ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರು ಹೋಗುತ್ತಿಲ್ಲ: ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Jun 03, 2025, 01:41 AM ISTUpdated : Jun 03, 2025, 10:06 AM IST
ಡಿ.ಕೆ.ಶಿವಕುಮಾರ್‌ | Kannada Prabha

ಸಾರಾಂಶ

ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ. ಪ್ರತಿಭಟನಾನಿರತರ ಬ್ಲ್ಯಾಕ್‌ಮೇಲ್‌, ಬೇಡಿಕೆ ಏನೆಂಬುದನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

 ಬೆಂಗಳೂರು : ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆ ವಿರೋಧಿಸಿ ನಡೆಸಲಾಗುತ್ತಿರುವ ಪ್ರತಿಭಟನೆ ರಾಜಕೀಯ ಪ್ರೇರಿತ. ಪ್ರತಿಭಟನಾನಿರತರ ಬ್ಲ್ಯಾಕ್‌ಮೇಲ್‌, ಬೇಡಿಕೆ ಏನೆಂಬುದನ್ನು ಸಮಯ ಬಂದಾಗ ಬಹಿರಂಗಪಡಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಲಿಂಕ್‌ ಕೆನಾಲ್‌ ವಿರುದ್ಧ ಹೋರಾಟಗಾರರ ಬ್ಲ್ಯಾಕ್‌ಮೇಲ್‌, ಬೇಡಿಕೆ ಏನೆಂಬುದು ತಿಳಿದಿದೆ. ಅದನ್ನು ಸಮಯ ಬಂದಾಗ ತಿಳಿಸುತ್ತೇನೆ. ಕಳೆದ 10ಕ್ಕೂ ಹೆಚ್ಚಿನ ವರ್ಷಗಳಲ್ಲಿ ಕುಣಿಗಲ್‌ ತಾಲೂಕಿನ ಹೇಮಾವತಿ ನೀರಿನ ಪಾಲಿನಲ್ಲಿ ಶೇ. 90ರಷ್ಟು ಬಳಕೆಯಾಗದೆ ಅಲ್ಲಿನ ಜನರಿಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ. ಅದನ್ನು ಬಿಟ್ಟು ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುತ್ತಿದ್ದೇವೆ ಎಂಬುದು ಸುಳ್ಳು ಎಂದು ಹೇಳಿದರು.

ಹೇಮಾವತಿ ಲಿಂಕ್‌ ಕೆನಾಲ್‌ ಯೋಜನೆಯನ್ನು ರಾಜಕೀಯ ಕಾರಣಕ್ಕಾಗಿ ವಿರೋಧಿಸಲಾಗುತ್ತಿದೆ. ಈ ಹಿಂದೆ ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಗೆ ಅನುಮೋದನೆ ನೀಡಲಾಯಿತು. ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಆಗಿನ ತುಮಕೂರಿನ ಉಸ್ತುವಾರಿ ಸಚಿವರಾಗಿದ್ದಾಗ ಮಾಧುಸ್ವಾಮಿ ಈ ಯೋಜನೆ ತಡೆ ಹಿಡಿದಿದ್ದರು. ಆರಂಭದಲ್ಲಿ ಈ ಯೋಜನೆ ವೆಚ್ಚ ₹600 ಕೋಟಿ ಇತ್ತು. ಈಗ ಅದು 900ರಿಂದ 1 ಸಾವಿರ ಕೋಟಿಗೆ ಹೆಚ್ಚಳವಾಗುವಂತಾಗಿದೆ ಎಂದರು.

