ಹುಟ್ಟೂರಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಲೋಕೇಶ್ ಅಂತ್ಯಕ್ರಿಯೆ

KannadaprabhaNewsNetwork |  
Published : Oct 28, 2025, 12:03 AM IST
27ಕೆಎಂಎನ್ ಡಿ23,24,25 | Kannada Prabha

ಸಾರಾಂಶ

ಪಂಜಾಬ್‌ನ ಪಠಾಣ್‌ಕೋಟ್ ಗಡಿಯಲ್ಲಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಸಾವನ್ನಪ್ಪಿದ್ದ ಬಿಎಸ್‌ಎಫ್ ವೀರಯೋಧ ಲೋಕೇಶ್ ಅವರ ಹುಟ್ಟೂರು ತಾಲೂಕಿನ ಮೈಲಾರಪಟ್ಟಣ ಗ್ರಾಮದಲ್ಲಿ ಕುಟುಂಬಸ್ಥರು ಮತ್ತು ಸಹಸ್ರಾರು ಮಂದಿ ಸಾರ್ವಜನಿಕರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಂಜಾಬ್‌ನ ಪಠಾಣ್‌ಕೋಟ್ ಗಡಿಯಲ್ಲಿ ಹೃದಯಾಘಾತ ಮತ್ತು ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಸಾವನ್ನಪ್ಪಿದ್ದ ಬಿಎಸ್‌ಎಫ್ ವೀರಯೋಧ ಲೋಕೇಶ್ ಅವರ ಹುಟ್ಟೂರು ತಾಲೂಕಿನ ಮೈಲಾರಪಟ್ಟಣ ಗ್ರಾಮದಲ್ಲಿ ಕುಟುಂಬಸ್ಥರು ಮತ್ತು ಸಹಸ್ರಾರು ಮಂದಿ ಸಾರ್ವಜನಿಕರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

ಪಠಾಣ್‌ಕೋಟ್ ಸಮೀಪದ ಗುರುದಾಸ್‌ಪುರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ ಮೃತಪಟ್ಟಿದ್ದ ಯೋಧ ಲೋಕೇಶ್ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದಲ್ಲಿ ಸೋಮವಾರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗಿತ್ತು.

ನಂತರ ಬಿಎಸ್‌ಎಫ್ ಯೋಧರನ್ನೊಳಗೊಂಡ ಸೇನಾ ವಾಹನದಲ್ಲಿ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ಲೋಕೇಶ್ ಅವರ ಮನೆ ಬಳಿಗೆ ಮಧ್ಯಾಹ್ನ 2 ಗಂಟೆ ವೇಳೆಗೆ ತಂದು ಪೂಜೆ ಸಲ್ಲಿಸಿ ಕೆಲ ಸಮಯ ಸಾರ್ವಜನಿಕ ದರ್ಶನಕ್ಕಿಡಲಾಗಿತ್ತು.

ನಂತರ ಕೆ.ಆರ್.ಪೇಟೆ ಮೂಲಕ ಲೋಕೇಶ್ ಅವರ ಪಾರ್ಥಿವ ಶರೀರ ಸಂಜೆ 4 ಗಂಟೆ ವೇಳೆಗೆ ತಾಲೂಕಿಗೆ ಪ್ರವೇಶಿಸುತ್ತಿದ್ದಂತೆ ತಾಲೂಕು ಆಡಳಿತದಿಂದ ತಹಸೀಲ್ದಾರ್ ಜಿ.ಆದರ್ಶ, ಸಿಪಿಐ ಹೇಮಂತ್‌ಕುಮಾರ್, ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್‌ಐ ರಾಜೇಂದ್ರ, ಪಟ್ಟಣ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಶಿವಕುಮಾರ್ ಮತ್ತು ಸಚಿವ ಎನ್. ಚಲುವರಾಯಸ್ವಾಮಿ ಪುತ್ರ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಸಚ್ಚಿನ್ ಅವರು ಪಾರ್ಥಿವ ಶರೀರವಿಟ್ಟಿದ್ದ ಪೆಟ್ಟಿಗೆಗೆ ಹಾರ ಹಾಕಿ ಗೌರವ ನಮನ ಸಲ್ಲಿಸಿ ಅಂತ್ಯ ಸಂಸ್ಕಾರ ಮುಗಿಯುವ ತನಕ ಜೊತೆಯಲ್ಲಿದ್ದರು.

