ಸರ್ಕಾರಿ ಶಾಲೆ ಉಳಿಸಿ ಆಂದೋಲನಕ್ಕೆ ಸಹಕರಿಸಿ

KannadaprabhaNewsNetwork | Published : Dec 19, 2024 12:33 AM

ಸಾರಾಂಶ

ಕನಕಪುರ: ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬುನಾದಿ ಹಾಕುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪೋಷಕರು, ಗ್ರಾಮಸ್ಥರು ಸಹಕರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ಹೇಳಿದರು.

ಕನಕಪುರ: ಪ್ರಸ್ತುತ ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಬಡ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಬುನಾದಿ ಹಾಕುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪೋಷಕರು, ಗ್ರಾಮಸ್ಥರು ಸಹಕರಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಕಾರ್ಯದರ್ಶಿ ನಲ್ಲಹಳ್ಳಿ ಶ್ರೀನಿವಾಸ್ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ನ್ಯೂ ಚಿಗುರು ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಕಾರ್ಯಕ್ರಮದಲ್ಲಿ ಹೊಸದುರ್ಗ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು.

ಸರ್ಕಾರಿ ಶಾಲೆಗಳನ್ನು ಮುಚ್ಚುವುದರಿಂದ ಮುಂದೊಂದು ದಿನ ಖಾಸಗಿ ಶಾಲೆಗಳಿಗೆ ಶುಲ್ಕಕಟ್ಟಲಾಗದೆ ಬಡ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುವ ಪರಿಸ್ಥಿತಿ ಎದುರಾಗುತ್ತದೆ. ಶಿಕ್ಷಣವಿಲ್ಲದೆ ಯಾವ ವ್ಯಕ್ತಿಯೂ ಸಮಾಜದಲ್ಲಿ ಯೋಗ್ಯವಂತನಾಗಿ ಬದುಕಲು ಸಾಧ್ಯವಿಲ್ಲ. ಇದರ ಪರಿಣಾಮ ಬಡತನ, ಅನಕ್ಷರತೆ, ಅಜ್ಞಾನ, ಅಂಧಕಾರ, ಮೂಢನಂಬಿಕೆ ಗಳು ತಾಂಡವವಾಡುತ್ತಿದೆ. ಸಮಾನ ಶಿಕ್ಷಣ ಕಲ್ಪಿಸಬೇಕಾದ ಸರ್ಕಾರ ಆಳುವ ರಾಜಕಾರಣಿಗಳೆ ಸ್ವಾರ್ಥಕ್ಕಾಗಿ ಖಾಸಗಿ ಶಾಲೆಗಳನ್ನು ತೆರೆದು, ಸರ್ಕಾರಿ ಶಾಲೆಗಳನ್ನು ಮುಚ್ಚುವ ಹುನ್ನಾರ ನಡೆಸುತ್ತಿದ್ದು, ಇದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು ಎಂದರು. ಮೂರು ದಿನಗಳ ಹಿಂದೆ ಸಾತನೂರಿನ ಖಾಸಗಿ ಶಾಲೆಯೊಂದರಲ್ಲಿ ಶಾಲಾ ಶುಲ್ಕವನ್ನು ಕಟ್ಟಿಲ್ಲವೆಂದು ಮಗುವನ್ನು ಶಾಲೆಯಿಂದ ಹೊರ ಹಾಕಿದ್ದ ಘಟನೆ ಪತ್ರಿಕೆಗಳಲ್ಲಿ ನಾವು ಕಂಡಿದ್ದೇವೆ, ಇಂತಹ ಪ್ರಕರಣಗಳು ಸರ್ಕಾರಿ ಶಾಲೆಗಳಲ್ಲಿ ನಡೆಯುವುದಿಲ್ಲ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಎಚ್ಚೆತ್ತುಕೊಳ್ಳಬೇಕು. ಶಾಲೆಗಳಲ್ಲಿ ಸಮರ್ಪಕ ಶಿಕ್ಷಕರನ್ನು ನೇಮಿಸಿ ಗುಣಮಟ್ಟದ ಶಿಕ್ಷಣ ನೀಡಿ ಬಡ ಮಕ್ಕಳ ಭವಿಷ್ಯದ ಕಡೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.

ನ್ಯೂ ಚಿಗುರು ಚಾರಿಟಬಲ್ ಟ್ರಸ್ಟ್ ಕೋಡಿಹಳ್ಳಿ ಮರಿಸ್ವಾಮಿ, ರೈತ ಸಂಘದ ತಾಲೂಕು ಅಧ್ಯಕ್ಷ ಕೆಬ್ಬೆಹಳ್ಳಿ ಶಿವರಾಜು, ತಾಲೂಕು ಕಾರ್ಯದರ್ಶಿ ಕೋಡಿಹಳ್ಳಿ ಶಿವರಾಜು, ಸುರೇಶ್ ಹೊಸದುರ್ಗ, ಅರುಣ್, ಆಕಾಶವಾಣಿ ಕಲಾವಿದ ಶ್ರೀನಿವಾಸ್, ಹೊಸದುರ್ಗ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಉಮಾಕಾಂತ್, ಶಿಕ್ಷಕರಾದ ನಟರಾಜು, ರಮೇಶ್ ಇತರರಿದ್ದರು.

ಕೆ ಕೆ ಪಿ ಸುದ್ದಿ 02

ಕನಕಪುರದಲ್ಲಿ ರೈತ ಸಂಘ ಹಾಗೂ ನ್ಯೂ ಚಿಗುರು ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಸರ್ಕಾರಿ ಶಾಲೆ ಉಳಿಸಿ ಆಂದೋಲನ ಕಾರ್ಯಕ್ರಮದಲ್ಲಿ ಹೊಸದುರ್ಗ ಸರ್ಕಾರಿ ಹಿರಿಯ ಪ್ರಾರ್ಥಮಿಕ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸಲಾಯಿತು.

Share this article