ಅವಕಾಶ ವಂಚಿತ ಸಮುದಾಯಗಳ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಿ: ಪಲ್ಲವಿ ಜಿ

KannadaprabhaNewsNetwork |  
Published : Dec 10, 2024, 12:32 AM IST
ಸಭೆಯಲ್ಲಿ ಪಲ್ಲವಿ.ಜಿ ಮಾತನಾಡಿದರು. | Kannada Prabha

ಸಾರಾಂಶ

ಅಲೆಮಾರಿ ಸಮುದಾಯದವರಿಗೆ ನೆಲೆ ಸೇರಿದಂತೆ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪಲ್ಲವಿ ಜಿ. ಹೇಳಿದರು.

ಗದಗ: ಅವಕಾಶ ವಂಚಿತ ಪ.ಜಾ ಮತ್ತು ಪ.ಪಂ. ಅಲೆಮಾರಿ ಸಮದಾಯದವರಿಗೆ ಶಿಕ್ಷಣ, ಮೂಲಭೂತ ಸೌಲಭ್ಯ ಕಲ್ಪಿಸಿ ಸರ್ವತೋಮುಖ ಅಭಿವೃದ್ಧಿಗೆ ಇಲಾಖಾ ಅಧಿಕಾರಿಗಳು ವಿಶೇಷ ಕಾಳಜಿಯಿಂದ ಕಾರ್ಯ ಪ್ರವೃತ್ತರಾಗಬೇಕು ಎಂದು ಕರ್ನಾಟಕ ಪ.ಜಾ, ಪ.ಪಂ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ. ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ ಸಮಾಜ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಅನುಷ್ಠಾನ ಸಮಿತಿಯ ಜಂಟಿ ಸಭೆ, ಪ್ರಗತಿ ಪರಿಶಿಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಜಾ, ಪಪಂ ಅಲೆಮಾರಿ ಅಭಿವೃದ್ಧಿ ನಿಗಮ ಗದಗ ಜಿಲ್ಲೆಯಲ್ಲಿ ಡಿ. 7ರಿಂದ 9ರ ವರೆಗೆ ಮೂರು ದಿನಗಳ ಕಾಲ ಪ್ರವಾಸ ಕೈಗೊಂಡಿದ್ದು ಜಿಲ್ಲೆಯ ಅಲೆಮಾರಿ ಸಮುದಾಯದವರನ್ನು ಭೇಟಿ ಮಾಡಿದಾಗ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ಗ್ರಾಮದ ಘಂಟಿಚೋರ್ ಜನಾಂಗದವರಿಗೆ ಸ್ಮಶಾನ ಭೂಮಿ ಅಭಿವೃದ್ಧಿ, ನಿವೇಶನ ಸಮಸ್ಯೆ, ಜಾತಿ ಪ್ರಮಾಣ ಪತ್ರ, ನೂಲಿ ಚಂದಯ್ಯನವರ ಭವನ ಮಂಜೂರಾತಿ, ವಯಸ್ಕರ ಶಿಕ್ಷಣ ಕುರಿತು ಸಮಸ್ಯೆಗಳು ಕಂಡು ಬಂದಿದ್ದು ಹಾಗೂ ಲಕ್ಷ್ಮೇಶ್ವರ ಪಟ್ಟಣದ ಇಂದಿರಾ ನಗರದಲ್ಲಿ ಪ.ಜಾತಿಯ ಬುಡ್ಲ ಜಂಗಮ ಸಮುದಾಯದ ಕುಟುಂಬಗಳಿಗೆ ನಿವೇಶನ ಲಭ್ಯವಿದ್ದು ಮನೆ ಕಟ್ಟಿಸುವುದು, ಚೆನ್ನದಾಸರ ಸಮುದಾಯದ ಕುಟುಂಬಗಳಿಗೆ ನಿವೇಶನ, ಸುಡುಗಾಡ ಸಿದ್ಧರ ಸಮುದಾಯದವರಿಗೆ ನಿವೇಶನ ಒದಗಿಸುವ ಕುರಿತು ಸ್ಥಳೀಯ ಶಾಸಕರ ಗಮನಕ್ಕೆ ತರಲಾಗಿದೆ ಎಂದರು.

