ಗಣತಿಯಲ್ಲಿ ಪರಿಶಿಷ್ಟ ಜಾತಿ-ಉಪಜಾತಿ ನಮೂದಿಸಲು ಸಹಕರಿಸಿ

KannadaprabhaNewsNetwork | Published : May 24, 2025 1:03 AM
ಚಿಕ್ಕಮಗಳೂರು, ಜಾತಿ ಸಮೀಕ್ಷೆಗೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಪ.ಜಾ ಸಮುದಾಯದವರು ತಮ್ಮ ಜಾತಿ-ಉಪಜಾತಿಯನ್ನು ಸಮೀಕ್ಷೆ ಕಾಲಂನಲ್ಲಿ ಕಡ್ಡಾಯವಾಗಿ ನಮೂದಿಸಲು ಸಹಕರಿಸಿದಾಗ ಜಾತಿ ಸಮೀಕ್ಷೆ ಕಾರ್ಯ ಪರಿಪೂರ್ಣವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ನೋಡಲ್ ಅಧಿಕಾರಿ ದೇವರಾಜ್ ಮನವಿ ಮಾಡಿದರು.
Follow Us

ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ೨೦೨೫ ರ ತಾಲೂಕು ಮಟ್ಟದ ಸಮೀಕ್ಷೆಯ ಮಾಹಿತಿ ಸಂಗ್ರಹಣೆ ಸಭೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜಾತಿ ಸಮೀಕ್ಷೆಗೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ಪ.ಜಾ ಸಮುದಾಯದವರು ತಮ್ಮ ಜಾತಿ-ಉಪಜಾತಿಯನ್ನು ಸಮೀಕ್ಷೆ ಕಾಲಂನಲ್ಲಿ ಕಡ್ಡಾಯವಾಗಿ ನಮೂದಿಸಲು ಸಹಕರಿಸಿದಾಗ ಜಾತಿ ಸಮೀಕ್ಷೆ ಕಾರ್ಯ ಪರಿಪೂರ್ಣವಾಗುತ್ತದೆ ಎಂದು ಉಪವಿಭಾಗಾಧಿಕಾರಿ ಹಾಗೂ ನೋಡಲ್ ಅಧಿಕಾರಿ ದೇವರಾಜ್ ಮನವಿ ಮಾಡಿದರು.ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ೨೦೨೫ ರ ತಾಲೂಕು ಮಟ್ಟದ ಜಾತಿ ಸಮೀಕ್ಷೆ ಕುರಿತು ಮಾಹಿತಿ ಸಂಗ್ರಹಣೆ ತಾಲೂಕುಮಟ್ಟದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಸಮೀಕ್ಷೆಯಲ್ಲಿ ಪರಿಶಿಷ್ಟ ಜನಾಂಗದವರು ಪಡೆದಿರುವ ಶಿಕ್ಷಣ, ವೃತ್ತಿ, ವಾಸಿಸುವ ಪ್ರದೇಶ ಹೊಂದಿರುವ ಸೌಲಭ್ಯ ಇನ್ನೂ ಮುಂತಾದ ಅಗತ್ಯ ಸಾಮಾನ್ಯ ಮಾಹಿತಿಗಳನ್ನು ಜಾತಿ ಗಣತಿದಾರರಿಗೆ ನೀಡಬೇಕೆಂದು ವಿನಂತಿಸಿದರು.ಈ ರೀತಿ ಮಾಹಿತಿ ಕೊಡುವುದರಿಂದ ಈಗ ಲಭ್ಯವಿರುವ ಬಿಪಿಎಲ್ ಪಡಿತರ ಚೀಟಿ ಹಾಗೂ ಇನ್ನಿತರ ಸೌಲಭ್ಯಗಳನ್ನು ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಆಯೋಗದ ನಿರ್ದೇಶನದಂತೆ ಮಾತ್ರ ಜಾತಿ ಸಮೀಕ್ಷೆ ನಡೆಸಲು ಸೂಚನೆ ನೀಡಿದೆ ಎಂದು ಹೇಳಿದರು.ಚಿಕ್ಕಮಗಳೂರು ತಾಲೂಕಿನಲ್ಲಿ ಮೇ.೨೧ ರವರೆಗೆ ಒಟ್ಟು ೮೫೩೭೧ ಕುಟುಂಬಗಳ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಇದರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಸುಮಾರು ೧೬೨೭೫ ಕುಟುಂಬಗಳು ಮತ್ತು ೬೯೦೯೬ ಕುಟುಂಬಗಳು ಪ.