ಕೊಪ್ಪಳ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಕೊಪ್ಪಳದ ಎಂಟು ಸ್ಪಾಂಜ್ ಐರನ್ ಘಟಕಗಳನ್ನು ಮುಚ್ಚುವ ಆದೇಶ ಹೊರಡಿಸಿ ನಾಲ್ಕು ದಿನ ಕಳೆದರೂ ಪ್ರಾದೇಶಿಕ ಪರಿಸರ ಕಚೇರಿ ಹಾಗೂ ಜಿಲ್ಲಾಡಳಿತ ಘಟಕಗಳಿಗೆ ಬೀಗಮುದ್ರೆ ಹಾಕಲು ಮೀನಮೇಷ ಎಣಿಸುತ್ತಿರುವುದು ಖಂಡನೀಯ ಎಂದು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಕಾರ್ಖಾನೆಗಳು ನ್ಯಾಯಾಲಯದಿಂದ ತಡೆಯಾಜ್ಞೆ ತಂದರೆ ಆದೇಶ ಜಾರಿಯ ವೈಫಲ್ಯದ ಹೊಣೆಯನ್ನು ಜಿಲ್ಲಾಡಳಿತ ಮತ್ತು ಪರಿಸರ ಅಧಿಕಾರಿಗಳೇ ಹೊರಬೇಕಾಗುತ್ತದೆ. ಹೀಗಾಗಿ ಶಾಸಕರು, ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ತಕ್ಷಣವೇ ಮುಚ್ಚುವ ಆದೇಶ ಜಾರಿಗೊಳಿಸಬೇಕು. ಘಟಕಗಳನ್ನು ಮುಚ್ಚುವಲ್ಲಿ ವಿಫಲವಾದರೆ ಜನಪ್ರತಿನಿಧಿಗಳ ಬದ್ಧತೆಯ ಬಗ್ಗೆಯೂ ಜನರು ಸಂಶಯಪಡುವಂತಾಗುತ್ತದೆ ಎಂದು ಎಚ್ಚರಿಸಿದರು.
ಎಂಟು ಸ್ಪಾಂಜ್ ಐರನ್ ಘಟಕಗಳಷ್ಟೇ ಅಲ್ಲದೆ ಅಂತರ್ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಆಸಿಡ್, ಸಿಮೆಂಟ್, ಪೆಲೆಟ್, ಕ್ಯಾಪ್ಟಿವ್ ಪವರ್, ಕೋಕ್ ಬೆನಿಫಿಕೇಷನ್, ಕಾಸ್ಟಿಂಗ್ ಹಾಗೂ ಉಕ್ಕು ತಯಾರಿಕಾ ಘಟಕಗಳ ಮೇಲೂ ತುರ್ತು ತಪಾಸಣೆ ನಡೆಸಬೇಕು. ಪರಿಸರಕ್ಕೆ ಹಾನಿ ಉಂಟುಮಾಡುತ್ತಿರುವ ಘಟಕಗಳನ್ನು ಶಾಶ್ವತವಾಗಿ ಬಂದ್ ಮಾಡಬೇಕು. ಆಗ ಮಾತ್ರ 22 ಗ್ರಾಮಗಳ ಜನರ ಆರೋಗ್ಯ ಹಾಗೂ ಮುಂದಿನ ಪೀಳಿಗೆಯ ಭವಿಷ್ಯ ರಕ್ಷಿಸಲು ಸಾಧ್ಯ ಎಂದು ಆಗ್ರಹಿಸಿದರು.ಈ ಭಾಗದ ಹತ್ತು ಮನೆಗಳಲ್ಲಿ ಒಬ್ಬರಿಗೆ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳು ಬಾಧಿಸುತ್ತಿವೆ ಎಂಬ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ ಎಂದು ಹೋರಾಟಗಾರರು ಕಳವಳ ವ್ಯಕ್ತಪಡಿಸಿದರು.
ಧರಣಿಯಲ್ಲಿ ಪ್ರಧಾನ ಸಂಚಾಲಕ ಪ್ರೊ. ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ವೆಂಕಣ್ಣಾಚಾರ ಕಟ್ಟಿ, ಶಂಭುಲಿಂಗಪ್ಪ ಹಲಗೇರಿ, ಬಿ.ಜಿ. ಕರಿಗಾರ, ಶಿವಪ್ಪ ಬನಪ್ಪನವರ, ವಿಜಯಮಹಾಂತೇಶ ಹಟ್ಟಿ, ಪರ್ವಿನ್, ಗಂಗಮ್ಮ ಕೆ. ಸೇರಿದಂತೆ ಹಲವರು ಪಾಲ್ಗೊಂಡಿದ್ದರು.