ಅಲೆಮಾರಿ ಸಮುದಾಯದವರಿಗೆ ನೆಲೆ ಸೇರಿದಂತೆ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ನಿವೇಶನ ಸಮಸ್ಯೆ ಇರುವವರಿಗೆ ಹತ್ತಿರದಲ್ಲಿರುವ ಸರ್ಕಾರಿ ಜಾಗವನ್ನು ಗುರುತಿಸಿ ನಿವೇಶನ ನೀಡಲಾಗುವುದು. ಈಗಾಗಲೇ ನಿವೇಶನ ಹೊಂದಿರುವವರಿಗೆ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗುವುದು. ಜಾತಿ ಪ್ರಮಾಣ ಪತ್ರದ ಸಮಸ್ಯೆ ಕುರಿತು ಈಗಾಗಲೇ ಸಭೆಗಳು ಜರುಗಿದ್ದು, ತಾಂತ್ರಿಕ ತೊಂದರೆಗಳನ್ನು ಸರಿಪಡಿಸಿ ಸರಿಯಾದ ಮಾರ್ಗ ಕಂಡುಕೊಳ್ಳಲು ತಹಸೀಲ್ದಾರರಿಗೆ ಸೂಚಿಸಲಾಗುವುದು ಎಂದರು.ನಂತರ ಮಾತನಾಡಿದ ನಿಗಮದ ಅಧ್ಯಕ್ಷರು ಜಿಲ್ಲೆ ವಿವಿಧೆಡೆ ಇರುವ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸಮಸ್ಯೆಗಳಿದ್ದರೆ ಸರಿಪಡಿಸುವುದಾಗಿ ತಿಳಿಸಿದರು.

ನಿಗಮದ ಅಧ್ಯಕ್ಷರು ಮಾತನಾಡಿ, ಮುಂಡರಗಿ ತಾಲೂಕು ಕೊರ್ಲಹಳ್ಳಿ ಗ್ರಾಮದ ಶಿಳ್ಳೇಕ್ಯಾತ ಸಮುದಾಯದವರು ಮೀನುಗಾರಿಕೆ ಕೆಲಸ ನಿರ್ವಹಿಸುತ್ತಿದ್ದು ಸರ್ಕಾರದಿಂದ ಅವರಿಗೆ ವಿಮೆ ಸೌಲಭ್ಯ ದೊರೆಯುವಂತಾಗಬೇಕು ಎಂದು ತಿಳಿಸಿದರು.

ಜಿಪಂ ಸಿಇಒ ಭರತ್ .ಎಸ್. ಪ್ರತಿಕ್ರಿಯಿಸಿ ಮೀನುಗಾರಿಕೆ ಮಾಡುವವರಿಗೆ ಈಗಾಗಲೇ ಮೀನುಗಾರಿಕೆ ಇಲಾಖೆಯಿಂದ ವಿಮೆಯ ಸೌಲಭ್ಯವಿದ್ದು, ಕನಿಷ್ಟ ವಂತಿಕೆಯನ್ನು ಪಾವತಿಸಿ ವಿಮೆಯನ್ನು ಪಡೆಯಬಹುದಾಗಿದೆ ಎಂದರು.

ಸರ್ಕಾರದ ಹಾಗೂ ಸಾರ್ವಜನಿಕರ ನಡುವೆ ಕೊಂಡಿಯಂತೆ ವಿವಿಧ ಇಲಾಖೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದು ಸಮಾಜದ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಆ ಸಮುದಾಯವರಿಗೆ ಶಿಕ್ಷಣ ಒದಗಿಸುವ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧ್ಯಕ್ಷೆ ಪಲ್ಲವಿ ತಿಳಿಸಿದರು.

ಈ ವೇಳೆ ನಿಗಮದ ವಿಶೇಷ ಅಧಿಕಾರಿ ಆನಂದ ಏಕಲವ್ಯ, ನಗರಸಭೆ‌‌ ನಾಮನಿರ್ದೇಶಿತ ಸದಸ್ಯ ದುರ್ಗೇಶ ವಿಭೂತಿ, ಜಿಲ್ಲಾ ಅಲೆಮಾರಿ ಅನುಷ್ಠಾನ ಸಮಿತಿ ನಾಮನಿರ್ದೇಶಿತ ಸದಸ್ಯ ಹುಲ್ಲೇಶ ಭಜಂತ್ರಿ, ಹುಸೇನಪ್ಪಾ ಗಡ್ಡದವರ, ಶಿವರಾಜ ಕಡೆಮನಿ, ಲಕ್ಷ್ಮಣ ಶೇಷಗಿರಿ, ಮೇನಕಾ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ, ಡಿಡಿಎಲ್ ಆರ್ ರುದ್ರಗೌಡ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಪದ್ಮಾವತಿ ಜಿ, ಡಿಯುಡಿಸಿ ಯೋಜನಾ ನಿರ್ದೇಶಕ ಬಸನಗೌಡ ಕೊಟೂರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ 33 ಹಳ್ಳಿಗಳಲ್ಲಿ ಪ್ರತಿ ದಿನ ಸಂಜೆ 7- 9 ಗಂಟೆವರೆಗೆ ಮೊಬೈಲ್‌, ಟಿವಿ ಬಂದ್‌
ಗೃಹಲಕ್ಷ್ಮೀಯರಿಗೆ ಗುಡ್ ನ್ಯೂಸ್ ಕೊಟ್ರು ಸಚಿವೆ ಲಕ್ಷ್ಮೀ