ಬುದ್ಧನಷ್ಟು ಪ್ರಜಾಪ್ರಭುತ್ವವಾದಿ ಮತ್ತೊಬ್ಬರಿಲ್ಲ

KannadaprabhaNewsNetwork |  
Published : May 15, 2025, 01:39 AM IST
ಕೃತಿ ಬಿಡುಗಡೆ | Kannada Prabha

ಸಾರಾಂಶ

ಪ್ರಪಂಚದಲ್ಲಿ ಬುದ್ಧನಷ್ಟು ಪ್ರಜಾಪ್ರಭುತ್ವವಾದಿ ಮತ್ತೊಬ್ಬರಿಲ್ಲ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಗುಣ ಆತನಲ್ಲಿ ಇತ್ತು ಎಂದು ಸಾಹಿತಿ, ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಪ್ರಪಂಚದಲ್ಲಿ ಬುದ್ಧನಷ್ಟು ಪ್ರಜಾಪ್ರಭುತ್ವವಾದಿ ಮತ್ತೊಬ್ಬರಿಲ್ಲ. ತನ್ನ ತಪ್ಪನ್ನು ಒಪ್ಪಿಕೊಳ್ಳುವ ಗುಣ ಆತನಲ್ಲಿ ಇತ್ತು ಎಂದು ಸಾಹಿತಿ, ಚಿಂತಕ ಡಾ.ಅಗ್ರಹಾರ ಕೃಷ್ಣಮೂರ್ತಿ ತಿಳಿಸಿದ್ದಾರೆ. ನಗರದ ಎಂಪ್ರೆಸ್‌ಕೆಪಿಎಸ್ ಶಾಲೆಯ ಕೆ.ಪಿ.ಪೊರ್ಣಚಂದ್ರ ತೇಜಸ್ವಿ ಸಭಾಂಗಣದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಕೆ.ಬಿ.ಸಿದ್ಧಯ್ಯ ಮತ್ತು ವೀಚಿ ಕನ್ನಡಕ್ಕೆ ಅನುವಾದಿಸಿರುವ ಸಖೀಗೀತ ಪ್ರಕಾಶನ ಹೊರತಂದಿರುವ ನಾಲ್ಕು ಶ್ರೇಷ್ಠ ಸತ್ಯಗಳು ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆತ ಪ್ರವಚನ ನೀಡುವ ಸಂದರ್ಭದಲ್ಲಿ ಒಳ್ಳೆಯದನ್ನು ಯಾರೇ ಹೇಳಿದರೂ ಅದನ್ನು ಸ್ವೀಕರಿಸುವ ಮಹತ್ವದ ಗುಣವನ್ನು ಹೊಂದಿದ್ದ, ಆತನ ಗುಣಕ್ಕೆ ಪಂಡಿತರು ಮಾರು ಹೋಗಿ ಬುದ್ಧನನ್ನು ಅನುಸರಿಸುತ್ತಿದ್ದರು ಎಂದರು. 22ನೇ ಶತಮಾನದಲ್ಲಿ ಜನರು ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂಬ ಮಾನಸಿಕ ತೊಳಲಾಟದಲ್ಲಿ ಇದ್ದಾರೆ. ಮೊದಲು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳದೇ, ಇತರರನ್ನು ಅರ್ಥೈಸಲು ಹೋಗುತ್ತಿರುವುದು ದುರಂತ. ಸಾವು, ನೋವು, ದುಖಃವನ್ನು ಎದುರಿಸಲಾಗದ ಸ್ಥಿತಿಯಲ್ಲಿ ನಾವಿದ್ದೇವೆ. ಆದರೆ ಬುದ್ಧ 2500 ವರ್ಷಗಳ ಹಿಂದೆ ಸಾವು, ನೋವು, ದುಖಃಗಳನ್ನು ಎದುರುಗೊಳ್ಳುವುದು ಹೇಗೆ ಎಂಬುದನ್ನು ತನ್ನ ಪ್ರವಚನಗಳ ಮೂಲಕ ತಿಳಿಸಿ, ಇವೆಲ್ಲವೂ ಸರ್ವವ್ಯಾಪ್ತಿ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿದ್ದ ಎಂದು ತಿಳಿಸಿದರು.