ಲಕ್ಕುಂಡಿಯಲ್ಲಿ ಸಮರ್ಪಕ ವಿದ್ಯುತ್‌ಗಾಗಿ ಹೆಸ್ಕಾಂ ಕಚೇರಿಗೆ ಮುತ್ತಿಗೆ

KannadaprabhaNewsNetwork |  
Published : Sep 24, 2025, 01:01 AM IST
ಗದಗ ತಾಲೂಕಿನ ಲಕ್ಕುಂಡಿಯ ಹೆಸ್ಕಾಂ ಶಾಖಾ ಕಚೇರಿಗೆ ಮುತ್ತಿಗೆ ಹಾಕಿ ತೋಟದ ಮನೆಗಳಿಗೆ ರಾತ್ರಿ ವೇಳೆ ನಿರಂತರ ಸಿಂಗಲ್ ಪೇಸ್ ವಿದ್ಯುತ್ ಪೊರೈಕೆ ಮಾಡಲು ಆಗ್ರಹಿಸಿ ರೈತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ ಕುರಿ ಅವರು, ರೈತರೊಂದಿಗೆ ಚರ್ಚಿಸುತ್ತಾ, ಈಗಾಗಲೇ ಹೆಸ್ಕಾಂ ಕಚೇರಿಯು ಸಿಂಗಲ್ ಫೇಸ್ ವಿದ್ಯುತ್ ಪೊರೈಸಲು 10 ಆಂಪ್ಸ್ ನಿಗದಿಪಡಿಸಿದ್ದು, ಎಲ್ಲ ತೋಟದ ಮನೆಗಳಿಗೂ ಆರ್.ಆರ್. ನಂಬರ್‌ ಅಳವಡಿಸಿಕೊಂಡು ಅಧಿಕೃತಗೊಳಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು.

ಗದಗ: ರಾತ್ರಿ ವೇಳೆ ರೈತರ ತೋಟದ ಮನೆಗಳಿಗೆ ಉಚಿತ ಸಿಂಗಲ್ ಫೇಸ್ ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ತಾಲೂಕಿನ ಲಕ್ಕುಂಡಿ ಗ್ರಾಮದ ಹೆಸ್ಕಾಂ ಶಾಖಾ ಕಚೇರಿಗೆ ಮುತ್ತಿಗೆ ಹಾಕಿದ ರೈತರು ಬೀಗ ಜಡಿಯಲೆತ್ನಿಸಿದರು.

ಕಳೆದ 3 ತಿಂಗಳಿಂದ ಇಲ್ಲಿಯ ನೂರಾರು ತೋಟದ ಮನೆಗಳಿಗೆ ಹೆಸ್ಕಾಂ ಕಚೇರಿಯು ಸಿಂಗಲ್ ಫೇಸ್ ವಿದ್ಯುತ್ ಪೊರೈಕೆಯನ್ನು ಸ್ಥಗಿತಗೊಳಿಸಿರುವ ಕ್ರಮ ಖಂಡಿಸಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಅಧಿಕಾರಿಯು ದೂರವಾಣಿ ಕರೆ ಮೂಲಕ ಮಾತನಾಡುವಾಗ, ನನಗೆ ಖಾಸಗಿ ಕೆಲಸವಿದ್ದು, ಈಗಾಗಲೇ ಕೆಲವು ರೈತರ ಜತೆ ಈ ಕುರಿತು ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದ್ದೇನೆ. ನೀವು ಬೇಕಾದರೆ ಪ್ರತಿಭಟನೆ ಮಾಡಿ ಎಂದು ಹೇಳಿದಾಗ ಆಕ್ರೋಶಗೊಂಡ ರೈತರು ಬೀಗ ಹಾಕಲು ಮುಂದಾದರು. ಆಗ ಪೊಲೀಸರು ತಡೆದು ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ನಾಗರಾಜ ಕುರಿ ಅವರು, ರೈತರೊಂದಿಗೆ ಚರ್ಚಿಸುತ್ತಾ, ಈಗಾಗಲೇ ಹೆಸ್ಕಾಂ ಕಚೇರಿಯು ಸಿಂಗಲ್ ಫೇಸ್ ವಿದ್ಯುತ್ ಪೊರೈಸಲು 10 ಆಂಪ್ಸ್ ನಿಗದಿಪಡಿಸಿದ್ದು, ಎಲ್ಲ ತೋಟದ ಮನೆಗಳಿಗೂ ಆರ್.ಆರ್. ನಂಬರ್‌ ಅಳವಡಿಸಿಕೊಂಡು ಅಧಿಕೃತಗೊಳಿಸಿಕೊಳ್ಳಬೇಕು ಎಂದು ವಿನಂತಿಸಿಕೊಂಡರು.

