ಮೂಲ್ಕಿ: ಪ್ರೇಮಿಗಳ ದಿನಾಚರಣೆಯಂದು ಬಡ ಯುವ ಪ್ರೇಮಿಗಳಿಗೆ ಕಂಕಣ ಭಾಗ್ಯ ತೊಡಿಸಿದ ತೃಪ್ತಿ ಇದ್ದು ತಮ್ಮ ಸೇವಾಶ್ರಮದ ವತಿಯಿಂದ ಅಸಹಾಯಕರಿಗೆ ಸಹಾಯ ಹಸ್ತ, ಸಾಧಕರಿಗೆ ಗೌರವ, ಶಿಕ್ಷಣಕ್ಕೆ ಪ್ರೋತ್ಸಾಹ ಸಹಿತ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ ಎಂದು ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ಹೇಳಿದರು.ಪ್ರೇಮಿಗಳ ದಿನಾಚರಣೆಯಂದು ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ವತಿಯಿಂದ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದಲ್ಲಿ ಯುವ ಜೋಡಿ ಪ್ರೇಮಿಗಳಿಗೆ ಮದುವೆಯ ಭಾಗ್ಯವನ್ನು ಶಾಸ್ತ್ರೋಕ್ತ ರೀತಿಯಲ್ಲಿ ನಡೆಸಿ ಮಾತನಾಡಿದರು. ಪ್ರೇಮಿಗಳ ದಿನಾಚರಣೆಯಂದು ಯುವ ಪ್ರೇಮಿಗಳು ಶುಭ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು ತೀರಾ ಬಡತನದಲ್ಲಿರುವ ನೂತನ ವಧೂವರರ ಕುಟುಂಬಕ್ಕೆ ಸಹಾಯದ ಮೂಲಕ ಆಶ್ರಮದ ವತಿಯಿಂದ ಮದುವೆಯ ಸಂಪೂರ್ಣ ಖರ್ಚು ವೆಚ್ಚ ಭರಿಸಲಾಗಿದೆ ಎಂದು ಹೇಳಿದರು.ಶನಿವಾರ ಶಿಮಂತೂರು ಶ್ರೀ ಆದಿ ಜನಾರ್ಧನ ದೇವಸ್ಥಾನದಲ್ಲಿ ಕ್ಷೇತ್ರದ ಅರ್ಚಕರಾದ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆದು ರಾಯಚೂರು ನಿವಾಸಿಗಳಾದ ಶಿವಕುಮಾರ ಹಾಗೂ ರೂಪ ಮತ್ತು ಮುಲ್ಕಿ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ನಿವಾಸಿಗಳಾದ ಮಂಜುನಾಥ ಹಾಗೂ ನಾಗವೇಣಿ ದಂಪತಿ ಶುಭ ಲಗ್ನ ಮುಹೂರ್ತದಲ್ಲಿ ತಾಳಿ ಕಟ್ಟುವ ಮೂಲಕ ಹಸೆಮಣೆಗೆ ಏರಿ ಶಾಸ್ತ್ರೋಕ್ತ ರೀತಿಯಲ್ಲಿ ಮದುವೆ ಕಾರ್ಯಗಳು ಸಂಪನ್ನಗೊಂಡಿತು. ಮದುವೆಗೆ ಸಹಕಾರ ನೀಡಿದ ಶಿಮಂತೂರು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭ ಸೀತಾರಾಮ ಭಟ್ ಶಿಮಂತೂರು, ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶಿವರಾಮ್ ಸುವರ್ಣ, ಶಿಮಂತೂರು ಆದಿ ಜನಾರ್ದನ ಕ್ಷೇತ್ರದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ರೂಪಾ ವಿಷ್ಣುಮೂರ್ತಿ ಭಟ್, ಶಾಂತರಾಮ ಶೆಟ್ಟಿ ತೆಂಗಾಳಿ, ಶ್ರೀ ಚಂದ್ರಶೇಖರ ಸ್ವಾಮೀಜಿ ಆಶ್ರಮದ ಸಂಚಾಲಕರಾದ ಪುನೀತ್ ಕೃಷ್ಣ, ಭದ್ರತಾ ಸಿಬ್ಬಂದಿ ಮೋಹನ್ ನಾಯಕ್ ರಾಜು, ಕಿರಣ್ ಒಡೆಯರ್ ಮತ್ತಿತರರು ಉಪಸ್ಥಿತರಿದ್ದರು