ವಾಹನಗಳಲ್ಲಿ ಜಾನುವಾರು ಹತ್ತಿಸಲು ರಸ್ತೆ ವಿಭಜಕ ಬಳಕೆಚಂದ್ರು ಕೊಂಚಿಗೇರಿ
ರಾಜ್ಯ ಹೆದ್ದಾರಿಯೇ ದನದ ಸಂತೆ ಮಾರುಕಟ್ಟೆಯಾಗಿ ಪರಿವರ್ತನೆಯಾಗಿದೆ ಎಂದರೆ ನೀವು ನಂಬಲೇ ಬೇಕು. ವಾಹನಗಳಲ್ಲಿ ಜಾನುವಾರು ಹತ್ತಿಸಲು, ರಸ್ತೆ ವಿಭಜಕಗಳು ಬಳಕೆಯಾಗುತ್ತಿವೆ. ಇದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾಗಿದೆ.
ಹೌದು. ಪಟ್ಟಣದ ಮೈಲಾರ-ತೋರಣಗಲ್ಲು ರಾಜ್ಯ ಹೆದ್ದಾರಿಗೆ ಹೊಂದಿಕೊಂಡೇ ಎಪಿಎಂಸಿಗೆ ಸೇರಿದ ಜಾನುವಾರು ಸಂತೆ ಮಾರುಕಟ್ಟೆ ಇದೆ. ಇಲ್ಲಿ ಜಾನುವಾರುಗಳನ್ನು ವಾಹನಗಳಲ್ಲಿ ಹತ್ತಿಸಲು, 2 ದೊಡ್ಡ ರ್ಯಾಂಪ್ಗಳನ್ನು ಮಾಡಿದ್ದರೂ ಅವುಗಳನ್ನು ಬಳಕೆ ಮಾಡದೇ, ವ್ಯಾಪಾರಸ್ಥರು ಹಾಗೂ ಖರೀದಿದಾರರು ರಾಜ್ಯ ಹೆದ್ದಾರಿಯಲ್ಲಿರುವ ರಸ್ತೆ ವಿಭಜಕ ಬಳಕೆ ಮಾಡುತ್ತಿದ್ದಾರೆ. ಇದರಿಂದ ಸುಗಮ ಸಂಚಾರಕ್ಕೆ ಸಂಚಕಾರ ಬಂದಿದೆ. ವಾಹನಗಳಲ್ಲಿ ಜಾನುವಾರು ಹತ್ತಿಸುವ ಸಂದರ್ಭ ರಸ್ತೆಯಲ್ಲಿ ಸಂಚಾರಿಸುವ ಸವಾರರ ಮೇಲೆ ಜಿಗಿದಾಗ ಪ್ರಾಣಕ್ಕೆ ಕುತ್ತು ತರುವ ಅಪಾಯವಿದೆ ಎಂಬ ಆತಂಕವಿದೆ.
ರಾಜ್ಯ ಹೆದ್ದಾರಿ ಅಕ್ಕಪಕ್ಕದಲ್ಲೇ 50ಕ್ಕೂ ಹೆಚ್ಚು ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಇದರಿಂದ ರಸ್ತೆಯಲ್ಲಿ ಎದುರುಗಡೆ ವಾಹನಗಳು ಬಂದಾಗ ಸರಿದುಕೊಳ್ಳಲು ಜಾಗವೇ ಇಲ್ಲದಂತೆ ಆಗುತ್ತದೆ. ಸಿಕ್ಕ ಕಡೆಗಳಲ್ಲಿ ಬೈಕ್ ವಾಹನಗಳನ್ನು ನಿಲುಗಡೆ ಮಾಡಿ ಸಂಚಾರಕ್ಕೆ ತೊಂದರೆ ಮಾಡುತ್ತಾರೆ ಎಂಬ ದೂರು ಕೇಳಿ ಬರುತ್ತಿದೆ.
ಮಾರುಕಟ್ಟೆಯ ಒಳಗೆ ವಾಹನಗಳಲ್ಲಿ ಜಾನುವಾರು ಹತ್ತಿಸಿಕೊಳ್ಳಬೇಕು, ಅದು ಬಿಟ್ಟು ರಸ್ತೆಯ ಮಧ್ಯೆ ವಾಹನಗಳನ್ನು, ಪ್ರತಿ ಸೋಮವಾರ ತಂದು ನಿಲ್ಲಿಸುತ್ತಾರೆ. ಇದರಿಂದ ವಾಹನಗಳ ಸವಾರರಿಗೆ ಸಾಕಷ್ಟು ತೊಂದರೆ ಉಂಟಾಗುತ್ತಿದೆ. ಪ್ರಾಣಾಪಾಯ ಆಗುವ ಮುನ್ನವೇ ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಲಿ ಎಂದು ವಾಹನ ಸವಾರ ಜಗದೀಶ ಒತ್ತಾಯಿಸಿದ್ದಾರೆ.