ಶತಮಾನೋತ್ತರ ವಿಂಶತಿ ವರ್ಷದಲ್ಲಿರುವ ಗುರುವಾಯನಕೆರೆ ಶಾಲೆಗೀಗ ಹೊಸ ಮೆರುಗು
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಸರ್ಕಾರಿ ಶಾಲೆಗಳೆಂದರೆ ಪಾಳುಬಿದ್ದ ಕಟ್ಟಡಗಳು, ಸೋರುವ ಕೊಠಡಿಗಳು, ಬಣ್ಣವೇ ಕಾಣದ ಗೋಡೆಗಳು ಎಂಬಿತ್ಯಾದಿ ತಪ್ಪು ಕಲ್ಪನೆಗಳಿವೆ. ಆದರೆ ಗುರುವಾಯನಕೆರೆಯ ಸರ್ಕಾರಿ ಶಾಲೆ ಇದಕ್ಕೆ ತದ್ವಿರುದ್ಧವಾಗಿದ್ದು ಸರ್ಕಾರಿ ಅನುದಾನವಿಲ್ಲದೆ ಸ್ಥಳೀಯ ಸಂಪನ್ಮೂಲದಿಂದಲೇ ಹವಾನಿಯಂತ್ರಿತ ‘ಹೈಟೆಕ್ ಎ.ಸಿ.’ ಕೊಠಡಿ ಕಟ್ಟಿಸಿ ಎಲ್ಲರೂ ಹುಬ್ಬೇರುವಂತೆ ಮಾಡಲಾಗಿದೆ.ಶಾಲಾ ಹಳೆವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಹಿತೈಷಿಗಳು ಜೊತೆಯಾಗಿ ರಾಜ್ಯಕ್ಕೇ ಮೊದಲು ಎಂಬಂತೆ ತಮ್ಮ ಶಾಲೆಗೆ ಹೊಸ ಹವಾನಿಯಂತ್ರಿತ ಕಿಂಡರ್‌ಗಾರ್ಡನ್ ಬ್ಲಾಕ್ ನಿರ್ಮಿಸಿದ್ದಾರೆ. 1905 ರಲ್ಲಿ ಪ್ರಾರಂಭವಾದ ಗುರುವಾಯನಕೆರೆ ಶಾಲೆಯಲ್ಲಿ ಪ್ರಸ್ತುತ 141 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಐದು ಮಂದಿ ಖಾಯಂ ಶಿಕ್ಷಕರು ಮತ್ತು ಇಬ್ಬರು ಅತಿಥಿ ಶಿಕ್ಷಕರಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರ ನೇಮಕಾತಿಯಾಗಿದ್ದು ಸದ್ಯದಲ್ಲೇ ಅವರು ಸೇರಿಕೊಳ್ಳಲಿದ್ದಾರೆ.ಒಂದು ಕಾಲದಲ್ಲಿ 500ಕ್ಕೂ ಮಿಕ್ಕ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ಒಲವು, ಮೂಲ ಸೌಕರ್ಯಗಳ ಕೊರತೆ ಇತ್ಯಾದಿ ಕಾರಣಗಳು ಇರುವುದರಿಂದ ಹೆತ್ತವರನ್ನು ಮತ್ತು ಮಕ್ಕಳನ್ನು ತನ್ನತ್ತ ಆಕರ್ಷಿಸಲು ಪೂರಕ ಕ್ರಮಗಳು ಅನಿವಾರ್ಯವೆಂದು ಮನಗಂಡ ಇಲ್ಲಿನ ಎಸ್‌ಡಿಎಂಸಿ, ಶಾಲಾ ಶಿಕ್ಷಕರು ಮತ್ತು ಪೋಷಕರು ಚಿಂತನೆ ನಡೆಸಿ ಹೊಸ ಪರಿಕ್ರಮ ಅನುಸರಿಸಿದ್ದಾರೆ.