ಯೋಜನೆ ಕುರಿತಂತೆ ಬಿಜೆಪಿ ಶಾಸಕರಿಗೆ ಅಸೂಯೆ ಶುರುವಾಗಿದೆ. ಅದಕ್ಕಾಗಿಯೇ ಪ್ರತಿಭಟನೆ ಮಾಡುತ್ತಿದ್ದಾರೆ. ಆದರೆ, ಕಳೆದ 10ರಿಂದ 12 ವರ್ಷಗಳಿಂದ ಕುಣಿಗಲ್‌ ತಾಲೂಕಿಗೆ ಅದರ ಪಾಲಿನ ನೀರು ತಲುಪಿಲ್ಲ. ಹೀಗಾಗಿ ಯೋಜನೆ ಕೈಗೊಳ್ಳಲಾಗಿದೆ. ಯೋಜನೆಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಬೆಂಗಳೂರು ದಕ್ಷಿಣ ಜಿಲ್ಲೆಗೆ ಹೇಮಾವತಿ ನೀರಿನ ಅಗತ್ಯವಿಲ್ಲ. ಆ ಜಿಲ್ಲೆಗೆ ಪ್ರತ್ಯೇಕ ನೀರಾವರಿ ಯೋಜನೆ ರೂಪಿಸಲಾಗಿದೆ. ಅಲ್ಲದೆ, ತುಮಕೂರು ಜಿಲ್ಲೆಯ ಕೆಲ ಭಾಗ ಕೃಷ್ಣಾ ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿದೆ. ಆದರೂ, ಕಾವೇರಿ ಜಲಾನಯನದ ಹೇಮಾವತಿ ನೀರು ನೀಡಲಾಗುತ್ತಿದೆ. ಅಲ್ಲದೆ, ಕುಣಿಗಲ್‌ ತಾಲೂಕಿಗೆ ಹೇಮಾವತಿ ನೀರಿನಲ್ಲಿ 3.3 ಟಿಎಂಸಿ ನೀರು ಪಾಲು ಸಿಕ್ಕಿದೆ. ಅದನ್ನು ಕೊಡಲಾಗುತ್ತದೆ ಎಂದು ತಿಳಿಸಿದರು.

ರಾಜಕೀಯ ಮಾಡಬೇಡಿ:

ಶಾಸಕರಾದ ಕೃಷ್ಣಪ್ಪ, ಸುರೇಶ್‌ ಗೌಡ ಅವರು ಈ ಹಿಂದೆ ತಾಂತ್ರಿಕ ಸಮಿತಿ ರಚಿಸುವಂತೆ ಕೇಳಿದ್ದರು. ತಾಂತ್ರಿಕ ಸಮಿತಿ ರಚಿಸಿ, ಅದರ ವರದಿಯಂತೆ ಲಿಂಕ್‌ ಕೆನಾಲ್‌ ಯೋಜನೆ ಕೈಗೊಳ್ಳಲಾಗಿದೆ. ಈಗ ಯೋಜನೆಗೆ ಅಡಚಣೆ ಮಾಡುತ್ತಿದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡಬೇಡಿ. ಪ್ರತಿಭಟನಾನಿರತ ಶಾಸಕರು ಬಳಸುತ್ತಿರುವ ಪದಗಳಿಗಿಂತ ಹೆಚ್ಚಿನ ಪದಗಳನ್ನು ನಾನೂ ಬಳಸಬಲ್ಲ. ಆ ಸಾಮರ್ಥ್ಯ ನನಗಿದೆ. ಸಮಯ ಬಂದಾಗ ನಾನು ಉತ್ತರ ನೀಡುತ್ತೇನೆ. ಈಗ ಜನರ ಹಿತ ಕಾಯಬೇಕಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಕಾನೂನು ಕೈಗೆತ್ತಿಕೊಂಡರೆ ಕ್ರಮ:

ಪ್ರತಿಭಟನೆ ಹೆಸರಲ್ಲಿ ಯಾರೇ ಕಾನೂನು ಕೈಗೆತ್ತಿಕೊಂಡರೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಕಾನೂನು ಕೈಗೆತ್ತಿಕೊಂಡು ಸರ್ಕಾರವನ್ನು ಬೆದರಿಸಲು ಸಾಧ್ಯವಿಲ್ಲ. ಅವರ ಬೇಡಿಕೆಗಳನ್ನು ನಾನು ಬಹಿರಂಗಪಡಿಸಲು ಬಯಸುವುದಿಲ್ಲ. ನನಗೆ ಎಲ್ಲವೂ ತಿಳಿದಿದೆ. ಪ್ರತಿಭಟನೆಗೆ ಅನಗತ್ಯವಾಗಿ ಸ್ವಾಮೀಜಿಗಳನ್ನು ಕರೆತರಲಾಗುತ್ತಿದೆ. ಅವರಿಗೂ ಇದಕ್ಕೂ ಏನು ಸಂಬಂಧ ಎಂದು ಡಿ.ಕೆ.ಶಿವಕುಮಾರ್‌ ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