ಕನಕಗಿರಿ: ೪ನೇ ಬಾರಿ ಕನಕಗಿರಿ ಉತ್ಸವ ವೈಭವದಿಂದ ನಡೆಯುತ್ತಿದ್ದು, ಜನೋತ್ಸವವನ್ನಾಗಿಸಲು ಪಕ್ಷಭೇದ ಮರೆತು ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಎಪಿಎಂಸಿ ಸಮುದಾಯ ಭವನದಲ್ಲಿ ಕನಕಗಿರಿ ಉತ್ಸವ ನಿಮಿತ್ತ ಶನಿವಾರ ಸಂಜೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಶನಿವಾರ ಮಾತನಾಡಿದರು.ಮಾ.೧, ೨ರಂದು ಉತ್ಸವಕ್ಕೆ ಆಗಮಿಸುವ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಜಿಲ್ಲಾಢಳಿತ ಮಾಡಿಕೊಳ್ಳುತ್ತಿದೆ. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ಉತ್ಸವ ಬಂದವರಿಗೆ ಊಟ, ವಸತಿ ವ್ಯವಸ್ಥೆ ಮತ್ತಿತರೆ ಸೌಲಭ್ಯಕ್ಕೆ ಸ್ಥಳೀಯರು ಸಹಕರಿಸಬೇಕಾಗಿದೆ. ಕನಕಗಿರಿ ಉತ್ಸವ ಎಂದಾಕ್ಷಣ ಜನಸಾಗರವೇ ಹರಿದು ಬರುತ್ತದೆ. ಬೇರೆ-ಬೇರೆ ಉತ್ಸವಗಳಿಗೆ ಜನ ಸೇರುವುದು ಕಷ್ಟ. ನಮ್ಮಲ್ಲಿ ಉತ್ಸವಕ್ಕೆ ಲಕ್ಷಕ್ಕೂ ಅಧಿಕ ಜನ ಸೇರಲಿದ್ದಾರೆ ಎಂದು ವಿಶ್ವಾಸಪಟ್ಟರು.ಜನರಿಗೆ ಸಮಸ್ಯೆಯಾಗದಂತೆ ಸೌಲಭ್ಯ ಕಲ್ಪಿಸಲಾಗುವುದು. ಉತ್ಸವದ ಎರಡೂ ದಿನಗಳು ೩೦ ಬಸ್ ಬಿಡಲಾಗುವುದು ಎಂದರು.ಉತ್ಸವಕ್ಕೆ ಸಿಎಂ ಚಾಲನೆ:ಕನಕಗಿರಿ ಉತ್ಸವವನ್ನು ಮಾ.೨ರಂದು ಸಂಜೆ ೬.೩೦ಕ್ಕೆ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಮಾ.೩ರಂದು ನಡೆಯುವ ಸಮಾರೋಪ ಸಮಾರಂಭಕ್ಕೆ ನಟ ರವಿಚಂದ್ರನ್ ಆಗಮಿಸಲಿದ್ದಾರೆ. ಕೊಪ್ಪಳದ ಗವಿಸಿದ್ದೇಶ್ವರ, ಕನಕಗಿರಿ ಡಾ.ಚೆನ್ನಮಲ್ಲಸ್ವಾಮೀಜಿ, ಸುಳೇಕಲ್‌ನ ಭುವನೇಶ್ವರಶ್ರೀ, ಹುಲಿಹೈದರ ಸಂಸ್ಥಾನದ ರಾಜವಂಶಸ್ಥ ರಾಜಾ ನವೀನಚಂದ್ರ ನಾಯಕರನ್ನು ಆಹ್ವಾನಿಸಲಾಗುವುದು ಎಂದರು.ಯೋಧೆ ಲಕ್ಷ್ಮೀಗೆ ಸಿಎಂ ಅವರಿಂದ ಗೌರವ:ತಾಲೂಕಿನ ಕಾಟಾಪುರ ಗ್ರಾಮದ ಲಕ್ಷ್ಮೀ ಪಚ್ಚೇರ ಸಶಸ್ತ್ರ ಸೀಮಾ ಬಲದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯೋಧೆ ಜ.