ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ರೆಡ್ಡಿ ಸಮಾಜ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಲ್ಲಮ್ಮ ತಮ್ಮ ಕುಟುಂಬದಲ್ಲಿ ಎದುರಾದ ನೋವುಗಳನ್ನೆಲ್ಲಾ ಸಹಿಸಿಕೊಂಡು ಮೇಲೆ ಬಂದರು. ಇಂತಹ ಕಷ್ಟ ಕಾರ್ಪಣ್ಯದ ನಡುವೆಯೂ ಅವರ ತಾಳ್ಮೆ ಬದುಕಿಗೆ ಶಕ್ತಿ ತಂದು ಕೊಟ್ಟಿತ್ತು. ಭಕ್ತಿ ಮತ್ತು ನಂಬಿಕೆಗೆ ಇನ್ನೊಂದು ಹೆಸರೇ ಮಲ್ಲಮ್ಮ ಎಂದರು.ಮಲ್ಲಮ್ಮನಿಗೆ ಬುದ್ದಿ ಕಲಿಸಲು ಅವರ ಅತ್ತೆ ಭಿಕ್ಷುಕನಿಗೆ ನಿಗಿ ನಿಗಿ ಕೆಂಡ ಭಿಕ್ಷೆ ನೀಡುವಂತೆ ಹೇಳಿದಾಗ ಮಲ್ಲಮ್ಮ ಶ್ರೀ ಶೈಲಮಲ್ಲಿಕಾರ್ಜುನನ್ನು ಮನದಲ್ಲಿ ನೆನೆದು ಭಕ್ತಿಯಿಂದ ಅದನ್ನೇ ಭಿಕ್ಷೆ ನೀಡಿದಾಗ ಅದು ಧಾನ್ಯವಾಗುತ್ತದೆ. ಆಗಿನಿಂದ ಅವರನ್ನು ಕೆಂಡದ ಮಲ್ಲಮ್ಮ ಎಂದು ಕರೆಯಲಾಗುತ್ತದೆ.
ಮಲ್ಲಮ್ಮನವರು ಸದಾ ಶ್ರೀ ಶೈಲ ಮಲ್ಲಿಕಾರ್ಜುನನ್ನು ಜಪಿಸುತ್ತಿದ್ದರು. ನನ್ನ ಜೊತೆ ಸದಾ ಮಲ್ಲಿಕಾರ್ಜುನನು ಇರುತ್ತಾನೆ ಎಂಬ ನಂಬಿಕೆಯಿಂದ ಮಲ್ಲಮ್ಮ ಎಲ್ಲ ಕಷ್ಟಗಳನ್ನು ಸಹಜವಾದ ರೀತಿಯಲ್ಲಿ ಸ್ವೀಕರಿಸಿದರು. ಈ ಮೂಲಕ ಸಮಾಜಕ್ಕೆ ತಾಳ್ಮೆಯ ಶಕ್ತಿಯನ್ನು ತಿಳಿಸಿದರು ಎಂದು ಸ್ಮರಿಸಿದರು.
ಶಂಕರಘಟ್ಟ ಕುವೆಂಪು ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪ್ರಾಕ್ತನಾ ಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾ. ಹಸೀನಾ ಹೆಚ್.ಕೆ. ಯವರು ಮಲ್ಲಮ್ಮ ಕುರಿತು ಮಾತನಾಡಿ, ಸಾದ್ವಿತನಕ್ಕೆ ದೊಡ್ಡ ಉದಾಹರಣೆಯಾಗಿದ್ದಾರೆ. ನಮ್ಮ ಕನ್ನಡ ನಾಡಿನ ಉದ್ದಗಲಕ್ಕೆ ಆದರ್ಶ ವ್ಯಕ್ತಿಗಳು ಇದ್ದಾರೆ. 14-15 ನೇ ಶತಮಾನದಲ್ಲಿದ್ದ ಮಲ್ಲಮ್ಮನವರು ನೀಡಿರುವ ಕೌಟುಂಬಿಕ ಮೌಲ್ಯಗಳು, ಗುರು ಹಿರಿಯರ ಅಂಶಗಳನ್ನು ನಾವು ಪ್ರಸ್ತುತದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷ ಜಿ.ಕುಮಾರಸ್ವಾಮಿ ಮಾತನಾಡಿ, ಅಕ್ಮಮಹಾದೇವಿ, ಹೇಮರೆಡ್ಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲ ಮಾದರಿ ಸ್ತ್ರೀಯರು. ಮಲ್ಲಮ್ಮ ಸಂಸಾರದ ಕೋಟಲೆಯನ್ನು ತಾಳ್ಮೆ ಯಿಂದ ಸಹಿಸಿ, ಬೆಟ್ಟದಂತಹ ಕಷ್ಟವನ್ನು ಹೂವಾಗಿ ಅರಳಿಸಿದವರು. ಪುರುಷರಿಗೂ ಮಾದರಿ ಇವರು. ಅವರ ಬದುಕಿನ ಸಾರವನ್ನು ನಾವು ಅಳವಡಿಸಿಕೊಳ್ಳಬೇಕು ಎಂದರು.