ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಹೆಲ್ಪ್‌ ಡೆಸ್ಕ್‌ ಆರಂಭ

KannadaprabhaNewsNetwork | Published : Apr 27, 2025 1:48 AM

ಸಾರಾಂಶ

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರು ಶುಕ್ರವಾರ ಈ ಕೇಂದ್ರವನ್ನು ಉದ್ಘಾಟಿಸಿದರು.ಸಾರ್ವಜನಿಕರಿಗೆ ತಮ್ಮ ಪ್ರಕರಣದ ಸ್ಥಿತಿ, ವಿಚಾರಣೆಯ ಮುಂದಿನ ದಿನಾಂಕ ಮತ್ತು ಇತರ ವಿವರಗಳ ಕುರಿತು ಈ ಹೆಲ್ಪ್‌ ಡೆಸ್ಕ್‌ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

ಸಾರ್ವಜನಿಕರಿಗೆ ತಮ್ಮ ಪ್ರಕರಣದ ಕುರಿತು ಮಾಹಿತಿ, ವಿವಿಧ ಕಾನೂನು ಸೇವೆಗಳು ಇಲ್ಲಿ ಲಭ್ಯ

ಕನ್ನಡಪ್ರಭ ವಾರ್ತೆ ಮಂಗಳೂರು

ಸಾರ್ವಜನಿಕರಿಗೆ ಕಾನೂನು ಸೇವೆ, ಕಾನೂನು ಪ್ರಕ್ರಿಯೆಗಳ ಮಾಹಿತಿ ಒದಗಿಸಲು ಮಂಗಳೂರಿನ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಇ-ಸೇವಾ ಕೇಂದ್ರ/ ಹೆಲ್ಪ್‌ ಡೆಸ್ಕ್‌ ಮತ್ತು ವಿಸಿ ಕ್ಯಾಬಿನ್ ಸ್ಥಾಪಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರು ಶುಕ್ರವಾರ ಈ ಕೇಂದ್ರವನ್ನು ಉದ್ಘಾಟಿಸಿದರು.ಸಾರ್ವಜನಿಕರಿಗೆ ತಮ್ಮ ಪ್ರಕರಣದ ಸ್ಥಿತಿ, ವಿಚಾರಣೆಯ ಮುಂದಿನ ದಿನಾಂಕ ಮತ್ತು ಇತರ ವಿವರಗಳ ಕುರಿತು ಈ ಹೆಲ್ಪ್‌ ಡೆಸ್ಕ್‌ನಲ್ಲಿ ಮಾಹಿತಿ ಪಡೆದುಕೊಳ್ಳಬಹುದು.

ಇತರ ಸೇವೆಗಳು:

ಇ-ಫೈಲಿಂಗ್‌ನ್ನು ಉತ್ತೇಜಿಸಲು ದಾಖಲೆಗಳನ್ನು ಸ್ಕಾನ್ ಮಾಡುವ ಬಗ್ಗೆ, ಇ-ಸಹಿಗಳನ್ನು ಹಾಕುವ ಬಗ್ಗೆ ಮತ್ತು ಆ ದಾಖಲೆಗಳನ್ನು ಇ-ಫೈಲಿಂಗ್ ಜಾಲತಾಣದಲ್ಲಿ ಅಪ್ಲೋಡ್ ಮಾಡುವ ಬಗ್ಗೆ ವಿವರಿಸುವುದು. ಇ-ಪಾವತಿ ಪೋರ್ಟಲ್ ಮೂಲಕ ನ್ಯಾಯಾಲಯದ ಶುಲ್ಕಗಳನ್ನು ಪಾವತಿಸುವ ವಿಧಾನವನ್ನು ತಿಳಿಸುವುದು ಮತ್ತು ಸಹಾಯ ಒದಗಿಸುವುದು.

