ಅತ್ಯಂತ ಯಶಸ್ಸು ಕಂಡ ಪಂಚ ಗ್ಯಾರಂಟಿ ಯೋಜನೆ: ಡಾ. ಎಚ್.ಕೆ. ಪಾಟೀಲ

KannadaprabhaNewsNetwork |  
Published : Jun 03, 2025, 01:38 AM IST
ಗದಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಜೀವನದಲ್ಲಿ ನಿಜವಾದ ಶಕ್ತಿ ಬಂದಂತಾಗಿದೆ. ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಲು ಸಹಕಾರಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು‌.

ಗದಗ: ಸ್ವಾತಂತ್ರ್ಯ ನಂತರ ದೇಶದಲ್ಲಿ ಅತ್ಯಂತ ಯಶಸ್ಸು ಕಂಡ ಸರ್ಕಾರದಿಂದ ಅನುಷ್ಠಾನಿತ ಪಂಚ ಗ್ಯಾರಂಟಿ ಯೋಜನೆಗಳು ಅರ್ಹವಿರುವ ಕಟ್ಟಕಡೆಯ ಫಲಾನುಭವಿಗಳಿಗೆ ಒದಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು‌.

ನಗರದ ಎಸಿ ಆವರಣದಲ್ಲಿರುವ ತಾಲೂಕು ಗ್ಯಾರಂಟಿ ಯೋಜನೆಗಳ ಕಾರ್ಯಾಲಯದಲ್ಲಿ ಸೋಮವಾರ ಜರುಗಿದ ಗದಗ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಗೃಹಲಕ್ಷ್ಮೀ ಯೋಜನೆಯಿಂದ ರಾಜ್ಯದ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೊಂಡಿದೆ. ಜಿಲ್ಲೆಯಲ್ಲಿ ಜಿ.ಎಸ್.ಟಿ.ಯಲ್ಲಿ ನೋಂದಣಿಗೊಂಡು ಆನಂತರ ರದ್ದು ಮಾಡಿದ ಮೇಲೂ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾದವರಿಗೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ಜಿಎಸ್‌ಟಿಯಿಂದ ವಂಚಿತರಾದವರ ಪಟ್ಟಿಯನ್ನು ಈಗಾಗಲೇ ರಾಜ್ಯ ಕಚೇರಿಗೆ ಕಳುಹಿಸಲಾಗಿದೆ. ಆಗಸ್ಟ್‌ ಒಳಗಾಗಿ ಅವರನ್ನು ಜಿಎಸ್‌ಟಿ ಪೋರ್ಟಲ್‌ನಿಂದ ಅವರ ಹೆಸರು ತೆಗೆದು ಹಾಕಿ ಗೃಹಲಕ್ಷ್ಮೀ ದೊರಕುವ ಹಾಗೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಅನ್ನಭಾಗ್ಯ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಆಹಾರ ಇಲಾಖೆಯ ಅಧಿಕಾರಿಗಳು ಪಡಿತರ ಅಂಗಡಿದಾರರ ಜತೆಗೆ ಸಭೆ ನಡೆಸಬೇಕು. ಅನ್ನಭಾಗ್ಯದ ಅಕ್ಕಿ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಒಂದು ವರ್ಷದಿಂದ ಪಡಿತರ ಅಕ್ಕಿಯನ್ನು ಪಡೆಯದೇ ಇರುವ ಪಡಿತರ ಕಾರ್ಡ್‌ಗಳ ಮಾಹಿತಿ ನೀಡಬೇಕು ಎಂದು ಮಾಹಿತಿ ಕೇಳಿದರು.

ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಜೀವನದಲ್ಲಿ ನಿಜವಾದ ಶಕ್ತಿ ಬಂದಂತಾಗಿದೆ. ಮಹಿಳೆಯರು ಸ್ವಾವಲಂಬನೆಯ ಬದುಕು ನಡೆಸಲು ಸಹಕಾರಿಯಾಗಿದೆ ಎಂದು ಸಚಿವರು ಹೇಳಿದರು‌.

