ಕನ್ನಡಪ್ರಭವಾರ್ತೆ ತಿಪಟೂರು
ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆ ಹಾಗೂ ಗಾಳಿಯಿಂದ ರೈತರು ಬೆಳೆ ನಷ್ಟವಾಗಿ ಕಷ್ಟ ಅನುಭವಿಸುತ್ತಿದ್ದಾರೆ ಅಲ್ಲದೆ ಮುಂಗಾರು ಆರಂಭವಾಗಿರುವುದರಿಂದ ರಸಗೊಬ್ಬರ ಮತ್ತು ಬಿತ್ತನೆ ಬೀಜ ಖರೀದಿಗೆ ರೈತರಿಗೆ ಹಣದ ಅಗತ್ಯವಿದೆ. ಜೂನ್ ತಿಂಗಳಿನಿಂದ ಶಾಲಾ-ಕಾಲೇಜುಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೂ ಹೆಚ್ಚಿನ ವೆಚ್ಚ ಉಂಟಾಗುತ್ತದೆ. ಈ ಕಾರಣಗಳಿಂದ ಸರ್ಕಾರವು ಬೆಂಬಲ ಬೆಲೆಯಲ್ಲಿ ಖರೀದಿಸಿರುವ ರಾಗಿಯ ಹಣವನ್ನು ಶೀಘ್ರ ಬಿಡುಗಡೆ ಮಾಡಿ ರೈತರಿಗೆ ನೆರವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಕೆ.ಟಿ.ಶಾಂತಕುಮಾರ್, ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರದ ದಿನ ಯುವಕರನ್ನು ಸಂಘಟಿಸಿ ಭಾರತ್ ಜೋಡೋ ಸಂಘಗಳನ್ನು ಸ್ಥಾಪಿಸಲು ಹಣ ಮೀಸಲಿಡುವ ಬಗ್ಗೆ ಮಾತನಾಡಿದ್ದಾರೆ. ಆದರೆ ಈಗಾಗಲೇ ರೈತರಿಂದ ಖರೀದಿಸಿರುವ ರಾಗಿ ಬೆಳೆಯ ಹಣವನ್ನು ಮೊದಲು ಬಿಡುಗಡೆ ಮಾಡಿ, ನಂತರ ಇತರ ಯೋಜನೆಗಳನ್ನು ಜಾರಿಗೊಳಿಸುವುದು ಸೂಕ್ತ ಎಂದು ಟೀಕಿಸಿದರು.ಇದಲ್ಲದೆ ತಾಲೂಕಿನಲ್ಲಿ ಬಾಳೆ, ತೆಂಗು, ಅಡಿಕೆ ಸೇರಿದಂತೆ ವಿವಿಧ ತೋಟಗಾರಿಕಾ ಬೆಳೆಗಳು, ಮಳೆಗೆ ಮನೆಗಳು ಸಹ ಪ್ರಕೃತಿ ವಿಕೋಪದಿಂದ ಲಕ್ಷಾಂತರ ರುಪಾಯಿ ನಷ್ಟ ಅನುಭವಿಸಿವೆ. ಸರ್ಕಾರವು ಹಳೆಯ ನಿಯಮಗಳು ಹಾಗೂ ಮಾರ್ಗಸೂಚಿಗಳನ್ನು ಬದಲಾಯಿಸಿ, ನಷ್ಟ ಅನುಭವಿಸಿರುವ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಾಧ್ಯಕ್ಷ ಶಿವಸ್ವಾಮಿ ಮತ್ತಿಘಟ್ಟ, ಜೆಡಿಎಸ್ ಯುವ ಘಟಕದ ತಾಲ್ಲೂಕು ಅಧ್ಯಕ್ಷ ಸುದರ್ಶನ್, ನಟರಾಜು, ಭರತ್, ಸಾರ್ಥವಳ್ಳಿ ಸ್ವಾಮಿ, ಮಂಜುನಾಥ್ ಪರವಗೊಂಡನಹಳ್ಳಿ, ಸತೀಶ್, ಶಿವುಉಗ್ರಯ್ಯ, ಚನ್ನೇಗೌಡ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.