ಜಾ ವ್ಯಾಪ್ತಿಯ ಹೊರಗಿನವು ಎಂದು ಮಾಹಿತಿ ನೀಡಿದರು.ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಏಕ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪ.ಜಾ ಒಳ ಮೀಸಲಾತಿ ವರ್ಗೀಕರಣಗೊಳಿಸಲು ಜಾತಿ ಸಮೀಕ್ಷೆಯನ್ನು ಜಿಲ್ಲಾ ವ್ಯಾಪ್ತಿಯಲ್ಲಿ ನಡೆಸುತ್ತಿರುವ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಸಲಾಗುವುದು ಎಂದರು.ಗಣತಿದಾರರು ಮನೆ ಮನೆಗೆ ಭೇಟಿನೀಡಿ ಸಮೀಕ್ಷೆ ಮಾಡುವಂತದ್ದಾಗಿದ್ದು, ಮತಗಟ್ಟೆವಾರು ಶಿಬಿರಗಳಲ್ಲಿ ಮತ್ತು ಸ್ವಯಂ ಘೋಷಣೆಯ ಮೂಲಕ ಈ ಮೂರು ಹಂತಗಳಲ್ಲಿ ಜಾತಿ ಸಮೀಕ್ಷೆ ನಡೆಸಲಾಗುವುದು ಎಂದು ವಿವರಿಸಿದರು.ಈಗಾಗಲೇ ಮೇ.೫ ರಿಂದ ಆರಂಭವಾಗಿದ್ದ ಜಾತಿ ಸಮೀಕ್ಷೆ ಕಾರ್ಯ ಮೇ.೧೭ಕ್ಕೆ ಮುಕ್ತಾಯಗೊಂಡಿದ್ದು, ಗಡುವನ್ನು ಮೇ.೨೫ ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ. ಶಿಬಿರದಲ್ಲಿ ಸಮೀಕ್ಷೆ ನಡೆಸುವವರು ಮೇ.೨೫ ರಿಂದ ೨೮ ರವರೆಗೆ ಸ್ವಯಂ ಘೋಷಣೆಯಡಿ ಮೇ.೧೯ ರಿಂದ ೨೮ ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದರು.ಸ್ವಯಂ ಘೋಷಣೆಯಲ್ಲಿ ಗಣತಿದಾರರು ಮನೆಗೆ ಬಂದಾಗ ಇಲ್ಲದಿರುವವರು ಆನ್‌ಲೈನ್ ಮೂಲಕ ವೆಬ್‌ಸೈಟ್ ಪೋರ್ಟಲ್‌ ನಲ್ಲಿ ಘೋಷಣೆ ಮಾಡಿಕೊಳ್ಳಲು ಅವಕಾಶ ಇದೆ ಎಂದು ಹೇಳಿದರು.ಒಟ್ಟು ೪೩೧ ಗಣತಿದಾರರು ಈ ಜಾತಿ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದು, ಈಗಾಗಲೇ ಸಾಕಷ್ಟು ಮನೆಗಳಿಗೆ ಭೇಟಿನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಅಕ್ಕಪಕ್ಕದ ಮನೆಗಳಲ್ಲಿರುವವರ ಗಣತಿ ಕೈತಪ್ಪಿದ್ದರೆ ಮಾಹಿತಿಯನ್ನು ನೀಡುವ ಮೂಲಕ ಸಹಕರಿಸಬೇಕೆಂದು ಮನವಿ ಮಾಡಿದರು.ಸಭೆಯಲ್ಲಿ ಭಾಗವಹಿಸಿದ ಸಂಘಟನೆಗಳ ಮುಖಂಡರು ಬೇಡ, ಜಂಗಮ ಜನಾಂಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಸಮೀಕ್ಷೆ ತಪ್ಪಾಗಿದ್ದಲ್ಲಿ ಸರಿಪಡಿಸಲು ಏನು ಕ್ರಮ ಎಂದು ಪ್ರಶ್ನಿಸಿದರು. ಈ ಎರಡು ಸಮಸ್ಯೆಗಳನ್ನು ಆಯೋಗದ ಗಮನಕ್ಕೆ ತಂದಿದ್ದೇನೆ ಎಂದು ಹೇಳಿದರು.ಸಭೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಎಚ್.ಡಿ. ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್ ಮತ್ತು ದಲಿತಪರ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.