ಬುದ್ಧನಿಗೂ, ನಮ್ಮ ವಚನಕಾರರಿಗೂ ಸಾಮ್ಯತೆ ಇರುವುದನ್ನು ಕಾಣಬಹುದು. ಬುದ್ಧ 2500 ವರ್ಷಗಳ ಹಿಂದೆಯೇ ಹೇಳಿದ್ದನ್ನು ವಚನಕಾರರು ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ ಎಂಬ ವಚನದ ಮೂಲಕ ಹೇಳಿದ್ದಾರೆ. ಈ ಕುರಿತು ಹಲವು ಸಂಶೋಧನೆಗಳು ನಡೆದು ವಚನಕಾರರ ಮೇಲೆ ಬುದ್ಧ ಗುರುವಿನ ಪ್ರಭಾವ ಇರುವುದನ್ನು ಕಾಣಬಹುದಾಗಿದೆ ಎಂದು ತಿಳಿಸಿದರು. ಪಿಯುಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಾಲಗುರುಮೂರ್ತಿ ಮಾತನಾಡಿ, ಕೆ.ಬಿ.ಸಿದ್ದಯ್ಯನವರು ನನಗೆ ಪಾಠ ಹೇಳಿದ ಗುರುಗಳು, ವೀಚಿ ಅವರು ನಾನು ಪದವಿ ವ್ಯಾಸಾಂಗಕ್ಕೆ ಸಹಕರಿಸಿದ ಮತ್ತೊಬ್ಬ ಗುರುಗಳು. ಇವರಿಬ್ಬರು ಅನುವಾದಿಸಿರುವ ಭಗವಾನ್ ಬುದ್ಧನ ಕುರಿತ ಪಾಶ್ಚಿಮಾತ್ಯ ಬುದ್ಧನ ಅನುಯಾಯಿಯೊಬ್ಬರು ರಚಿಸಿರುವ ನಾಲ್ಕು ಶ್ರೇಷ್ಠ ಸತ್ಯಗಳು ಕೃತಿಯನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದು ಸಂತಸ ತಂದಿದೆ ಎಂದರು.ಹುಟ್ಟಿದ ದಿನದಿಂದಲೇ ಸಾವು ಖಚಿತ ಎಂಬ ಸತ್ಯವನ್ನುಅರ್ಥೈಸುವುದನ್ನು ನಾವು ಕಲಿತುಕೊಳ್ಳಬೇಕಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕ ತುಂಬಾಡಿರಾಮಯ್ಯ ಮಾತನಾಡಿ, ಬುದ್ಧ ತುಮಕೂರಿಗೆ ಬಂದಿದ್ದು ಕೆ.ಬಿ.ಸಿದ್ದಯ್ಯನವರ ಮೂಲಕ.ಬುದ್ಧ ನ ಬಗ್ಗೆ ಕೆ.ಬಿ.ಸಿದ್ದಯ್ಯ ಸದಾ ಮಾತನಾಡುವುದನ್ನು ನೋಡಿದ ನಮ್ಮೆಲ್ಲರ ಹಿರಿಯರಾದ ಕೆ.ಎಂ.ಶಂಕರಪ್ಪ ಅವರು ಪಾಶ್ಚಿಮಾತ್ಯ ಲೇಖಕ ಬರೆದಿರುವ ಈ ಪುಸ್ತಕವನ್ನು ತಂದು, ಕನ್ನಡಕ್ಕೆ ಅನುವಾದಿಸುವಂತೆ ಸಲಹೆ ನೀಡಿದರು.ಅದನ್ನು ಶಿರಾಸಹ ವಹಿಸಿ ಪಾಲಿಸಿದ ಕೆ.ಬಿ.ಸಿದ್ದಯ್ಯ ಮತ್ತುವೀಚಿ ಅವರು, 31 ವರ್ಷಗಳ ಹಿಂದೆ ಕೃಷ್ಣರಾಜೇಂದ್ರ ಮಂದಿರ (ಟೌನ್‌ಹಾಲ್)ನಲ್ಲಿ ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳ ಮೂಲಕ ಬಿಡುಗಡೆ ಮಾಡಿಸಿದ್ದರು. ಇಂದು ಅದೇ ಪುಸ್ತಕ ಬುದ್ಧ ಪೂರ್ಣೀಮೆಯಂದು ಮರುಮುದ್ರಣಗೊಂಡು ಬಿಡುಗಡೆಯಾಗುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಪಿ.ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ,ಟಿ.ಸಿ,ವಿಸ್ಮಯ ವೀ ಚಿಕ್ಕವೀರಯ್ಯ, ನವೀನ್ ಪೂಜಾರಹಳ್ಳಿ, ಡಾ.ನರಸಿಂಹಮೂರ್ತಿ ಹಳೆಕಟ್ಟೆ ಮತ್ತಿತರರು ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನರೇಗಾ ಮರುಜಾರಿವರೆಗೆ ಹೋರಾಟ : ಸಿಎಂ ಸಿದ್ದರಾಮಯ್ಯ
ಡ್ರಗ್ಸ್‌ ವಿರುದ್ಧ ಸಿಎಂ ತವರಿಂದಲೇ ಹೋರಾಟ : ವಿಜಯೇಂದ್ರ