ರಾಮನಗರ: ಯುವಪೀಳಿಗೆ ಜಾನಪದ ಕಲೆಯನ್ನು ಉಳಿಸುವಂತಹ ಮನೋಭಾವ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದ ದಿನಗಳಲ್ಲಿ ಸಂಪೂರ್ಣವಾಗಿ ನೆಲಕಚ್ಚುತ್ತದೆ ಅಥವಾ ತೆರೆಮರೆಗೆ ಸರಿಯುತ್ತದೆ ಎಂದು ಸಾಹಿತಿ ಡಾ.ವಿಜಯ್ ರಾಂಪುರ ಹೇಳಿದರು.
ಗ್ರಾಮೀಣ ಭಾಗದ ಸಂಪ್ರದಾಯ ಆಚರಣೆ ಮಾಡುವಾಗ ಹೆಚ್ಚು ಪದಗಳನ್ನು ಕೇಳಿ ಬೆಳೆದಿದ್ದೇವೆ, ಗದ್ದೆ ನಾಟಿ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸೋಬಾನೆ ಪದಗಳನ್ನು ಕೇಳಿ ಬೆಳೆದಿದ್ದೇವೆ. ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಎಷ್ಟರಮಟ್ಟಿಗೆ ಕುಸಿತವನ್ನು ಕಾಣುತ್ತಿದ್ದೇವೆ ಎಂದು ಹೇಳಿದರು.
ಚುಂಚನಗಿರಿ ಅರ್ಚಕರಹಳ್ಳಿ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಭೈರವೈಕ್ಯ ಡಾ. ಶ್ರೀಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರು ಹುಟ್ಟಿದ ಬಾನಂದೂರು ನಮಗೆ ಕಾಶಿ ಇದ್ದಂತೆ. ಈ ಪುಣ್ಯ ಭೂಮಿಯಲ್ಲಿ ಬಾನಂದೂರು ಬೋರಮ್ಮನವರು ಹುಟ್ಟಿದ್ದಾರೆ. ಸ್ವಾಮೀಜಿಯವರಿಗೆ ಎಷ್ಟು ಗೌರವ ಕೊಡುತ್ತೇವೂ, ಅಷ್ಟೇ ಗೌರವವನ್ನು ಬಾನಂದೂರು ಬೋರಮ್ಮನವರಿಗೆ, ಕಲೆಗೆ ಕೊಡುತ್ತೇವೆ ಎಂದರು.ಕಲೆಯನ್ನು ಉಳಿಸಿ ಬೆಳೆಸುವುದಕ್ಕೆ ಅನೇಕ ಮಾರ್ಗಗಳಿವೆ. ಜಾನಪದ ಲೋಕ ನಮಗೆ ಒಳ್ಳೆಯ ವಾತಾವರಣವನ್ನು ಮತ್ತು ವಿಚಾರವನ್ನು ಕೊಟ್ಟಿದೆ, ಬಣ್ಣದ ಪ್ರಪಂಚ ನಮಗೆ ಬೇರೆ ಬೇರೆ ರೀತಿ ಕಾಣಿಸುತ್ತಿದೆ. ಅಧುನಿಕ ತಂತ್ರಜ್ಞಾನ ಒಂದು ಕಡೆಯಾದರೆ ನಮ್ಮ ಆಚಾರ ವಿಚಾರವನ್ನು ನಾವು ಬದಲಾವಣೆ ಮಾಡಿಕೊಂಡಿದ್ದೇವೆ. ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಆಶೀರ್ವಚನ ನೀಡಿದರು.
ಶರತ್ ಮೆಮೋರಿಯಲ್ ಶಾಲೆ ಸಂಸ್ಥಾಪಕ ಕಾರ್ಯದರ್ಶಿ ಎನ್.ರಾಜೇಶ್ವರಿ ಮಾತನಾಡಿ, ಈಗಿನ ತಲೆಮಾರಿನ ಮಕ್ಕಳಿಗೆ ಜಾನಪದ ಕಲೆ ಮತ್ತು ಕಲಾವಿದರ ಬಗ್ಗೆ ಗೊತ್ತಿಲ್ಲ. ಸಿನಿಮಾ ಹಾಡನ್ನು ಹಾಡುತ್ತಾರೆ. ಆದರೆ ಜನಪದ ಹಾಡುಗಳು ಗೊತ್ತೇ ಇಲ್ಲ, ಜಾನಪದ ಲೋಕಕ್ಕೆ ಬಂದರೆ ಕಲೆಗಳ ಪರಿಚಯವಾಗುತ್ತದೆ ಎಂದು ಹೇಳಿದರು.ಗೌರವ ಸ್ವೀಕರಿಸಿದ ಕಲಾವಿದೆ ಬೋರಮ್ಮ ಮತ್ತು ತಂಡದವರು ಸುಮಧುರವಾದ ಗೀತೆಗಳನ್ನು ಹಾಡಿದರು. ಮದುವೆ ಶಾಸ್ತ್ರದ ಆಚರಣೆಯಲ್ಲಿ ಬರುವ ಇಳ್ಳೇವುಶಾಸ್ತ್ರ, ಎಣ್ಣೆಶಾಸ್ತ್ರ, ಅಕ್ಕಿ ಇಕ್ಕೋಶಾಸ್ತ್ರ, ಕಂಕಣಕಟ್ಟೊ ಶಾಸ್ತ್ರ, ಜರಿಯೋಪದ, ಧಾರೆಪದ, ಫಲ್ದನ್ನಶಾಸ್ತ್ರ, ಮಡಲಕ್ಕಿಶಾಸ್ತ್ರ ಸಂಪ್ರದಾಯದ ಸೋಬಾನೆ ಗೀತೆಗಳನ್ನು ಹಾಡಿದರು.
ಸಂವಾದದಲ್ಲಿ ತಮ್ಮ ಕುಟುಂಬ, ಗಾಯನ ಕಲಿಕೆ, ತಾವು ನೀಡಿದ ಕಾರ್ಯಕ್ರಮಗಳನ್ನು ಮೆಲುಕು ಹಾಕಿದರು. ಜಾನಪದ ಲೋಕದ ಕಾರ್ಯನಿರ್ವಹಣಾಧಿಕಾರಿ ಸರಸವಾಣಿ, ಡಾ.ಕೆ.ಎಸ್.ಸಂದೀಪ್ , ಡಾ.ಯು.ಎಂ.ರವಿ ಉಪಸ್ಥಿತರಿದ್ದರು.15ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಜಾನಪದ ಲೋಕದಲ್ಲಿ ನಡೆದ ಲೋಕಸಿರಿ ತಿಂಗಳ ಅತಿಥಿ-112 ಕಾರ್ಯಕ್ರಮದಲ್ಲಿ ಬೋರಮ್ಮ ಅವರನ್ನು ಸನ್ಮಾನಿಸಲಾಯಿತು.------------------------------