ಅದಕ್ಕಾಗಿ ಸರ್ಕಾರಿ ಅನುದಾನ ಕಾಯದೆ ವ್ಯಾಪಕವಾಗಿ ಹರಡಿರುವ ಈ ಶಾಲೆಯ ಪೂರ್ವ ವಿದ್ಯಾರ್ಥಿಗಳ ಸಹಕಾರ ಪಡೆದು ಇದೀಗ ಶಾಲೆಯ ಒಟ್ಟು ಚಿತ್ರಣವೇ ಬದಲಾಗುವಂತಹಾ ಕೊಡುಗೆ ನೀಡಿದ್ದಾರೆ.120ರ ಸಂಭ್ರಮ: ಶತಮಾನೋತ್ತರ ವಿಂಶತಿ ವರ್ಷ (120 ವರ್ಷ)ದಲ್ಲಿ ಮುನ್ನಡೆಯುತ್ತಿರುವ ತಾಲೂಕಿನ ಹಿರಿಯ ಶಾಲೆಗಳ ಅಗ್ರ ಪಟ್ಟಿಯಲ್ಲಿರುವ ಗುರುವಾಯನಕೆರೆ ಶಾಲೆಯಲ್ಲಿ ಎಲ್ಲವೂ ಹಳೆಯ ಕಟ್ಟಡಗಳಾಗಿದ್ದು, ಇದೀಗ ಶಾಲೆಗೆ 600 ಅಡಿ ಸುತ್ತಳತೆಯ ಹೊಸ ಆರ್‌ಸಿಸಿ ಕಟ್ಟಡ ರಚಿಸಿದ್ದಾರೆ. 2022-23 ರಲ್ಲಿ ಇಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಸರ್ಕಾರ ನೀಡಿದ ಅವಕಾಶ ಬಳಸಿಕೊಂಡು ಸ್ವಂತ ಖರ್ಚಿನಲ್ಲಿ ಶಿಕ್ಷಕರನ್ನು ನೇಮಿಸಿಕೊಂಡು ಎಲ್.ಕೆ.ಜಿ- ಯು.ಕೆ.ಜಿ ಪ್ರಾರಂಭಿಸಲಾಯಿತು. ಅದಾದ ಕೇವಲ ಮೂರೇ ವರ್ಷದಲ್ಲಿ ಸುಮಾರು 10 ಲಕ್ಷ ರು.ವೆಚ್ಚದಲ್ಲಿ ಹೊಸ ಕಟ್ಟಡ ರಚಿಸಲಾಗಿದೆ.ಮೂಲ ಸೌಕರ್ಯ ಅಭಿವೃದ್ಧಿ;ಹೊಸ ಶಾಲಾ ಕಟ್ಟಡ ಮಾತ್ರವಲ್ಲದೆ ಎರಡು ಶೌಚಾಲಯ ಪಿಟ್ಟ್ ಗಳೂ ಸೇರಿ ಮೂರು ಶೌಚಾಲಯಗಳು, ಅಗತ್ಯ ಪೀಠೋಪಕರಣಗಳು, ಶಾಲಾ ಮುಂದಿನ ಅಂಗಳಕ್ಕೆ ಇಂಟರ್‌ಲಾಕ್, ಎ.ಸಿ, ಇನ್ವರ್ಟರ್ ಗಳನ್ನು ಖರೀದಿಸಲಾಗಿದೆ. ವಿಶೇಷವಾಗಿ ಶಾಲಾ ಕಟ್ಟಡದ ಪೂರ್ತಿ ಗೋಡೆಗಳಲ್ಲಿ ಅತ್ಯಾಕರ್ಷಕ ಚಿತ್ರಲೋಕವನ್ನೇ ರಚಿಸಿ ಕಲಿಕಾ ಪೂರಕ ಮತ್ತು ಸೌಂದರ್ಯದಾಯಕವಾಗಿ ರೂಪಿಸಲಾಗಿದೆ.
