಕುಟುಂಬ ನಿನ್ನನ್ನೇ ನಂಬಿರುತ್ತೆ. ನಿನಗೇನಾದರೂ ಆದ್ರೆ ಅವರ ಗತಿ ಏನು ಯೋಚನೆ ಮಾಡಿದ್ದೀಯಾ? ಎಂದು ಕೇಳಿದರಲ್ಲದೆ, ನಾಳೆಯಿಂದ ಹೆಲ್ಮೆಟ್ ಇಲ್ಲದೆ ವಾಹನ ಹೊರ ತಂದರೆ ದಂಡ ಹಾಕ್ತೀನಿ ಎಂದು ಎಚ್ಚರಿಸಿದರು.

ನಗರದ ಇಂದಿರಾ ವೃತ್ತ, ಇನ್‌ಫ್ಯಾಂಟ್ರಿ ರಸ್ತೆ, ಮೋತಿ ವೃತ್ತಿ ಸೇರಿದಂತೆ ವಿವಿಧೆಡೆ ಹೆಲ್ಮೆಟ್ ಕಡ್ಡಾಯ ಬಳಕೆ ಮಹತ್ವ ಕುರಿತು ಜನರಲ್ಲಿ ಅರಿವು ಮೂಡಿಸಲಾಯಿತು. ಜಾಗೃತಿ ಕಾರ್ಯಕ್ರಮದಲ್ಲಿ ಬ್ರೂಸ್‌ಪೇಟೆ ಸಿಪಿಐ ಮಹಾಂತೇಶ, ಗಾಂಧಿನಗರ ಠಾಣೆ ಸಿಪಿಐ ರವಿಚಂದ್ರ, ಪಿಎಸ್‌ಐ ಸವಿತಾ, ನೂರ್ ಜಹಾನ್, ಎಎಸ್‌ಐ ದೇವೇಂದ್ರಪ್ಪ, ಉಮೇಶ ರೆಡ್ಡಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಪಾಲ್ಗೊಂಡು ಜನರಲ್ಲಿ ಹೆಲ್ಮೆಟ್ ಮಹತ್ವ ಕುರಿತು ಅರಿವು ಮೂಡಿಸಿದರು.

ಶಾಲಾ-ಕಾಲೇಜುಗಳಲ್ಲಿ ಜಾಗೃತಿ:

ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದ್ದು ಎಲ್ಲ ಕಾಲೇಜುಗಳಿಗೆ ನೊಟೀಸ್ ಜಾರಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳು ಹೆಲ್ಮೆಟ್ ಇಲ್ಲದೆ ವೇಗವಾಗಿ ವಾಹನ ಚಲಾಯಿಸುವುದು ಕಂಡು ಬಂದಿದೆ. ಇದನ್ನು ತಡೆಯಬೇಕಾದ ಅಗತ್ಯವಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ತಿಳಿಸಿದರು.

ಕನ್ನಡಪ್ರಭ ಜೊತೆ ಮಾತನಾಡಿದ ಅವರು, ಕಾನೂನು ಪ್ರಕಾರ ಪ್ರತಿಯೊಬ್ಬ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯವಿದೆ. ಜನರ ಜೀವ ಸುರಕ್ಷತೆ ಮೊದಲ ಆದ್ಯತೆಯಾಗಬೇಕು. ಈ ಸಂಬಂಧ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಹೆಲ್ಮೆಟ್ ಬಳಕೆ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದರು. ಆರಂಭ ಶೂರತ್ವ ಆಗಬಾರದು

ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಪೊಲೀಸ್ ನಿಲುವನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ. ಬಳ್ಳಾರಿಯಲ್ಲಿ ಅಪಘಾತದಿಂದ ಸಾವಿಗೀಡಾಗುತ್ತಿರುವ ಸಂಖ್ಯೆ ನೋಡಿದರೆ ಭಯ ಮೂಡಿಸುತ್ತಿದೆ. ತಲೆಗೆ ಪೆಟ್ಟುಬಿದ್ದು ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಹೀಗಾಗಿ ಹೆಲ್ಮೆಟ್ ಕಡ್ಡಾಯ ಒಳ್ಳೆಯದ್ದೇ. ಆದರೆ, ಪೊಲೀಸನವರು ಆರಂಭ ಶೂರತ್ವ ತೋರಿಸಬಾರದು. ಈ ಹಿಂದೆಯೂ ಹೆಲ್ಮೆಟ್ ಕಡ್ಡಾಯ ಎಂದರು. ಬಳಿಕ ನಿರ್ಲಕ್ಷ್ಯಿಸಿದರು. ಪೊಲೀಸರು ಹೆಲ್ಮೆಟ್ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದು ಬಳ್ಳಾರಿ ಜನರು ಅಭಿಪ್ರಾಯಪಟ್ಟಿದ್ದಾರೆ.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