ಮತ್ತೆ ಬಿಸಿಯಾದ ಹೇಮಾವತಿ ನೀರು

KannadaprabhaNewsNetwork |  
Published : Jun 12, 2026, 01:15 AM IST
ಗುಬ್ಬಿ ಪಟ್ಟಣದಲ್ಲಿ ಪ್ರವಾಸಿಮಂದಿರದಲ್ಲಿ ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ  ಲಿಂಕ್ ಕೆನಾಲ್ ಕಾಮಗಾರಿ ವಿರೋಧ ಪೂರ್ವಭಾವಿ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು. | Kannada Prabha

ಸಾರಾಂಶ

ಜಿಲ್ಲೆಯ ಏಳು ತಾಲೂಕಿಗೆ ಜೀವನದಿಯಾದ ಹೇಮಾವತಿಗೆ ಅವೈಜ್ಞಾನಿಕವಾಗಿ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹೆಸರಲ್ಲಿ ಮಾಗಡಿ ರಾಮನಗರಕ್ಕೆ ಹರಿಸುವ ಕಾಮಗಾರಿಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೈತರಿಂದ ನಡೆಯಲಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ಜಿಲ್ಲೆಯ ಏಳು ತಾಲೂಕಿಗೆ ಜೀವನದಿಯಾದ ಹೇಮಾವತಿಗೆ ಅವೈಜ್ಞಾನಿಕವಾಗಿ ಲಿಂಕ್ ಕೆನಾಲ್ ಮೂಲಕ ಕುಣಿಗಲ್ ಹೆಸರಲ್ಲಿ ಮಾಗಡಿ ರಾಮನಗರಕ್ಕೆ ಹರಿಸುವ ಕಾಮಗಾರಿಯನ್ನು ಸರ್ಕಾರ ಕೈಬಿಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ರೈತರಿಂದ ನಡೆಯಲಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಎಚ್ಚರಿಸಿದರು. ಪಟ್ಟಣದಲ್ಲಿ ಪ್ರವಾಸಿಮಂದಿರದಲ್ಲಿ ನೀರಾವರಿ ಹೋರಾಟ ಸಮಿತಿ ಏರ್ಪಡಿಸಿದ್ದ ಲಿಂಕ್ ಕೆನಾಲ್ ಕಾಮಗಾರಿ ವಿರೋಧ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಕ್ರಮ ಕಾಮಗಾರಿ ಬಗ್ಗೆ ಈ ಹಿಂದೆ ದೊಡ್ಡ ಮಟ್ಟದ ವಿರೋಧ ವ್ಯಕ್ತ ಪಡಿಸಿದ್ದ ಜಿಲ್ಲೆಯ ರೈತರು ಎಲ್ಲಾ ಪಕ್ಷದ ಮುಖಂಡರು, ಸಂಘ ಸಂಸ್ಥೆಗಳ ಜೊತೆ ಸೇರಿ ಲಿಂಕ್ ಕೆನಾಲ್ ವಿರೋಧಿ ವೇದಿಕೆ ನಿರ್ಮಿಸಿಕೊಂಡು ಬೃಹತ್ ಹೋರಾಟ ನಡೆಸಿ ಸರ್ಕಾರಕ್ಕೆ ಮನದಟ್ಟು ಮಾಡಲಾಗಿತ್ತು. ಆದರೆ ಈಚೆಗೆ ಕಾಮಗಾರಿ ಮುಂದುವರೆಸುವ ಬಗ್ಗೆ ಸರ್ಕಾರ ಹೇಳಿಕೆ ನೀಡಿದ್ದು ಜಿಲ್ಲೆಯ ರೈತರನ್ನು ಕೆಣಕಿದಂತಾಗಿದೆ. ಜಿಲ್ಲೆಯ ಹಿತ ಕಾಯಬೇಕಾದ ಡಿಸಿಎಂ ಪರಮೇಶ್ವರ್ ಅವರು ಸರ್ಕಾರದ ಒಂದು ಭಾಗವಾಗಿ ಕಾಮಗಾರಿ ನಡೆಸಲು ಮುಂದಾಗಿರುವುದು ಸೋಜಿಗ ಸಂಗತಿ. ಅಧಿಕಾರದ ಮಾತುಗಳನ್ನು