ಕನ್ನಡಪ್ರಭ ವಾರ್ತೆ ರಾಮನಾಥಪುರ
ಕಾವೇರಿ ಹಾಗೂ ಹೇಮಾವತಿ ಜಲಾನಯನ ಪ್ರದೇಶಗಳಲ್ಲಿ ಈ ಬಾರಿ ವಾಡಿಕೆಗಿಂತಲೂ ಅಧಿಕವಾಗಿ ಮಳೆ ಸುರಿದಿದೆ. ಹೀಗಾಗಿ ವಾಡಿಕೆಗಿಂತ ಮೊದಲೇ ಹಾರಂಗಿ ಮತ್ತು ಕಟ್ಟೆಪುರ ಕೃಷ್ಣರಾಜ ಅಣೆಕಟ್ಟು ತುಂಬಿದ್ದು ಈಗಾಗಲೇ ಎಲ್ಲಾ ನಾಲೆಗಳಲ್ಲಿ ನೀರು ಹರಿಸಲಾಗಿದೆ. ಈ ಭಾಗದ ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭವಾಗಿದ್ದು ಭತ್ತದ ಒಗ್ಗು ( ಸಸಿಮಡಿ) ಹಾಕಿರುವ ರೈತರು ಇದೀಗ ನಾಟಿ ಕಾರ್ಯ ಬಿರುಸುಗೊಳಿಸಿದ್ದಾರೆ.
ಶತಮಾನ ವರ್ಷ ಪೂರೈಸಿದ ಕೃಷ್ಣ ರಾಜ ಅಣೆಕಟ್ಟೆ: ಮೈಸೂರು ಅರಸರ ಕಾಲದಲ್ಲಿ ಕಟ್ಟಿದ ಕಟ್ಟೆಪುರ ಕೃಷ್ಣರಾಜ ಅಣೆಕಟ್ಟೆ ಈಗಾಗಲೇ ನೂರು ವರ್ಷ ಪೂರೈಸಿದ್ದು ಅಚ್ಚುಕಟ್ಟು ಪ್ರದೇಶ ಭತ್ತದ ಬೆಳೆಗೆ ಪ್ರಸಿದ್ಧಿಯಾಗಿದೆ. ತೀವ್ರ ಬರಗಾಲ ಎದುರಿಸಿದ ಒಂದೆರಡು ಬಾರಿ ಮಾತ್ರ ನಾಲೆಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದು ಹೊರತುಪಡಿಸಿದರೆ, ಆ ನಂತರದಲ್ಲಿ ನಿರಂತರವಾಗಿ ನಾಲೆಗಳಲ್ಲಿ ನೀರು ಹರಿದಿದೆ. ಜೀವನದಿ ಕಾವೇರಿ ಜೊತೆಗೆ ಹೇಮಾವತಿ ಜಲಾನಯನ ಸಹ ಭರ್ತಿಯಾಗಿದ್ದು ಈ ಭಾಗದ ಅನ್ನದಾತರ ಬಾಳು ಹಸಿರಾಗಿಸಿದೆ.12,000 ಎಕರೆ ಪ್ರದೇಶಕ್ಕೆ ನೀರು:
ವಿಸ್ತಾರವಾದ ನೀರಾವರಿ ಪ್ರದೇಶ ಹೊಂದಿರುವ ಕಟ್ಟೆಪುರ ನಾಲಾ ಅಚ್ಚುಕಟ್ಟಿನಲ್ಲಿ ರೈತರು ಮುಂಗಾರುಪೂರ್ವ ಮಳೆಗೂ ಮುನ್ನ ಹೆಚ್ಚಿನದಾಗಿ ತಂಬಾಕು ನಾಟಿ ಕಾರ್ಯ ನಡೆಸುತ್ತಾರೆ. ಬಹುತೇಕ ಕಡೆ ತಂಬಾಕು ಕಟಾವು ಕಾರ್ಯ ಪೂರ್ಣಗೊಂಡಿದೆ. ಈ ಬಾರಿ ಮುಂಗಾರು ಮಳೆ ಬಿಡುವಿಲ್ಲದೆ ಸುರಿದ ಪರಿಣಾಮ ತಗ್ಗು ಪ್ರದೇಶದಲ್ಲಿ ಬೆಳೆದ ತಂಬಾಕು ಬೆಳೆ ನೀರಲ್ಲಿ ಮುಳುಗಡೆಯಾಯಿತು. ಕೆಲವು ಪ್ರದೇಶದ ರೈತರು ನೆಲಗಡಲೆ, ಅಲಸಂದೆ, ಹೆಸರು, ಉದ್ದು, ಎಳ್ಳು ಸೇರಿದಂತೆ ದ್ವಿದಳ ಧಾನ್ಯ ಬೆಳೆಗಳನ್ನು ಬೆಳೆದಿದ್ದರು. ಇನ್ನೇನು ಫಸಲು ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ನದಿಯು ಹುಕ್ಕೇರಿ ಅನೇಕ ಕಡೆ ಪ್ರವಾಹದ ನೀರಿನಲ್ಲಿ ಸಿಲುಕಿ ಸಾಕಷ್ಟು ಬೆಳೆ ನಾಶವಾಗಿ ಅನ್ನದಾತರಿಗೆ ಉಕ್ಕೇರಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಯಿತು. ಅಲ್ಪಸ್ವಲ್ಪ ಉಳಿದ ತಂಬಾಕು ಗಿಡಗಳಲ್ಲಿ ಕಟಾವು ಮಾಡಿ ರೈತರು ಭತ್ತದ ನಾಟಿಗಾಗಿ ಗದ್ದೆಗಳನ್ನು ಸಿದ್ಧಗೊಳಿಸುತ್ತಿದ್ದಾರೆ. ಹೇಮಾವತಿ ಬಲದಂಡೆ ನಾಲೆ 56 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ತಾಲೂಕಿನಲ್ಲಿ 12,430 ಎಕರೆ ಜಮೀನಿಗೆ ನೀರು ಹರಿಯಲಿದ್ದು ಬಹುತೇಕ ಭಾಗದಲ್ಲಿ ಭತ್ತದ ನಾಟಿ ನಡೆಸಲಾಗುತ್ತಿದೆ. ಇನ್ನುಳಿದಂತೆ ಹೊಳೆನರಸೀಪುರ ತಾಲೂಕಿನಲ್ಲಿ 28,200 ಎಕರೆ, ಕೆ ಆರ್ ನಗರ 10,700 ಎಕರೆ ಹಾಗೂ ಕೆ ಆರ್ ಪೇಟೆ ತಾಲೂಕಿನಲ್ಲಿ 4670 ಎಕರೆ ಪ್ರದೇಶದಲ್ಲಿ ನೀರು ಹರಿಸಲಾಗುತ್ತದೆ. ಚಳಿಗಾಲಕ್ಕೆ ಸಿಲುಕುವ ಆತಂಕ:
---------------------------------------------------------------------------
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಭಾಗದಲ್ಲಿ ರೈತರು ಈಗಾಗಲೇ ಭತ್ತ ನಾಟಿ ಕಾರ್ಯ ಮುಗಿಸಿದ್ದಾರೆ. ಹೇಮಾವತಿ ಮತ್ತು ಕಾವೇರಿ ನದಿ ಪಾತ್ರದ ನಾಲೆಗಳಲ್ಲಿ ಭತ್ತ ನಾಟಿ ಕಾರ್ಯ ಪ್ರಗತಿಯಲ್ಲಿದೆ. ರೈತರು ಅಗತ್ಯವಾದ ಬಿತ್ತನೆ ಬೀಜ ರಸಗೊಬ್ಬರ ವಿತರಿಸಲಾಗಿದೆ.
- ಕಟ್ಟೆಪುರ ನಾಲೆ ಹಂತದ ಉತ್ತಮ ಮಳೆಯಾಗಿದ್ದು ಕೃಷ್ಣರಾಜ ಅಣೆಕಟ್ಟೆಯ ಹಾಗೂ ಹಾರಂಗಿ ಹೇಮಾವತಿ ಕಾವೇರಿ ನದಿ ಪಾತ್ರದ ನಾಲೆಗಳಲ್ಲಿ ಈ ಬಾರಿ ನೀರಿನ ಕೊರತೆ ಇಲ್ಲ ಹೀಗಾಗಿ ಭತ್ತದ ನಾಟಿ ಕಾರ್ಯ ಕೈಗೊಳ್ಳಲಾಗುತ್ತಿದೆ.