ಇದಕ್ಕೆ ಒಪ್ಪದ ರೈತರು ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಪ್ರತಿವರ್ಷ ನಷ್ಟದಲ್ಲಿಯೇ ಕೃಷಿಯನ್ನು ಮಾಡಬೇಕಾಗುತ್ತಿದೆ. ಇನ್ನೂ ಮೀಟರ್ ಅಳವಡಿಸಿಕೊಳ್ಳಲು ಹತ್ತಾರು ಸಾವಿರೂ ರು. ಖರ್ಚಾಗುತ್ತದೆ. ಇದು ಸಾಧ್ಯವಿಲ್ಲ. ಆದ್ದರಿಂದ ಈ ಮೊದಲು ರಾತ್ರಿ ವೇಳೆ ಸಿಂಗಲ್ ಫೇಸ್ ವಿದ್ಯುತ್ ನೀಡಿದಂತೆ ಅದನ್ನು ಮುಂದುವರಿಸುವಂತೆ ಪಟ್ಟು ಹಿಡಿದರು.ಇದಕ್ಕೆ ಅವಕಾಶವಿಲ್ಲ. ಆದರೆ ತಾವು ಹೆಚ್ಚಿನ ಬೇಡಿಕೆಯನ್ನು ಸರ್ಕಾರದಿಂದ ಪಡೆದುಕೊಂಡರೆ ಕಾನೂನು ಪ್ರಕಾರ ಕೊಡಬಹುದು. ತಾವು ತೆಗೆದುಕೊಂಡ ಪರವಾನಗಿಯ ನಿಗದಿಪಡಿಸಿದ 5 ಎಚ್‌ಪಿ ಹೊರತುಪಡಿಸಿ ಹೆಚ್ಚಿನ ವಿದ್ಯುತ್ ನೀಡುವುದು ಸಾಧ್ಯವಿಲ್ಲ ಎಂದು ಅಧಿಕಾರಿ ಹೇಳಿದರು.

