ದೀಪೋತ್ಸವ ಪೂರ್ವಭಾವಿ ಸಭೆ
ಹೇಮರಡ್ಡಿ ಮಲ್ಲಮ್ಮ ತಾನು ಕೌಟಂಬಿಕ ಜೀವನದಲ್ಲಿ ಕಿರುಕುಳ, ಸಂಕಷ್ಟಗಳನ್ನು ಸಹಿಸಿ, ಗೃಹಭಂಗವಾದದಂತೆ ನೋಡಿಕೊಂಡರು. ತನ್ನ ಸಮುದಾಯದ ಒಳಿತನ್ನು ಬಯಸಿದಳು. ಹಾಗಾಗಿ ಸಾಧ್ವಿ ಮಲ್ಲಮ್ಮ ರಡ್ಡಿ ವೀರಶೈವ ಜನಾಂಗದ ಅಸ್ಮಿತೆಯಾಗಿದ್ದಾರೆ ಎಂದು ಅಜ್ಜಂಪುರದ ಹೇಮರಡ್ಡಿ ವೀರಶೈವ ಜನಾಂಗ ಸಂಘದ ಅಧ್ಯಕ್ಷ ಜಿ.ಬಿ.ಹೇಮಂತಕುಮಾರ್ ಅಭಿಪ್ರಾಯಪಟ್ಟರು.ಹೇಮರಡ್ಡಿ ಮಲ್ಲಮ್ಮ ದೀಪೋತ್ಸವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ದೀಪೋತ್ಸವ ಒಂದು ಸಾಂಸ್ಕೃತಿಕ ಸಂಭ್ರಮ. ಪಟ್ಟಣದಲ್ಲಿ ಇರುವ ಸಮುದಾಯದ ಕುಟುಂಬಗಳ ಸಂಗಮ ಕಾರ್ಯಕ್ರಮವಾಗಿ ಡಿ. 28, ಭಾನುವಾರ ಅಜ್ಜಂಪುರದ ಬಸವೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇದೇ ಸಂದರ್ಭದಲ್ಲಿ ವಿಶ್ರಾಂತ ಲೆಫ್ಟಿನೆಂಟ್ ಜನರಲ್ ಬಿ.ಎಸ್.ರಾಜು, ಸಮಾಜ ಸೇವಕ ಎ.ಟಿ.ಶ್ರೀನಿವಾಸ್ ಮತ್ತು ನೂತನವಾಗಿ ಆಯ್ಕೆಯಾದ ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗೌರವ ಅಧ್ಯಕ್ಷ ಜಿ.ಎನ್. ಮಹಾಲಿಂಗಪ್ಪ ಮಾತನಾಡಿ, ಅಜ್ಜಂಪುರ ರಡ್ಡಿ ಕೌಟುಂಬಿಕ ಸಂಗಮದಲ್ಲಿ ಹೇಮರಡ್ಡಿ ಮಲ್ಲಮ್ಮ ವೀರಶೈವ ಜನಾಂಗ ಸಂಘದ ಗಿರಿಯಾಪುರ ಕೇಂದ್ರ ಸಮಿತಿ, ಅಜ್ಜಂಪುರ, ತರೀಕೆರೆ ಮತ್ತು ಕಡೂರು ತಾಲೂಕು ಘಟಕಗಳ ಪದಾಧಿಕಾರಿಗಳನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ. ಈ ಉತ್ಸವ ದಲ್ಲಿ ಪಟ್ಟಣದ ಎಲ್ಲ ರಡ್ಡಿ ಬಳಗದವರು ಪಾಲ್ಗೊಳ್ಳಬೇಕು ಎಂದು ಹೇಳಿದರು.ಸಂಘದ ಹಾಲಿ ನಿವೇಶನದಲ್ಲಿ ಸಮುದಾಯ ಭವನ ನಿರ್ಮಿಸಲು ಕೇಂದ್ರ ಸಂಘಕ್ಕೆ ಮನವಿ ಮಾಡಿ, ಈ ದಿಕ್ಕಿನಲ್ಲಿ ನಾವು ಕ್ರಿಯಾಶೀಲರಾಗಬೇಕು ಎಂದು ಸಲಹೆ ನೀಡಿದರು.