ಹೊಸಪೇಟೆ: ಮಾನವನು ತನ್ನ ಜೀವನೋಪಯೋಗಕ್ಕಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಂಡು ನೈಪುಣ್ಯದಿಂದ ಕಲಾತ್ಮಕವಾಗಿ ನಿರ್ಮಿಸಿದ ರಚನೆಗಳ ಪುರಾವೆಗಳು, ಸುಮಾರು ನೂರು ವರ್ಷಗಳಿಗೂ ಪೂರ್ವದಲ್ಲಿ ನಿರ್ಮಿತಗೊಂಡ ವಾಸಸ್ಥಾನಗಳು, ಐತಿಹಾಸಿಕ ಕಟ್ಟಡಗಳು, ಅವಶೇಷಗಳು ಹಾಗೂ ಇತರೆ ಸಾಂಸ್ಕೃತಿಕ ಪುರಾವೆಗಳನ್ನು ಸ್ಮಾರಕಗಳು ಎಂದು ಪರಿಗಣಿಸಲಾಗುತ್ತದೆ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಅಧಿಕಾರಿ ಡಾ.ಆರ್. ಶೇಜೇಶ್ವರ ಹೇಳಿದರು.
ರಾಜ್ಯದಲ್ಲಿ ನಿಕ್ಷೇಪ ನಿಧಿಗಳ ಆವಿಷ್ಕಾರ, ವರದಿ ಹಾಗೂ ಹಂಚಿಕೆ ಕುರಿತು ಕರ್ನಾಟಕ ನಿಕ್ಷೇಪ ನಿಧಿ ಅಧಿನಿಯಮ-1962 ಸ್ಪಷ್ಟ ಮಾರ್ಗಸೂಚಿಗಳನ್ನು ಹೊಂದಿದೆ. ಯಾವುದೇ ಮೌಲ್ಯದ ನಿಧಿ ಎಲ್ಲಿಯಾದರೂ ಸಿಕ್ಕಲ್ಲಿ ತಕ್ಷಣ ಸರ್ಕಾರ ಹಾಗೂ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಬೇಕು ಎಂದರು.
ನಿಧಿ ಕಂಡುಹಿಡಿದ ವ್ಯಕ್ತಿ ತಹಸೀಲ್ದಾರರಿಗೆ ಮಾಹಿತಿ ನೀಡಿದರೆ ಅದರ ಮೌಲ್ಯದ ಆಧಾರದ ಮೇಲೆ ಬಹುಮಾನ ನೀಡಲಾಗುತ್ತದೆ. ಈ ಕಾನೂನನ್ನು ಉಲ್ಲಂಘಿಸಿದರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ಎಚ್ಚರಿಸಿದರು.ಸ್ಮಾರಕಗಳನ್ನು ರಕ್ಷಿಸುವ ಜವಾಬ್ದಾರಿ ಕೇವಲ ಸರ್ಕಾರದ ಮೇಲೆ ಮಾತ್ರವಲ್ಲ; ಜನಸಾಮಾನ್ಯರ ಮೇಲೆಯೂ ಇದೆ. ತಮ್ಮ ಸುತ್ತಮುತ್ತಲಿನ ಪಾರಂಪರಿಕ ಕಟ್ಟಡಗಳು, ವಸ್ತುಗಳು ಹಾಗೂ ಸಾಂಸ್ಕೃತಿಕ ಸಂಪತ್ತಿನ ಬಗ್ಗೆ ಜಾಗರೂಕರಾಗಿ ನಡೆದುಕೊಳ್ಳಬೇಕು. ಅವುಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ಮನೋಭಾವ ಬೆಳೆಸಬೇಕು ಎಂದರು.ಅಂತಾರಾಷ್ಟ್ರೀಯ ಮಟ್ಟದಿಂದ ಸ್ಥಳೀಯ ಆಡಳಿತಗಳವರೆಗೆ ವಿವಿಧ ಸರ್ಕಾರಗಳು ಒಟ್ಟಾಗಿ ಕಾಯ್ದೆಗಳನ್ನು ರೂಪಿಸಿ ಸ್ಮಾರಕ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಇದರ ಜೊತೆಗೆ ಖಾಸಗಿ ಸಂಸ್ಥೆಗಳು ತಮ್ಮ ಸಿ.ಎಸ್.ಆರ್ ನಿಧಿಗಳ ಮೂಲಕ ಸ್ಮಾರಕಗಳನ್ನು ದತ್ತು ಪಡೆದು ಅಭಿವೃದ್ಧಿ ಹಾಗೂ ಸಂರಕ್ಷಣೆಗೆ ಕೈಜೋಡಿಸಬೇಕಾದ ಅಗತ್ಯವಿದೆ ಎಂದರು.
ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ವಾಸುದೇವ ಬಡಿಗೇರ ಮಾತನಾಡಿ, ಹಂಪಿಯ ನೈಜ ಇತಿಹಾಸವು ಕಾವ್ಯ ಮತ್ತು ಪುರಾಣಗಳಲ್ಲಿ ಕಣ್ಮರೆಯಾಗಿದೆ. ಹಂಪಿ ಎಂದರೆ ಕೇವಲ ಶ್ರೀಕೃಷ್ಣದೇವರಾಯರು ಅಷ್ಟೇ ಅಲ್ಲ; ಅನೇಕ ಅರಸರು, ರಾಜವಂಶಗಳು ಹಾಗೂ ಪರಂಪರೆಗಳ ಕೊಡುಗೆ ಇದರಲ್ಲಿ ಅಡಗಿದೆ. ಇಂದಿನ ದಿನಗಳಲ್ಲಿ ತಿರುಮಲ-ತಿರುಪತಿ ತಿಮ್ಮಪ್ಪ ಹೆಸರೇ ಹೆಚ್ಚು ನೆನಪಿಗೆ ಬರುತ್ತಿರುವುದಾದರೂ, ಹಂಪಿಯ ಚರಿತ್ರೆಯಲ್ಲಿ ಶಿವ-ಪಾರ್ವತಿ ನೆಲೆಸಿದ ಪರಂಪರೆಯನ್ನು ನಾವು ಮರೆತಿರುವುದು ನೋವಿನ ಸಂಗತಿ ಎಂದರು.ಪ್ರಾಧ್ಯಾಪಕ ಡಾ. ಎಸ್.ವೈ. ಸೋಮಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಭಾಗದ ಮುಖ್ಯಸ್ಥ ಡಾ. ರಮೇಶ ನಾಯಕ ಅಧ್ಯಕ್ಷತೆ ವಹಿಸಿದ್ದರು. ಡಾ.ಯರ‍್ರಿಸ್ವಾಮಿ ಮತ್ತಿತರರಿದ್ದರು. ಸಂಶೋಧನಾರ್ಥಿ ಅಂಬುಜಾ ನಿರ್ವಹಿಸಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆದ ಹಂಪಿ ಸ್ಮಾರಕಗಳ ಸಂರಕ್ಷಣಾ ಕಾನೂನುಗಳ ಅರಿವು ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕ ಡಾ.ವಾಸುದೇವ ಬಡಿಗೇರ ಮಾತನಾಡಿದರು.