ಈ ಸಂದರ್ಭದಲ್ಲಿ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಸಿದ್ರಾಮೇಶ ಗಡೇದ ಅವರು ಮಧ್ಯಸ್ಥಿಕೆ ವಹಿಸಿ ಇಲ್ಲಿಯ ಚರ್ಚೆಯ ವಿಷಯವನ್ನು ಬರೆದು ಹೆಸ್ಕಾಂ ಮೇಲಧಿಕಾರಿಗಳಿಗೆ ತಿಳಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯುತ್ ಪೊರೈಸಲು ಉಪಾಯನ್ನು ಕಂಡುಕೊಳ್ಳಬೇಕು. ರೈತರು ಸಹ ನಿಗದಿಪಡಿಸಿದ ಆಂಪ್ಸ್‌ನ್ನು ಮಾತ್ರ ಬಳಸಲು ವಿನಂತಿಸಿಕೊಂಡರು. ಸಿಂಗಲ್ ಫೇಸ್ ವಿದ್ಯುತ್ ಪೂರೈಸಲು ಎಇಇ ಕುರಿ ಅವರು ಒಂದು ವಾರ ಸಮಯ ತೆಗೆದುಕೊಂಡ ನಂತರ ರೈತರು ಪ್ರತಭಟನೆ ಹಿಂದಕ್ಕೆ ಪಡೆದರು.ಈ ವೇಳೆ ಗವಿಶಿದ್ದಪ್ಪ ಯಲಿಶಿರುಂಜ, ಪ್ರಕಾಶ ಅರಹುಣಶಿ, ವೆಂಕಟೇಶ ದೊಂಗಡೆ, ಸುರೇಶ ಕವಲೂರು, ನಾಗರಾಜ ಖಂಡು, ಸುರೇಶ ಅಬ್ಬಿಗೇರಿ, ರಾಜು ಪಾಟೀಲ, ಮಲ್ಲಪ್ಪ ನಿಡಗುಂದಿ, ಮಂಜುನಾಥ ಶಲವಡಿ, ನಿಂಗನಗೌಡ ರೋಣದ, ಬಾಳನಗೌಡ ಪಾಟೀಲ, ಮಂಜುನಾಥ ಯಾವಗಲ್ಲ ಸೇರಿದಂತೆ ನೂರಾರು ರೈತರು ಇದ್ದರು.ಟಿಸಿ ಪಡೆಯಲು ಲಂಚ: ಆರೋಪರೈತರಿಗೆ ತ್ರೀ ಫೇಸ್ ವಿದ್ಯುತ್ ಪಡೆಯಲು ಹಾಕಿದ ಟಿಸಿ ಸುಟ್ಟರೆ ಮೂರು ದಿನಗಳೊಳಗೆ ಕೊಡಬೇಕಾದ ಟಿಸಿ 10 ದಿನವಾದರೂ ಕೊಡುವುದಿಲ್ಲ ಎಂದು ರೈತರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಲಂಚ ನೀಡಿದರೆ ಅಥವಾ ಜನಪ್ರತಿನಿಧಿಗಳಿಂದ ಹೇಳಿಸಿದರೆ 24 ಗಂಟೆಗಳ ಒಳಗಾಗಿ ಟಿಸಿ ಬರುತ್ತದೆ ಎಂದು ನಾಗರಾಜ ಖಂಡು, ಈರಪ್ಪ ಅಬ್ಬಿಗೇರಿ, ನಿಂಗಪ್ಪ ಗಡಗಿ, ಪತ್ರೆಪ್ಪ ಮುಘಂಡಮಠ, ಕರಿಯಪ್ಪ ತಿಮ್ಮಾಪೂರ ಸೇರಿದಂತೆ ಇತರರು ಆರೋಪಿಸಿದರು.

ಅಕ್ರಮ ವಿದ್ಯುತ್, ವಾಗ್ವಾದರೈತರು ಅಕ್ರಮವಾಗಿ ವಿದ್ಯುತ್ ಬಳಕೆ ಮಾಡುತ್ತಾರೆ, ಎಂದಾಗ ಓರ್ವ ರೈತ ಆಕ್ರೋಶಗೊಂಡು ಯಾರು ಮಾಡುತ್ತಾರೆ ಹೇಳಿ ಎಂದಾಗ ನೀನೇ ಮಾಡುತ್ತೀಯಾ ಎಂದು ಹೆಸ್ಕಾಂ ಅಧಿಕಾರಿ ನಾಗರಾಜ ಕುರಿ ಹೇಳಿದರು.

ಇದಕ್ಕೆ ಆಕ್ರೋಶಗೊಂಡ ರೈತ, ನಾನು ಅಕ್ರಮ ಮಾಡಿದ್ದನ್ನು ತೋರಿಸುವ ವರೆಗೂ ಬಿಡುವುದಿಲ್ಲ. ನಮ್ಮ ಜಮೀನಿಗೆ ಹೋಗೋಣ ನಡೆಯಿರಿ ಎಂದು ಪಟ್ಟು ಹಿಡಿದಾಗ ಈ ಸಂದರ್ಭದಲ್ಲಿ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಸಿಪಿಐ ಗಡೇದ ಅವರು ಸಮಾಧಾನ ಮಾಡಿ ಪರಿಸ್ಥಿತಿಯನ್ನು ಶಾಂತಗೊಳಿಸಿದರು.

PREV

Recommended Stories

ಉಡುಪಿ-ಉಚ್ಚಿಲ ದಸರಾ: ನಿತ್ಯ ಸಾವಿರಾರು ಮಹಿಳೆಯರಿಂದ ಕುಂಕುಮಾರ್ಚನೆ
ಡಾ.ಬಿ.ಆರ್‌.ಅಂಬೇಡ್ಕರ್‌ ಸಭಾಭವನ ಉದ್ಘಾಟನೆ