ಸತತ ಮಳೆಯಿಂದ ಮೈದುಂಬಿ ಹರಿಯುತ್ತಿರುವ ಹೇಮಾವತಿ ನದಿ

KannadaprabhaNewsNetwork | Published : Jul 26, 2024 1:41 AM

ಸಾರಾಂಶ

ಹೇಮಾವತಿ ನದಿ ದಂಡೆ ಆಸುಪಾಸಿನ ಗ್ರಾಮಸ್ಥರು ನದಿ ದಂಡೆಗೆ ತೆರಳದಂತೆ ಹಾಗೂ ನದಿ ತಗ್ಗು ಪ್ರದೇಶ, ನದಿ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಮುಂಜಾಗ್ರತೆ ಕ್ರಮ ಕೈಗೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೀರಾವರಿ ಇಲಾಖೆ ತಿಳಿಸಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಬೀಳುತ್ತಿರುವ ಸತತ ಮಳೆಯಿಂದಾಗಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿರುವುದರಿಂದ ನದಿ ದಡದ ಪ್ರದೇಶಗಳು ನೀರಿನಿಂದ ಜಲಾವೃತ್ತವಾಗಿವೆ.

ಹಾಸನ ಜಿಲ್ಲೆಯ ಗೊರೂರಿನ ಹೇಮಾವತಿ ಜಲಾಶಯ ಭರ್ತಿಯಾಗಿರುವುದರಿಂದ ಅಣೆಕಟ್ಟೆ ಕೆಳಭಾಗಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ನೀರಾವರಿ ಇಲಾಖೆ ಪ್ರಕಟಣೆಯಂತೆ ಗೊರೂರು ಜಲಾಶಯದಿಂದ 45 ರಿಂದ 50 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ.

ಮಳೆ ಪ್ರಮಾಣ ಹೆಚ್ಚಾದರೆ ಹೊರ ಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಲಿದೆ. ಹೇಮೆ ಪ್ರವಾಹ ಪರಿಸ್ಥಿತಿಯ ಬಗ್ಗೆ ತಾಲೂಕು ಆಡಳಿತ ಹಾಗೂ ನೀರಾವರಿ ಇಲಾಖೆ ತೀವ್ರ ನಿಗಾ ಇರಿಸಿದ್ದಾರೆ. ಈಗಾಗಲೇ ನದಿ ತೀರದ ಪ್ರದೇಶಗಳ ಜನರಿಗೆ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಹೇಮಾವತಿ ನದಿ ದಂಡೆ ಆಸುಪಾಸಿನ ಗ್ರಾಮಸ್ಥರು ನದಿ ದಂಡೆಗೆ ತೆರಳದಂತೆ ಹಾಗೂ ನದಿ ತಗ್ಗು ಪ್ರದೇಶ, ನದಿ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ತಮ್ಮ ಆಸ್ತಿ ಪಾಸ್ತಿ ಹಾಗೂ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಮುಂಜಾಗ್ರತೆ ಕ್ರಮ ಕೈಗೊಂಡು ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ನೀರಾವರಿ ಇಲಾಖೆ ತಿಳಿಸಿದೆ.

ಹೇಮಾವತಿ ತುಂಬಿ ಹರಿಯುತ್ತಿರುವುದರಿಂದ ತಾಲೂಕಿನ ಮಂದಗೆರೆ ಹಾಗೂ ಹೇಮಗಿರಿ ಬಳಿ ನಿರ್ಮಿಸಿರುವ ನದಿ ಒಡ್ಡು ಅಣೆಕಟ್ಟೆಗಳು ತಮ್ಮ ರುದ್ರ ರಮಣೀಯ ಸೌಂದರ್ಯವನ್ನು ಹೆಚ್ಚಿಸಿಕೊಂಡು ಜನರನ್ನು ತಮ್ಮತ್ತ ಸೆಳೆಯುತ್ತಿವೆ.

ಹೇಮಗಿರಿ ಅಣೆಕಟ್ಟೆಯ ವೀಕ್ಷಣೆಗೆ ಕೆ.ಆರ್.ಪೇಟೆ ಪಟ್ಟಣ ಹಾಗೂ ನದಿ ದಂಡೆ ಅಕ್ಕಪಕ್ಕದ ಗ್ರಾಮಗಳ ಜನ ಬಂದು ಹೋಗುತ್ತಿದ್ದಾರೆ.

ಕಾವೇರಿ ನದಿಗೆ 1 ಲಕ್ಷ ಕ್ಯುಸೆಕ್ ನೀರು ಬಿಡುಗಡೆ: ಸುರಕ್ಷಿತ ಸ್ಥಳಗಳಿಗೆ ತೆರಳಲು ಡೀಸಿ ಸೂಚನೆಮಂಡ್ಯ:ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್ ಜಲಾಶಯದಿಂದ ಈಗಾಗಲೇ 70 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಮತ್ತೆ ಮಳೆ ಹೆಚ್ಚಾಗಿರುವುದರಿಂದ ಸುಮಾರು 1 ಲಕ್ಷ ದಿಂದ ಒಂದೂವರೆ ಲಕ್ಷ ಕ್ಯುಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುವುದು. ಜಿಲ್ಲಾ ವ್ಯಾಪ್ತಿಯ ಕಾವೇರಿ ನದಿ ಪಾತ್ರದ ತಗ್ಗು ಪ್ರದೇಶದಲ್ಲಿರುವ ಹಾಗೂ ನದಿ ಎರಡೂ ದಂಡೆಗಳಲ್ಲಿರುವ ಸಾರ್ವಜನಿಕರು ಹಾಗೂ ರೈತರು ತಮ್ಮ ಆಸ್ತಿ ಪಾಸ್ತಿ ಜಾನುವಾರುಗಳ ರಕ್ಷಣೆಗೆ ಎಚ್ಚರಿಕೆ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಧಿಕಾರಿ ಡಾ. ಕುಮಾರ ಮನವಿ ಮಾಡಿದ್ದಾರೆ.

ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 124.80 ಅಡಿ

ಒಳ ಹರಿವು – 58,849 ಕ್ಯುಸೆಕ್

ಹೊರ ಹರಿವು – 70,044 ಕ್ಯುಸೆಕ್

ನೀರಿನ ಸಂಗ್ರಹ – 49.452 ಟಿಎಂಸಿ

Share this article