ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಸದೆ ಪರಿಸರ ಸ್ನೇಹಿ ಮಾರ್ಗೋಪಾಯಗಳ ಬಗ್ಗೆ ತಿಳಿದುಕೊಂಡು ಮತ್ತಿತರರಿಗೂ ಅರಿವು ಮೂಡಿಸಲು ಜಿಲ್ಲೆಯ ಸಮಸ್ತ ನಾಗರೀಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್ ಮನವಿ ಮಾಡಿದರು.ಜಿಲ್ಲಾಡಳಿತ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಚಿಕ್ಕಬಳ್ಳಾಪುರ ವತಿಯಿಂದ ವಾಯು ಮಾಲಿನ್ಯ ನಿಯಂತ್ರಣ ಮಾಸಾಚರಣೆ ನವೆಂಬರ್ - 2024 ರ ಅಂಗವಾಗಿ ಸೋಮವಾರ ನಗರದ ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಾಹನಗಳಿಂದಾಗುವ ವಾಯುಮಾಲಿನ್ಯದ ವಿರುದ್ಧ ಸಮರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ಲಾಸ್ಟಿಕ್ ವಸ್ತು ಬಳಸಬೇಡಿಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಅಂಗಡಿ, ಮುಂಗಟ್ಟುಗಳಿಗೆ, ಪ್ಲಾಸ್ಟಿಕ್ ಮಾರಟಗಾರರ ಮಳಿಗೆಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಲಾಗುತ್ತಿದೆ. ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದು ಕಡಿಮೆ ಮಾಡಬೇಕು, ನಿಷೇದಿತ ಪ್ಲಾಸ್ಟಿಕ್ ಬಳಸಬಾರದು ಎಂದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಎ. ವಿವೇಕಾನಂದ ಮಾತನಾಡಿ, 18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವಂತಿಲ್ಲ, ಜಿಲ್ಲೆಯಲ್ಲಿ ವಾಯು ಮಾಲಿನ್ಯದ ದುಷ್ಪರಿಣಾಮಗಳ ಕುರಿತು ತಿಳಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಮಾಲಿನ್ಯದಿಂದ ಅನಾರೋಗ್ಯಹಿರಿಯ ಮೋಟಾರ್ ವಾಹನ ನೀರಿಕ್ಷರಾದ ನಾಗರಾಜ್ ನಾಯಕ್ ಅವರು ಮಾತನಾಡಿ, ವಾಯುಮಾಲಿನ್ಯವು ಹೃದಯರಕ್ತನಾಳದ ಕಾಯಿಲೆಗೆ ಮುಖ್ಯ ಕಾರಣವಾದ ಅಂಶವಾಗಿದೆ, ಹೃದ್ರೋಗ, ಮತ್ತು ಪಾರ್ಶ್ವವಾಯು, ಶ್ವಾಸಕೋಶದ ಕ್ಯಾನ್ಸರ್, ಕಡಿಮೆ ಉಸಿರಾಟದ ಸೋಂಕುಗಳು, ಟೈಪ್ 2 ಡಯಾಬಿಟಿಸ್ ಗೆ ಪೂರಕವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಮೋಟಾರ್ ವಾಹನ ನಿರೀಕ್ಷಕರಾದ ಅರುಣಾ, ಸೆಂಟ್ ಜೋಸೆಫ್ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲೆ ಹಾಗೂ ಬೋಧಕ, ಬೋಧಕೇತರ ವರ್ಗದವರು, ಪ್ರಾದೇಶಿಕ ಸಾರಿಗೆ ಇಲಾಖೆಯ ಆಡಳಿತ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.