ಆಂಡ್ರಾಯ್ಡ್‌ ಮತ್ತು ಐಒಎಸ್‌ಗಳಲ್ಲಿ ಇ-ಕೋರ್ಟ್ಸ್‌ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಸಿ ಬಳಸುವ ಬಗ್ಗೆ ಸಹಾಯ ಮಾಡುವುದು. ಡಿಜಿಟಲ್ ಆಧಾರ್ ಆಧಾರಿತ ಸಹಿ ಪಡೆಯಲು ಅರ್ಜಿ ಸಲ್ಲಿಸಲು ಮತ್ತು ಆ ಸೇವೆ ಪಡೆಯಲು ಸಹಾಯ ಒದಗಿಸುವುದು. ಕಾರಾಗೃಹದಲ್ಲಿರುವ ಸಂಬಂಧಿಕರನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಭೇಟಿ ಮಾಡಲು ವ್ಯವಸ್ಥೆ ಮಾಡುವುದು.

ನ್ಯಾಯಾಲಯಗಳಲ್ಲಿ ವಿಡಿಯೊ ಕಾನ್ಫರೆನ್ಸ್ ವಿಚಾರಣೆಯನ್ನು ಏರ್ಪಡಿಸುವ ಮತ್ತು ನಡೆಸುವ ವಿಧಾನವನ್ನು ವಿವರಿಸುವುದು. ಎಸ್‌ಎಂಎಸ್‌ ಸೇವೆ ಒದಗಿಸಲು ಸಿಐಎಸ್‌ ತಂತ್ರಾಂಶದಲ್ಲಿ ವಕೀಲರ ನೋಂದಣಿ ಮಾಡುವುದು. ನ್ಯಾಯಾಲಯಗಳ ಸ್ಥಳ ಮತ್ತು ಪ್ರಕರಣ ಪಟ್ಟಿಯ ಕುರಿತು ಮಾಹಿತಿ ಒದಗಿಸುವುದು. ರಜೆಯಲ್ಲಿರುವ ನ್ಯಾಯಾಧೀಶರ ಬಗ್ಗೆ ಮಾಹಿತಿ ಒದಗಿಸುವುದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಉಚಿತ ಕಾನೂನು ಸೇವೆಗಳನ್ನು ಹೇಗೆ ಪಡೆಯುವುದು ಎಂಬುದರ ಕುರಿತು ಮಾರ್ಗದರ್ಶನ ನೀಡುವುದು. ವರ್ಚುವಲ್ ನ್ಯಾಯಾಲಯದಲ್ಲಿ ಟ್ರಾಫಿಕ್ ಚಲನ್ ವಿಲೇವಾರಿ ಮಾಡಲು ಅನುಕೂಲ ಮಾಡುವುದು. ಇ-ಕೋರ್ಟ್ಸ್‌ ಯೋಜನೆಯಡಿ ಲಭ್ಯವಿರುವ ಸೇವೆಗಳಿಗೆ ಸಂಬಂಧಿಸಿದಂತೆ ಸಹಾಯ ಒದಗಿಸುವುದು ಇ-ಸೇವಾ ಕೇಂದ್ರ/ ಹೆಲ್ಪ್‌ ಡೆಸ್ಕ್‌ನ ಸೇವೆಗಳಾಗಿವೆ. ಸಾರ್ವಜನಿಕರಿಗೆ ಇದು ಅತ್ಯಂತ ಉಪಯೋಗಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಸಿ ಕ್ಯಾಬಿನ್‌ಗಳನ್ನು ರಾಜ್ಯ ಮತ್ತು ಹೊರ ರಾಜ್ಯಗಳ ವಿವಿಧ ನ್ಯಾಯಾಲಯಗಳ ನಡುವೆ ವಿಡಿಯೊ ಕಾನ್ಫರೆನ್ಸ್ ನಡೆಸಲು ಕೋರ್ಟ್ ಪಾಯಿಂಟ್ ಮತ್ತು ರಿಮೋಟ್ ಪಾಯಿಂಟ್ ಆಗಿ ಬಳಸಲಾಗುತ್ತದೆ.

ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಬಾರ್ ಎಸೋಸಿಯೇಷನ್ ​​ಅಧ್ಯಕ್ಷ ಎಚ್.ವಿ. ರಾಘವೇಂದ್ರ, ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್., 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಸಂಧ್ಯಾ ಮತ್ತಿತರರು ಇದ್ದರು.

Share this article