ಕನ್ನಡಪ್ರಭ ವಾರ್ತೆ ರಾಮನಗರ
ನಗರಸಭೆ ಸಭಾಂಗಣದಲ್ಲಿ ಕ್ರಮಬದ್ಧವಲ್ಲದ ಸ್ವತ್ತುಗಳಿಗೆ ನಮೂನೆ 3/ ಎ ವಿತರಿಸುವ ಅಭಿಯಾನಕ್ಕೆ ಅರ್ಜಿ ವಿತರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಎಲ್ಲ ಆಸ್ತಿಗಳಿಗೆ ಇ- ಖಾತಾ ವಿತರಣೆ ಮಾಡುವುದರಿಂದ ರಾಮನಗರ ನಗರಸಭೆ ಇ- ಖಾತಾ ಮುಕ್ತ ನಗರವಾಗುವುದರ ಜೊತೆಗೆ ತೆರಿಗೆ ರೂಪದಲ್ಲಿ ಆದಾಯವೂ ಬರಲಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ನೊಂದ ಜನರು ತಮ್ಮ ಆಸ್ತಿಗಳಿಗೆ ನಮೂನೆ 3/ ಎ ಇ- ಖಾತಾ ಮಾಡಿಸಿಕೊಳ್ಳಲು ಒಳ್ಳೆಯ ಅವಕಾಶ ನೀಡಿದೆ. ಈ ಅಭಿಯಾನಕ್ಕೆ ರಾಜ್ಯಾದ್ಯಂತ ಚಾಲನೆ ನೀಡಿದ್ದು, ನಾನೂ ಸಹ ನನ್ನ ಕ್ಷೇತ್ರದಲ್ಲಿ ಸಂತೋಷದಿಂದ ಚಾಲನೆ ನೀಡಿದ್ದೇನೆ. ಒದಗಿಸಬೇಕಾದ ಅಗತ್ಯ ದಾಖಲಾತಿಗಳನ್ನು ಸರಳೀಕರಣ ಮಾಡಿರುವ ಈ ಕಾರ್ಯಕ್ರಮಕ್ಕೆ ಬೆಲೆ ಕಟ್ಟಲಾಗದು ಎಂದರು.ಇ- ಖಾತಾ ಆಗದ ಎಷ್ಟೋ ಸ್ವತ್ತುಗಳ ಮಾಲೀಕರು ಹಲವು ವರ್ಷಗಳಿಂದ ದೂರುಗಳನ್ನು ಸಲ್ಲಿಸುತ್ತಲೇ ಬಂದಿದ್ದರು. ಆ ದೂರುಗಳಿಂದಾಗಿ ನಾವು ನಿದ್ದೆ ಮಾಡಲಾಗದ ಪರಿಸ್ಥಿತಿ ಇತ್ತು. ಇದೀಗ ಸರ್ಕಾರ ಜನಪರ ತೀರ್ಮಾನ ಕೈಗೊಂಡಿದೆ. ಸಿಕ್ಕಿರುವ ಸದಾವಕಾಶವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ 3/ ಎ ಇ- ಖಾತಾ ವಿತರಿಸುವ ನಿರ್ಧಾರ ಕೈಗೊಂಡಿರುವುದು ಐತಿಹಾಸಿಕವಾದದ್ದು, ಇಂತಹ ಕಾರ್ಯಕ್ರಮ ದೇಶದ ಬೇರೆ ಯಾವುದೇ ರಾಜ್ಯಗಳಲ್ಲೂ ಇಲ್ಲ. ಆದ್ದರಿಂದ ಮೂರು ತಿಂಗಳೊಳಗೆ ಅಭಿಯಾನವನ್ನು ಯಶಸ್ವಿಗೊಳಿಸಬೇಕು. ಯಾವ ಕಾರಣಕ್ಕೂ ಸರ್ಕಾರ ದಿನಾಂಕವನ್ನು ವಿಸ್ತರಣೆ ಮಾಡುವುದಿಲ್ಲ ಎಂದು ಇಕ್ಬಾಲ್ ಹುಸೇನ್ ಎಚ್ಚರಿಸಿದರು.
ನಗರಸಭೆ ಆಯುಕ್ತ ಡಾ.ಜಯಣ್ಣ ಮಾತನಾಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ , ನಗರಸಭೆ ಉಪಾಧ್ಯಕ್ಷೆ ಆಯಿಷಾಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ಬಿ.ಸಿ.ಪಾರ್ವತಮ್ಮ, ಮುತ್ತುರಾಜು, ಸೋಮಶೇಖರ್, ಗಿರಿಜಮ್ಮ, ವಿಜಯಕುಮಾರಿ, ಅಜ್ಮತ್ , ಬೈರೇಗೌಡ, ಸಮದ್, ಗಿರಿಜಮ್ಮ ಅಧಿಕಾರಿಗಳಾದ ರೇಖಾ, ನಿರ್ಮಲಾ, ತಸ್ಮೀಮ್, ನಟರಾಜೇಗೌಡ, ಕಿರಣ್, ವೇದಾವತಿ, ನಾಗರತ್ನ, ಲಕ್ಷ್ಮೀ ಮತ್ತಿತರಿದ್ದರು.
ನಗರಸಭೆ ವ್ಯಾಪ್ತಿಯಲ್ಲಿ 13 ಸಾವಿರ ನಿವೇಶನ ರಹಿತರು ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಸಲ್ಲಿಕೆಯಾಗಿರುವ ಅರ್ಜಿಗಳನ್ನು ಪರಿಗಣಿಸಿ ವಾರ್ಡ್ ವಾರು ಸಮಿತಿ ರಚಿಸಿ ಅರ್ಜಿಗಳ ವಿಲೇವಾರಿಗೆ ಕ್ರಮ ವಹಿಸಲಾಗುವುದು. ಇನ್ನೂ 7 ಎಕರೆ ಪ್ರದೇಶದಲ್ಲಿ 884 ಸ್ಲಂ ಬೋರ್ಡ್ ವಸತಿ ಮನೆಗಳನ್ನು ನಿರ್ಮಾಣ ಮಾಡಲಾಗುವುದು.