ಗದಗ ತಾಲೂಕು ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ಯೋಜನೆಯ ಪ್ರಗತಿಯ ಕುರಿತು ನಿಖರ ಮಾಹಿತಿ ಒದಗಿಸಬೇಕು. ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಯ ಕುರಿತು ಇನ್ನೂ ಹೆಚ್ಚಿನ ಅರಿವು ಮೂಡಿಸಬೇಕು. ತಾಲೂಕಿನಲ್ಲಿ ಗೃಹಲಕ್ಷ್ಮೀ ಪಡೆಯುತ್ತಿದ್ದ ಕೆಲವು ಮಹಿಳೆಯರು ಮರಣ ಹೊಂದಿದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಫಲಾನುಭವಿಯ ಪಟ್ಟಿಯಿಂದ ಕೈ ಬಿಡಬೇಕು ಹಾಗೂ ಜಿಎಸ್‌ಟಿಯಲ್ಲಿ ನೋಂದಣಿಯಾಗಿ ತದನಂತರ ರದ್ದುಗೊಳಿಸಿದವರ ಹೆಸರನ್ನು ಜಿಎಸ್‌ಟಿ ಪೋರ್ಟಲ್‌ನಿಂದ ಕಡಿಮೆ ಮಾಡಬೇಕು ಎಂದರು.

ಗೃಹಲಕ್ಷ್ಮಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಅಂಗನವಾಡಿ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಸಭೆ ಕರೆದು ಸರ್ವೆ ಕಾರ್ಯ ಚುರುಕುಗೊಳಿಸಬೇಕು ಎಂದು ಹೇಳಿದರು.

ಜಿಲ್ಲಾ ಮಟ್ಟದ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಬಿ.ಬಿ. ಅಸೂಟಿ ಮಾತನಾಡಿ, ಒಂದು ಮನೆಯ ಯಜಮಾನ ಗೃಹಜ್ಯೋತಿ ಫಲಾನುಭವಿಯಾಗಿದ್ದು, ಎಷ್ಟು ಕಡಿಮೆ ವಿದ್ಯುತ್ ಉಪಯೋಗಿಸಿದರೂ ಬಿಲ್ ಬರುತ್ತಿದೆ ಎಂದರು. ಇದಕ್ಕೆ ಉತ್ತರಿಸಿದ ಹೆಸ್ಕಾಂ ಅಧಿಕಾರಿಗಳು, ಗೃಹಜ್ಯೋತಿ ಫಲಾನುಭವಿಗಳಿಗೆ 2022-23ನೇ ಸಾಲಿನಲ್ಲಿ ಉಪಯೋಗಿಸಿದ ವಿದ್ಯುತ್ ಮಾಪನವಾಗಿ ತೆಗೆದುಕೊಳ್ಳುತ್ತೇವೆ. ಹಾಗಾಗಿ ಹಿಂದಿನ ಒಂದು ವರ್ಷ ಮನೆಯಲ್ಲಿ ಯಾರೂ ಇಲ್ಲದ ಕಾರಣ ಅತ್ಯಂತ ಕಡಿಮೆ ವಿದ್ಯುತ್ ಬಳಕೆಯಾಗಿದೆ. ಹಿಂದಿನ ವರ್ಷದ ವಿದ್ಯುತ್ ಬಳಕೆಯನ್ನು ಮಾಪನವಾಗಿ ತೆಗೆದುಕೊಂಡಿದರಿಂದ ಹೀಗಾಗಿದೆ ಎಂದು ಮಾಹಿತಿ ನೀಡಿದರು.

ಪಂಚ ಗ್ಯಾರಂಟಿ ಯೋಜನೆಯ ಸಂಬಂಧಿತ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಗೃಹಲಕ್ಷ್ಮೀ ಯೋಜನೆಯಡಿ ಜನವರಿ ವರೆಗೆ ಗದಗ ತಾಲೂಕಿನಲ್ಲಿ 80,363 ನೋಂದಣಿಯಾದ ಅರ್ಜಿಗಳ ಪೈಕಿ 79,531 ಅರ್ಜಿಗಳಿಗೆ ಮಂಜೂರಾತಿ ದೊರೆತಿದೆ. ಶೇ. 99.28 ಪ್ರಗತಿ ಸಾಧಿಸಿದೆ.

