ಬಳ್ಳಾರಿ: ಸಾರ್ವಜನಿಕರಿಗೆ ಕಾನೂನಿನ ಅರಿವು ಮೂಡಿಸುವಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಸಹಕಾರಿಯಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕೆ.ಜಿ. ಶಾಂತಿ ಹೇಳಿದರು.
ಸಮಾಜದ ಹಿತದೃಷ್ಟಿಯಿಂದ ಸಮಾಜ ಸೇವೆಯಲ್ಲಿ ಪಿಎಲ್ ವಿ ಗಳ ಪಾತ್ರವೂ ಅವಶ್ಯವಿದೆ. ಈ ದಿಸೆಯಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕಾನೂನು ಇಲಾಖೆಗೆ ಹಾಗೂ ಸಮಾಜಕ್ಕೆ ಕಾನೂನಿನ ಅರಿವು ಹಾಗೂ ಸಲಹೆಯನ್ನು ಕೊಡುವಲ್ಲಿ ನೆರವಾಗಬೇಕು. ಕಾನೂನು ಸ್ವಯಂ ಸೇವಕರು ಕಾನೂನಿನ ಬಗ್ಗೆ ತಿಳಿದು ಅರ್ಹ ವ್ಯಕ್ತಿಗಳಿಗೆ ಕಾನೂನಿನ ಸಲಹೆ ಕೊಡುವಲ್ಲಿ ಮುಖ್ಯ ಪಾತ್ರವಹಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕರಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕಾನೂನು ಅರಿವು ಮತ್ತು ಸಾಕ್ಷರತೆ ಮೂಡಿಸುವುದು ಅವಶ್ಯವಾಗಿದೆ. ಕಾನೂನು ಸೇವಾ ಪ್ರಾಧಿಕಾರ ಮತ್ತು ಕಕ್ಷಿದಾರರ ನಡುವೆ ಮಧ್ಯವರ್ತಿಯಾಗಿ ಕೆಲಸ ಮಾಡಿ, ತೊಂದರೆಯಲ್ಲಿರುವವರಿಗೆ ಕಾನೂನು ನೆರವು ದೊರೆಯುವಂತೆ ಮಾಡುವುದು ತಮ್ಮ ಕರ್ತವ್ಯವಾಗಿರುತ್ತದೆ. ಇದರಿಂದ ತಾವುಗಳು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.ಪ್ರತಿಯೊಬ್ಬರಿಗೂ ನ್ಯಾಯ ಸಿಗಬೇಕು ಎಂಬುದು ಕಾನೂನಿನ ಮೂಲ ಉದ್ದೇಶವಾಗಿದೆ. ಹಾಗಾಗಿ ಸ್ವಯಂ ಸೇವಕರು ಎರಡು ದಿನಗಳ ತರಬೇತಿಯ ಸದ್ಬಳಕೆ ಮಾಡಿಕೊಂಡು, ಅಸಹಾಯಕರಿಗೆ ಕಾನೂನು ಸೇವೆಗಳನ್ನು ತಲುಪಿಸುವಂತಹರಾಗಬೇಕು ಎಂದು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪಿ.ರಾಮಬ್ರಹ್ಮಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಕಾನೂನು ಅರಿವು ನೀಡಿದರೆ, ಅವರು ಸಾಮಾನ್ಯ ಜನರಿಗೆ ನೆರವು ನೀಡುತ್ತಾರೆ. ಹಾಗಾಗಿ ಕಾನೂನು ಸ್ವಯಂ-ಸೇವಕರು ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯ್ಕ ಸೇರಿದಂತೆ ನ್ಯಾಯಾಧೀಶರು, ವಕೀಲರು, ಅರೆಕಾಲಿಕ ಸ್ವಯಂ ಸೇವಕರು, ನ್ಯಾಯಾಲಯದ ಅಧಿಕಾರಿ-ಸಿಬ್ಬಂದಿ, ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.