ಶಿರಸಿ: ಪರೇಶ ಮೇಸ್ತ ಹತ್ಯೆಯಾದ ಸಂದರ್ಭದಲ್ಲಿ ಹೇಮಂತ ನಿಂಬಾಳ್ಕರ ಮಂಗಳೂರು ಐಜಿ ಆಗಿದ್ದರು. ಆ ಸಂದರ್ಭದಲ್ಲಿ ಘಟನೆಯನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದ ಸಾವಿರಾರು ಹಿಂದೂ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದರು. ನಮ್ಮ ಸರ್ಕಾರದಲ್ಲಿ ಪ್ರಕರಣ ವಾಪಸ್ ಪಡೆದಿದ್ದೇವೆ. ಕಾಂಗ್ರೆಸ್ ಕೈಗೊಂಬೆಯಾಗಿ ವರ್ತಿಸಿರುವ ಪರಿಣಾಮ ಪರಿಸ್ಥಿತಿ ವಿಕೋಪಕ್ಕೆ ತಿರುಗಲು ಕಾರಣವಾಯಿತು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಶಿರಸಿಗೆ ಮೋದಿ: ನರೇಂದ್ರ ಮೋದಿ ಏ. ೨೮ರಂದು ೧೧ ಗಂಟೆಗೆ ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣಕ್ಕೆ ಆಗಮಿಸಲಿದ್ದಾರೆ. ೧ ಲಕ್ಷಕ್ಕಿಂತ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಿದ್ದಾರೆ. ಮನೆ ಮನೆಗೆ ತೆರಳಿ, ಕಾರ್ಯಕರ್ತರು ಆಮಂತ್ರಣ ಪತ್ರಿಕೆ ನೀಡುತ್ತಿದ್ದಾರೆ. ಫಲಾನುಭವಿಗಳು ಮತ್ತು ರಾಮಮಂದಿರ ನಿರ್ಮಾಣದ ಬಳಿಕ ನಂತರ ಆಗಮಿಸುತ್ತಿರುವ ಹಿನ್ನೆಲೆ ನರೇಂದ್ರ ಮೋದಿ ಅವರಿಗೆ ಧನ್ಯವಾದ ಮತ್ತು ಕೃತಜ್ಞತೆ ಹೇಳಲು ಸ್ವಯಂ ಆಸಕ್ತಿಯಿಂದ ಆಗಮಿಸಲು ಉತ್ಸಾಹದಿಂದ ಇದ್ದಾರೆ ಎಂದರು.
ಹಿಂದುಳಿದ ವರ್ಗದ ಮೀಸಲಾಯಿತಿಯಲ್ಲಿ ಅಲ್ಪಸಂಖ್ಯಾತರಿಗೆ ನೀಡುವುದಕ್ಕೆ ಮುಂದಾಗಿದ್ದಾರೆ. ಓಲೈಕೆಯ ಏಕೈಕ ಉದ್ದೇಶದಿಂದ ದಲಿತರಿಗೆ ನೀಡಿದ ಮೀಸಲಾತಿಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಕ್ಕೆ ನೀಡಲು ಮುಂದಾಗಿದೆ. ಇದರಿಂದ ಹಿಂದೂಗಳಿಗೆ ಅನ್ಯಾಯವಾಗಿದ್ದು, ಇದನ್ನು ಖಂಡಿಸುತ್ತೇವೆ. ಇದಕ್ಕೆ ಅವಕಾಶ ನೀಡುವುದಿಲ್ಲ. ತುಷ್ಟೀಕರಣ ನೀತಿ ವಿರೋಧಿಸಬೇಕು ಎಂದರು.ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದವರು ಕಾಂಗ್ರೆಸ್ಸಿನವರು. ೯ ವರ್ಷ ಮಾತ್ರ ಬಿಜೆಪಿ ಆಡಳಿತ ನಡೆಸಿತ್ತು. ಜಿಲ್ಲೆಯ ಅಭಿವೃದ್ಧಿಯಾಗಲು ಬಿಜೆಪಿ ಕಾರಣ. ವಿಶ್ವವಿದ್ಯಾಲಯ ಸ್ಥಾಪನೆಗೆ ಬಜೆಟ್ ಘೋಷಣೆಯಾಗಿರುವುದನ್ನು ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ. ೯ ತಿಂಗಳಾದರೂ, ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ? ಸಭಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ತಂದ ನೂರಾರು ಕೋಟಿ ರು. ಏಕೆ ವಾಪಸ್ ಪಡದಿದ್ದಾರೆ ಎಂದು ಪ್ರಶ್ನಿಸಿದರು.