ಯಲಬುರ್ಗಾ: ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ತಮ್ಮ ಬದುಕನ್ನು ತಪಸ್ಸನ್ನಾಗಿಸಿ, ಕಾಯಕವನ್ನೇ ಪೂಜೆಯನ್ನಾಗಿಸಿದ್ದಾರೆ ಎಂದು ತಾಪಂ ಕಚೇರಿ ನೌಕರ ಬಸವರಾಜ ಹಳ್ಳಿ ಹೇಳಿದರು.
ಮಹಿಳೆಯರಿಗೆ ಅಂತಃಶಕ್ತಿ ತುಂಬಿ ಸ್ವಯಂ ಅಬಲೀಕರಣ ಸಾಧ್ಯ ಎಂದು ಮಾರ್ಗದರ್ಶನ ನೀಡಿದ ಮಲ್ಲಮ್ಮ ಬದುಕು ಎಲ್ಲ ಮಹಿಳೆಯರಿಗೆ ಆದರ್ಶವಾಗಿದೆ. ಅವರ ಬದುಕಿನ ಸವಾಲುಗಳೇ ಜೀವನದರ್ಶನವಾಗಿದೆ. ಮಲ್ಲಮ್ಮ ಯಾವುದೇ ವಚನ ರಚಿಸದಿದ್ದರೂ ದಾರ್ಶನಿಕರ ವಚನಗಳಂತೆ ಬದುಕಿದ ಆದರ್ಶ ನಾರಿಯಾಗಿದ್ದಾರೆ. ಅವರ ಬದುಕೇ ಉಕ್ತಿಗಳು. ಯಾವುದೇ ಸಾಹಿತ್ಯ ಅಥವಾ ಗ್ರಂಥಗಳಿಂದ ಜಗತ್ತನ್ನು ವ್ಯಾಪಿಸಲಿಲ್ಲ. ಬದಲಿಗೆ ಜನಪದರ ಲಾವಣಿ, ಹಂತಿ ಪದ, ಹಾಡುಗಳ ಮೂಲಕ ನುಡಿಗಳಲ್ಲಿ ಅವರು ಜೀವಂತವಾಗಿ ಉಳಿದಿದ್ದಾರೆ. ಮಲ್ಲಮ್ಮನವರು ತಾವು ಪಟ್ಟ ಪಾಡು ಹಾಡಾಗಿಸಿಕೊಂಡಿದ್ದಾರೆ ಎಂದರು.
ಹೆಣ್ಣು ಕೌಟುಂಬಿಕ ದೌರ್ಜನ್ಯಕ್ಕೆ ಸಿಲುಕಿದಾಗ, ಹೆಣ್ಣಾಗಿ ಹುಟ್ಟಿದ್ದೇ ತಪ್ಪಾಯಿತೇ ಎಂದು ನೊಂದುಕೊಳ್ಳುವವರೇ ಹೆಚ್ಚು. ಆದರೆ, ಅಂತಹ ಹೆಣ್ಣುಮಕ್ಕಳಿಗೆ ಜೀವನದಲ್ಲಿ ಪ್ರೇರಣಾ ಶಕ್ತಿಯಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ತಾಪಂ ಸಿಬ್ಬಂದಿ ಬಸವರಾಜ ಮಾಲಿಪಾಟೀಲ್, ಶರಣಪ್ಪ ಇಂಡಿ, ಪ್ರಶಾಂತ ಬಡಿಗೇರ್, ಉಮೇಶ, ಮಂಜುನಾಥ ನಿಂಗೋಜಿ ಸೇರಿದಂತೆ ಮತ್ತಿತರರು ಇದ್ದರು.