ಕಂಪ್ಲಿ: ತಾಲೂಕಿನ ಬಳ್ಳಾಪುರ ಗ್ರಾಮದ ಗದ್ದೆಯಲ್ಲಿ ಕುಮ್ಮಟದುರ್ಗ- ಹೊಯ್ಸಳರ ಕಾಲಕ್ಕೆ ಸೇರಿದ ಸುಮಾರು 12ರಿಂದ 13ನೇ ಶತಮಾನದ ಅಪರೂಪದ ವೀರಗಲ್ಲೊಂದು ಪತ್ತೆಯಾಗಿದೆ. ಇದು ಇತಿಹಾಸಾಸಕ್ತರಲ್ಲಿ ವಿಶೇಷ ಕುತೂಹಲ ಮೂಡಿಸಿದೆ.
ರೈತ ಹರಿಜನ ದೊಡ್ಡಮಾಯಪ್ಪ ಅವರ ಗದ್ದೆಯಲ್ಲಿ ಬಿದ್ದಿದ್ದ ವೀರಗಲ್ಲು ಮೂರು ತುಂಡುಗಳಾಗಿ ಚದುರಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದೆ. ಅವುಗಳನ್ನು ಜೋಡಿಸಿ ಪ್ರಾಥಮಿಕ ಅಧ್ಯಯನ ನಡೆಸಲಾಗಿದೆ. ವೀರಗಲ್ಲಿನ ಮೇಲ್ಭಾಗ ಅಥವಾ ಇನ್ನೊಂದು ಪ್ರಮುಖ ಭಾಗ ಕಣ್ಮರೆಯಾಗಿದೆ. ಶಾಸನದಲ್ಲಿ ನಾಗಯ ಎಂಬ ವೀರನು ಚಿಂತಮಕಲ್ಲು (ಇಂದಿನ ಚಿತ್ರದುರ್ಗ) ಪ್ರದೇಶದಲ್ಲಿ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ ಕುರಿತು ಉಲ್ಲೇಖವಿದೆ. ರಾಜ್ಯದ ರಕ್ಷಣೆಯ ಸಲುವಾಗಿ ನಡೆದ ಯುದ್ಧದಲ್ಲಿ ಶೌರ್ಯ ಪ್ರದರ್ಶಿಸಿ ಪ್ರಾಣತ್ಯಾಗ ಮಾಡಿದ ನಾಗಯ ವೀರನನ್ನು ಸ್ಮರಿಸಿ ಈ ವೀರಗಲ್ಲು ಸ್ಥಾಪಿಸಲಾಗಿದೆ ಎಂಬುದು ಶಾಸನದ ಸಾರವಾಗಿದೆ.
ಈ ಕುರಿತು ಮೈಸೂರಿನ ಭಾರತೀಯ ಪುರಾತತ್ವ ಇಲಾಖೆ ನಿರ್ದೇಶಕ ಡಾ. ಮುನಿರತ್ನಂ ಮಾತನಾಡಿ, ಗೋನೆಯ ನಾಯಕನ ಮಗನಾಗಿದ್ದ ಪ್ರಾಂತಾಧಿಕಾರಿ ಬೊಮ್ಮಯ್ಯನ ಪುತ್ರ ನಾಗಯ, ರಾಜ್ಯದ ಉಳಿವಿಗಾಗಿ ಚಿಂತಮಕಲ್ಲಿನಲ್ಲಿ ನಡೆದ ಕಾಳಗದಲ್ಲಿ ವೀರಮರಣ ಹೊಂದಿದ ಘಟನೆ ಈ ವೀರಗಲ್ಲಿನ ಶಾಸನದಲ್ಲಿ ವಿವರವಾಗಿ ಪ್ರತಿಬಿಂಬಿತವಾಗಿದೆ. ಇದು ಹೊಯ್ಸಳ- ಕುಮ್ಮಟದುರ್ಗ ಕಾಲಘಟ್ಟದ ಇತಿಹಾಸ ಅರಿಯಲು ಪ್ರಮುಖ ದಾಖಲೆ ಎಂದು ತಿಳಿಸಿದರು.ಇನ್ನು ಗಂಗಾವತಿಯ ಖ್ಯಾತ ಇತಿಹಾಸ ಸಂಶೋಧಕ ಶರಣಪ್ಪ ಕೋಲ್ಕಾರ, ಶಾಸನದ ಭಾಷಾ ಶೈಲಿ, ಶಿಲ್ಪಕಲೆ ಹಾಗೂ ಐತಿಹಾಸಿಕ ಹಿನ್ನೆಲೆಗಳನ್ನು ಅವಲೋಕಿಸಿದರೆ ಈ ವೀರಗಲ್ಲು ಕಂಪಿಲರಾಯನ ಕಾಲಘಟ್ಟಕ್ಕೆ ಸೇರಿರಬಹುದಾದ ಸಾಧ್ಯತೆ ಹೆಚ್ಚಾಗಿದೆ. ಇದು ಉತ್ತರ ಕರ್ನಾಟಕದ ಮಧ್ಯ ಯುಗೀನ ರಾಜಕೀಯ ಹಾಗೂ ಯುದ್ಧ ಇತಿಹಾಸಕ್ಕೆ ಹೊಸ ಆಯಾಮ ನೀಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ವೀರಗಲ್ಲು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯರು ಹಾಗೂ ಇತಿಹಾಸ ಪ್ರೇಮಿಗಳು ಸಂರಕ್ಷಣೆಯ ಅಗತ್ಯವಿದೆ ಎಂದು ಒತ್ತಾಯಿಸುತ್ತಿದ್ದು, ಪುರಾತತ್ವ ಇಲಾಖೆ ತಕ್ಷಣ ಕ್ರಮ ಕೈಗೊಂಡು ವೀರಗಲ್ಲನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ ಸಂಶೋಧನೆ ನಡೆಸಬೇಕೆಂದು ಮನವಿ ಮಾಡುತ್ತಿದ್ದಾರೆ. ಈ ಪತ್ತೆ ತಾಲೂಕು ಹಾಗೂ ಜಿಲ್ಲೆಯ ಇತಿಹಾಸಕ್ಕೆ ಹೊಸ ಬೆಳಕು ಚೆಲ್ಲಿದ ಮಹತ್ವದ ಘಟನೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.