ಪಟ್ಟಣದ ಹೊರವಲಯ ಕೆ.ಮಲ್ಲೇನಹಳ್ಳಿ ಸಮೀಪ ಪಾರ್ಥಿವ ಶರೀರ ಹೊತ್ತ ಸೇನಾ ವಾಹನ ಬರುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಾರ್ವಜನಿಕರು ಮತ್ತು ಗ್ರಾಮದ ಯುವಕರು ವೀರಯೋಧ ಲೋಕೇಶ್ ಅಮರ್‌ ರಹೇ, ಜೈ ಜವಾನ್ ಘೋಷಣೆಯೊಂದಿಗೆ ಪಟ್ಟಣದ ಚಾಮರಾಜನಗರ- ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮಂಡ್ಯ ವೃತ್ತ, ಟಿ.ಮರಿಯಪ್ಪ ವೃತ್ತ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದ ಮಾರ್ಗವಾಗಿ ಬೈಕ್ ರ್‍ಯಾಲಿ ಮೂಲಕ ಸ್ವಗ್ರಾಮ ಮೈಲಾರಪಟ್ಟಣಕ್ಕೆ ಕರೆದೊಯ್ದರು.

ಸೇನಾ ವಾಹನ ಗ್ರಾಮಕ್ಕೆ ಪ್ರವೇಶಿಸುತ್ತಿದ್ದಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು ಬ್ಯಾಂಡ್‌ಸೆಟ್ ನುಡಿಸಿ ಬರಮಾಡಿಕೊಂಡರು. ಗ್ರಾಮದಲ್ಲಿ ನೆರೆದಿದ್ದ ಸಹಸ್ರಾರು ಮಂದಿ ಸಾರ್ವಜನಿಕರು ಅಂತಿಮ ದರ್ಶನಕ್ಕಾಗಿ ಮುಗಿಬಿದ್ದರು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಜನದಟ್ಟಣೆ ಹೆಚ್ಚಾದ ಹಿನ್ನೆಲೆಯಲ್ಲಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣಕ್ಕೆ ತಂದು ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.

ನಂತರ ಗ್ರಾಮದ ಹೊರವಲಯದ ಅವರ ಜಮೀನಿಗೆ ಲೋಕೇಶ್ ಅವರ ಪಾರ್ಥಿವ ಶರೀರ ಹೊತ್ತು ತಂದು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ ಅಲ್ಲಿಯೂ ಕೆಲ ಹೊತ್ತು ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ಸಾರ್ವಜನಿಕ ದರ್ಶನದ ನಂತರ ಮೃತ ಯೋಧನ ಗೌರವಾರ್ಥ 9 ಮಂದಿ ಬಿಎಸ್‌ಎಫ್ ಯೋಧರು ಮೂರು ಸುತ್ತು ಕುಶಾಲು ತೋಪು ಹಾರಿಸಿ ಮೌನಾಚರಣೆ ಆಚರಿಸಿ ಅಂತಿಮ ಗೌರವ ನಮನ ಸಲ್ಲಿಸಿದರು. ಪಾಂಡವಪುರ ಉಪ ವಿಭಾಗಾಧಿಕಾರಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ಕೊಟ್ಟು ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.

ಮೃತ ಯೋಧ ಲೋಕೇಶ್ ಪಾರ್ಥಿವ ಶರೀರಕ್ಕೆ ಹೊದಿಸಿದ್ದ ರಾಷ್ಟ್ರಧ್ವಜವನ್ನು ಪತ್ನಿ ಆಶಾ ಅವರಿಗೆ ಹಸ್ತಾಂತರಿಸಿದ ನಂತರ ಒಕ್ಕಲಿಗ ಸಂಪ್ರಯದಾದಂತೆ ಮೃತದೇಹಕ್ಕೆ ಅಗ್ನಿ ಸ್ಪರ್ಷ ಮಾಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮೃತ ಯೋಧ ಲೋಕೇಶ್ ಪತ್ನಿ ಆಶಾ, ಪುತ್ರಿಯರಾದ ಹರಿಣಿ ಎಲ್.ಗೌಡ, ಹಂಷಿಣಿ ಎಲ್.ಗೌಡ, ಸಹೋದರ ಎಎಸ್‌ಐ ನಾಗರಾಜು, ಸಹೋದರಿ ಸವಿತ ಸೇರಿದಂತೆ, ಕುಟುಂಬಸ್ಥರು, ಸಂಬಂಧಿಕರು ಹಾಗೂ ಪಟ್ಟಣ ಮತ್ತು ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!