ವಾಕರಸಾ ಸಂಸ್ಥೆಯಿಂದ ಗದಗ ಘಟಕದಲ್ಲಿ 2023 ಜೂ. 11ರಿಂದ 2025 ಮೇ 5ರ ವರೆಗೆ ಶಕ್ತಿ ಯೋಜನೆಯಡಿ ₹48,82,13,616 ಮಹಿಳಾ ಪ್ರಯಾಣಿಕರ ಆದಾಯವಾಗಿದೆ. ಅನ್ನಭಾಗ್ಯ ಯೋಜನೆಯಡಿ ಗದಗ ತಾಲೂಕಿನಲ್ಲಿ ಡಿಸೆಂಬರ್ 2024ರ ಮಾಹೆಯಲ್ಲಿ ಗದಗ ಪಡಿತರ ಪ್ರದೇಶದಲ್ಲಿ 74,596 ಬಿಪಿಎಲ್ ಕಾರ್ಡುದಾರರ ಫಲಾನುಭವಿಗಳಿಗೆ 4,04,31,100ಗಳನ್ನು ಡಿಬಿಟಿ ಮೂಲಕ ಹಣ ಸಂದಾಯ ಮಾಡಲಾಗಿದೆ.

ಗೃಹಜ್ಯೋತಿ ಯೋಜನೆಯಡಿ 2025 ಫೆ. 28ರ ವರೆಗೆ ಗದಗ ಗ್ರಾಮೀಣ ಉಪವಿಭಾಗದಲ್ಲಿ 53,268 ಸ್ಥಾವರಗಳು ಅರ್ಹವಿದ್ದು, 53,060 ಸ್ಥಾವರಗಳ ನೋಂದಣಿಯಾಗಿದೆ. ಶೇ 99.33ರಷ್ಟು ಪ್ರಗತಿಯಾಗಿದೆ. ಯುವನಿಧಿ ಯೋಜನೆಯಡಿ ಗದಗ ತಾಲೂಕಿನಲ್ಲಿ ಜ. 2025ರ ವರೆಗೆ 1704 ಫಲಾನುಭವಿಗಳ ನೋಂದಣಿಯಾಗಿದ್ದು, 826 ಅರ್ಹ ಫಲಾನುಭವಿಗಳಿಗೆ ಡಿಬಿಟಿ ಮೂಲಕ ₹24,57,000 ವರ್ಗಾವಣೆಯಾಗಿದೆ ಎಂದು ಮಾಹಿತಿ ಒದಗಿಸಿದರು.

ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಶಂಭು ಕಾಳೆ, ಮೀನಾಕ್ಷಿ ಬೆನಕಣ್ಣವರ, ಸಂಗು ಕರಕಲಮಟ್ಟಿ, ನಿಂಗಪ್ಪ ದೇಸಾಯಿ, ಸಂಗಮೇಶ ಹಾದಿಮನಿ, ರಮೇಶ ಹೊನ್ನಿನಾಯ್ಕರ್ , ದೇವರೆಡ್ಡಿ ತಿರ್ಲಾಪುರ, ಮಲ್ಲಪ್ಪ ದಂಡಿನ, ಗಣೇಶ ಸಿಂಗ್ ಮಿಟಾಡ, ಮಲ್ಲಪ್ಪ ಬಾರಕೇರ, ಬಾಷಾ ಮಲ್ಲಸಮುದ್ರ, ಸಾವಿತ್ರಿ ಹೂಗಾರ, ಶರೀಫ್, ರುದ್ರಪ್ಪ ಬಾವಿ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಲ್ಸ್‌ ಪೋಲಿಯೋ ಹಾಕಿಸಿ, ಅಂಗವಿಕತೆ ತಪ್ಪಿಸಿ
ಪುಷ್ಪಗಿರಿ ಜೇಸಿಗೆ 50 ವರ್ಷ: ಸಂಭ್ರಮ ಆಚರಣೆ