ಬಿಟ್ಟು ಮಾನವೀಯತೆಯಲ್ಲಿ ಜನರ ನೀರಿನ ವಿಚಾರದ ಸೂಕ್ಷ್ಮತೆ ಅರಿತು ಜನಪರ ನಿಲ್ಲಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿಗಳ ಅಣತಿಯಂತೆ ಅಧಿಕಾರಿಗಳ ಜೊತೆ ಕಾಮಗಾರಿ ಮುಂದುವರೆಸಲು ಬಯಿಸಿರುವುದು ಜಿಲ್ಲೆಗೆ ದ್ರೋಹ ಬಗೆದಂತೆ. ಸಾವಿರಾರು ಮಂದಿ ಜನರ ಹೋರಾಟಕ್ಕೆ ಕಿಂಚಿತ್ತೂ ಬೆಲೆ ಕೊಡದ ಸರ್ಕಾರ ಈಗ ಮತ್ತೊಮ್ಮೆ ರೈತರ ವಿರೋಧಿ ನೀತಿ ತೋರುತ್ತಿದೆ. ಇದಕ್ಕೆ ತಕ್ಕಪಾಠ ಜನರೇ ನಿರ್ಧರಿಸುತ್ತಾರೆ ಎಂದು ಕಿಡಿಕಾರಿದರು. ಬಿಜೆಪಿ ಮುಖಂಡ ಎಸ್.ಡಿ. ದಿಲೀಪ್ ಕುಮಾರ್ ಮಾತನಾಡಿ, ಕುಣಿಗಲ್ ತಾಲೂಕಿನ ಹಂಚಿಕೆಯ 3 ಟಿಎಂಸಿ ನೀರು ಮುಖ್ಯನಾಲೆ ಮೂಲಕ ತೆಗೆದುಕೊಂಡು ಹೋಗಲು ಅಡ್ಡಿಯಿಲ್ಲ. ಅಗಲೀಕರಣ ಮಾಡಿ ಅಲೋಕೇಶನ್ ಮೂಲಕ ನೀರು ಪಡೆಯಲಿ ಅದನ್ನು ಬಿಟ್ಟು ನಮ್ಮ ಪಾಲಿನ ನೀರು ಕಿತ್ತುಕೊಳ್ಳುವುದು ಸಮಂಜಸವಲ್ಲ ಎಂದರು.ಜೆಡಿಎಸ್ ಮುಖಂಡ ಬಿ.ಎಸ್.ನಾಗರಾಜು ಮಾತನಾಡಿ, ಕುಣಿಗಲ್ ತಾಲೂಕಿನ ರೈತರನ್ನು ಶಾಸಕ ಡಾ.ರಂಗನಾಥ್ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕುಣಿಗಲ್ ರೈತರು ಅವರ ಪಾಲಿನ ನೀರು ಪಡೆಯಲು ಯಾವ ಅಡ್ಡಿಯಿಲ್ಲ ಎಂಬುದು ಅರಿಯಬೇಕು. ನಮ್ಮ ಭಾಗದ ನೀರು ಉಳಿಸಿಕೊಳ್ಳಲು ಹೋರಾಟ ಅನಿವಾರ್ಯವಾಗಿದೆ. ರೈತರು ಹೋರಾಟಕ್ಕೆ ಸಿದ್ದರಿರಬೇಕು ಎಂದು ಹೇಳಿದರು.ಬಿಜೆಪಿ ಹೆಚ್.ಟಿ.ಭೈರಪ್ಪ ಮಾತನಾಡಿ, ಡಿ.ಕೆ.ಶಿವಕುಮಾರ್ ರವರ ಕನಸಿನ ಕೂಸು ಬಿಡದಿ ಟೌನ್ ಶಿಪ್ ಮಾಡಲು ಹಲವು ಮಾರ್ಗದಲ್ಲಿ ನೀರನ್ನು ತೆಗೆದುಕೊಂಡು ಹೋಗಲು ನಿರ್ಧರಿಸಿದ್ದಾರೆ. ನಾವು ಮಾತ್ರ ಗುಬ್ಬಿ ತಾಲೂಕಿನ ಜನತೆಗೆ ಅನ್ಯಾಯ ಆಗುವುದಕ್ಕೆ ಬಿಡಲ್ಲ ಎಂದರು.ಈ ಸಂದರ್ಭದಲ್ಲಿ ಚಂದ್ರಶೇಖರ್ ಬಾಬು, ಕಳ್ಳಿಪಾಳ್ಯ ಲೋಕೇಶ್, ರೈತ ಸಂಘದ ವೆಂಕಟೇಗೌಡ, ಹೊನ್ನಗಿರಿಗೌಡ, ಮಹೇಶ್, ಬಲರಾಮಯ್ಯ, ಮಂಜುನಾಥ್, ಗೋಪಾಲಪುರ ಚಂದ್ರಶೇಖರ್, ಲಿಂಕ್ ಕೆನಾಲ್ ವಿರೋಧಿ ವೇದಿಕೆಯ ಸರ್ವ ಪಕ್ಷದ ಮುಖಂಡರು, ರೈತ ಮುಖಂಡರು ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ನಗರಕ್ಕೆ ಸೋಮನಾಥ ಜ್ಯೋತಿರ್ಲಿಂಗ ಆಗಮನ
ಜ್ಞಾನಜಾತ್ರೆಯ ಲೋಗೋ ಬಿಡುಗಡೆ ಮಾಡಿದ ಡಿಸಿ ಶುಭಾ ಕಲ್ಯಾಣ್