೨೬ರಂದು ಗಣರಾಜ್ಯ ದಿನದಂದು ದೆಹಲಿಯ ಕರ್ತವ್ಯ ಪಥದಲ್ಲಿ ಬೈಕ್ ಸಾಹಸ ಪ್ರದರ್ಶಿಸಿದ್ದರು. ಈ ಹಿನ್ನೆಲೆಯಲ್ಲಿ ಸಿಎಂ ಗೌರವಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.ಮಾ.೨ಕ್ಕೆ ಅಂಬಾರಿ ಮೆರವಣಿಗೆ:ಮಾ.೨ರಂದು ಬೆಳಿಗ್ಗೆ ಮೇಲುಗಡೆ ಅಗಸಿಯಿಂದ ರಾಜಬೀದಿ ಮೂಲಕ ಅಂಬಾರಿಯಲ್ಲಿ ಕನಕಾಚಲಪತಿ, ವಾಹನದಲ್ಲಿ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ನಡೆಯಲಿದೆ. ಸುಮಾರು ೩೭ ಕಲಾ ತಂಡಗಳು ಭಾಗವಹಿಸಲಿವೆ. ಮಾ.೩ರಂದು ಬೆಳಿಗ್ಗೆ ಎತ್ತಿನಬಂಡಿ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.ಫಲಪುಷ್ಪ ಪ್ರದರ್ಶನ, ಪುಸ್ತಕ ಪ್ರದರ್ಶನ, ಕನಕಾಚಲ ದೇವಸ್ಥಾನದ ಪಕ್ಕದ ಪಂಡಿತ ಪುಟ್ಟರಾಜ ಗವಾಯಿ ವೇದಿಕೆಯಲ್ಲಿ ಕವಿಗೋಷ್ಠಿ, ವಿಚಾರ ಸಂಕಿರಣ ನಡೆಯಲಿವೆ ಎಂದರು.ತಲಾ ಒಬ್ಬರಿಗೆ ₹೪೫೦೦ಯಂತೆ ದಿನಕ್ಕೆ ಕನಿಷ್ಠ ೨೫೦ ಜನ ಹೆಲಿಕಾಪ್ಟರ್‌ನಲ್ಲಿ ಸಂಚರಿಸಬೇಕೆಂದು ಏಜೆನ್ಸಿಯವರು ಹೇಳುತ್ತಿದ್ದು, ಅಷ್ಟು ಹಣ ವ್ಯಯಿಸಿ ತೆರಳಲು ಜನತೆ ಹಿಂದೇಟು ಹಾಕಲಿದ್ದಾರೆ. ಇದರಿಂದಾಗಿ ಹೆಲಿಪ್ಯಾಡ್ ಮೂಲಕ ಸ್ಮಾರಕ ವೀಕ್ಷಣೆ ರದ್ದುಪಡಿಸುವುದು ಅನಿವಾರ್ಯ. ಸಿಎಂ ಬರುವ ಹೆಲಿಕಾಪ್ಟರ್‌ಗೆ ಮಾತ್ರ ಹೆಲಿಪ್ಯಾಡ್ ಸ್ಥಳ ನಿರ್ಮಾಣ ಮಾಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.ಎಡಿಸಿ ಸಾವಿತ್ರಿ ಕಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್, ಆಹಾರ-ನಾಗರಿಕ ಸರಬರಾಜು ಇಲಾಖೆಯ ಡಿಡಿ ಚಿದಾನಂದಪ್ಪ, ತೋಟಗಾರಿಕಾ ಇಲಾಖೆ ಡಿಡಿ ಕೃಷ್ಣ ಉಕ್ಕುಂದ, ತಹಸೀಲ್ದಾರ್ ವಿಶ್ವನಾಥ ಮುರುಡಿ ಇತರರಿದ್ದರು.