ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಸುಪ್ರಸಿದ್ಧ ಹೇಮಗಿರಿಯ ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ಮತ್ತು ಬಿಲ್ಲೇನಹಳ್ಳಿ ಶ್ರೀ ಗವಿರಂಗನಾಥ ಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮತ್ತು ಅಧಿಕಾರಿಗಳ ಪೂರ್ವಭಾವಿ ಸಭೆ ಶಾಸಕ ಎಚ್.ಟಿ.ಮಂಜು ಅಧ್ಯಕ್ಷತೆಯಲ್ಲಿ ನಡೆಯಿತು.
ಹೇಮಗಿರಿಯಲ್ಲಿ ಕೆಲವರು ಅಕ್ರಮವಾಗಿ ಕಾರ್ಯ ಅಂಗಡಿಗಳನ್ನು ಹಾಕಿಕೊಂಡಿದ್ದು ಈ ಅಂಗಡಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಸೇರಿದಂತೆ ಹಲವಾರು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು. ತಾಲೂಕಿನಲ್ಲಿ ಬರಗಾಲ ಇರುವುದರಿಂದ ಜಾತ್ರೆಗೆ ಬರುವ ರಾಸುಗಳ ಸುಂಕ ಹರಾಜು ಮಾಡದಂತೆ ಆಗ್ರಹಪಡಿಸಿದರು.ಶ್ರೀಕಲ್ಯಾಣ ವೆಂಕಟರಮಣ ಸ್ವಾಮಿ ರಥ ಶಿಥಿಲವಾಗಿದೆ. ಇದನ್ನು ನವೀಕರಣ ಮಾಡುತ್ತಿಲ್ಲ. ಜಾತ್ರೆ ಸಂದರ್ಭದಲ್ಲಿ ಧೂಳು ಏಳದಂತೆ ಕಾಲಕಾಲಕ್ಕೆ ರಸ್ತೆಗೆ ನೀರು ಹಾಕುತ್ತಿಲ್ಲ. ತೇರು ಎಳೆಯಲು ರಸ್ತೆ ಬದಿಯ ಮರದ ಕೊಂಬೆಗಳಿಂದ ಅಡಚಣೆಯಾಗುತ್ತಿದೆ. ರಥೋತ್ಸವಕ್ಕೆ ಅಡಚಣೆಯಾಗಿರುವ ಮರಗಳ ತೆರವಿಗೆ ಅರಣ್ಯ ಇಲಾಖೆ ಸ್ಪಂದಿಸುತ್ತಿಲ್ಲ. ಹೇಮಾವತಿ ನದಿಯಲ್ಲಿ ಜೊಂಡು ಬೆಳೆದಿದ್ದು ತೆಪ್ರೋತ್ಸವಕ್ಕೆ ಅಡ್ಡಿಯಾಗುತ್ತಿದೆ. ನದಿಯನ್ನು ಸ್ವಚ್ಛಗೊಳಿಸಿ ತೆಪ್ರೋತ್ಸವಕ್ಕೆ ಅನುಕೂಲ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.
ರಥೋತ್ಸವಕ್ಕೆ ಬರುವ ಭಕ್ತಾದಿಗಳ ಅನುಕೂಲಕ್ಕೆ ಎರಡು ಪ್ರತ್ಯೇಕ ಕೊಳವೆ ಬಾವಿಕೊರೆಸಬೇಕು. ಮಹಿಳೆಯರಿಗೆ ಸ್ನಾನಗೃಹಗಳ ನಿರ್ಮಾಣ, ಜಾತ್ರೆ ಸಂದರ್ಭದಲ್ಲಿ ವಾಹನಗಳ ಮೂಲಕ ಬರುವ ಭಕ್ತರಿಗೆ ಪಾರ್ಕಿಂಗ್ ಸ್ಥಳ ನಿಗಧಿಪಡಿಸುವಂತೆ ಒತ್ತಾಯಿಸಿದರು.
ತಹಸೀಲ್ದಾರ್ ನಿಸರ್ಗಪ್ರಿಯ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಂ, ಪಶು ಇಲಾಖೆಯ ಡಾ.ದೇವರಾಜು, ಪಿಡಿಒಗಳಾದ ಡಾ.ನರಸಿಂಹರಾಜು, ವಿನೋದ್ ಸೇರಿದಂತೆ ಇತರೆ ಅಧಿಕಾರಿಗಳು, ಗ್ರಾಮ ಮುಖಂಡರಾದ ಬಂಡೀಹೊಳೆ ಅಶೋಕ್, ಮಾದೇಗೌಡ, ಕುಪ್ಪಹಳ್ಳಿ ಶೇಷಾದ್ರಿ ಇತರರಿದ್ದರು.