ಧನುಷ್ ವೇಣೂರು ಅವರ ಕೈ ಚಳಕದಿಂದ ವಾತಾವರಣವೇ ವಿಭಿನ್ನವಾಗಿ ಗೋಚರಿಸುವಂತಾಗಿದೆ. ಇದಕ್ಕೂ ಮೊದಲು ಚಿತ್ರ ಕಲಾವಿದ ವಿ.ಕೆ. ವಿಟ್ಲ ಅವರೂ ಇಲ್ಲಿನ ಪ್ರೌಢ ಶಾಲೆಯನ್ನು ಸುಂದರಗೊಳಿಸುವಲ್ಲಿ ಸತತ ಪ್ರಯತ್ನ ಪಟ್ಟಿದ್ದರು.ಎಸ್‌ಡಿಎಂಸಿ ಅಧ್ಯಕ್ಷ ಅಬುಲ್ ಲತೀಫ್ ಅಭಿವೃದ್ಧಿ ನೇತೃತ್ವ ವಹಿಸಿದ್ದಾರೆ. ಕೇವಲ ನಾಲ್ಕು ವರ್ಷಗಳಿಂದ ಇಲ್ಲಿ ಮುಖ್ಯ ಶಿಕ್ಷಕಿಯಾಗಿರುವ ಉಮಾ ಗೌಡ ಅವರು ಇನ್ನೇನೋ ವಯೋ ನಿವೃತ್ತಿಯ ಅಂಚಿನಲ್ಲಿದ್ದರೂ ಯುವ ಉತ್ಸಾಹದಿಂದ ಕೈ ಜೋಡಿಸಿದ್ದಾರೆ.
ವಾಟ್ಸ್ ಆಪ್ ಗ್ರೂಪ್ ಮೂಲಕ ಸುಮಾರು 600 ಕ್ಕೂ ಹೆಚ್ಚು ಪೂರ್ವ ವಿದ್ಯಾರ್ಥಿಗಳ ಮನಸ್ಸನ್ನು ಇತ್ತ ಸೆಳೆದುಕೊಂಡು ಮೊದಲ ಹಂತದಲ್ಲಿ 10 ಸಾವಿರಕ್ಕಿಂತ ಮೇಲ್ಪಟ್ಟು ಮಾತ್ರ ದೇಣಿಗೆ ಸ್ವೀಕರಿಸಿ ಹೆಜ್ಜೆ ಇಡಲಾಯಿತು. ಯಾರೊಬ್ಬರ ಮನೆ ಭೇಟಿ ಮಾಡದೆ, ಮನವಿ ಪತ್ರ ಇಲ್ಲದೆ ಕೇವಲ ದೂರವಾಣಿ ಸಂಪರ್ಕದ ಮೂಲಕವೇ ಎಲ್ಲವನ್ನೂ ಸಾಧಿಸಲಾಗಿದೆ. ವಾಗ್ದಾನ ಮಾಡಿದವರು ಶೇ.95 ಮಂದಿ ಮೊತ್ತವನ್ನು ಪಾವತಿಸಿ ತಮ್ಮ ಶಾಲಾ ಋಣ ತೀರಿಸಿಕೊಂಡಿದ್ದಾರೆ.
ಇನ್ನೂ ದೇಣಿಗೆಗಳು ಹರಿದು ಬರುತ್ತಿವೆ. ಮುಂದಿನ 6 ತಿಂಗಳಲ್ಲಿ ಇದೇ ಕಟ್ಟಡದ ಮೇಲಂತಸ್ತಿನಲ್ಲೂ ಕೊಠಡಿ ರಚಿಸುವ ಉದ್ದೇಶದಿಂದ ಹೆಜ್ಜೆ ಇಡಲಾಗಿದೆ. ಶಾಲಾ ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರವೀಣ್ ಕುಮಾರ್ ಅವರು ಬೆಂಗಳೂರಿನಲ್ಲಿದ್ದರೂ ಸಹಕಾರ ನೀಡುತ್ತಿದ್ದಾರೆ.ದೇಣಿಗೆಯ ಪರ್ವ:ಎಸ್‌ಡಿಎಂಸಿ ಅಧ್ಯಕ್ಷ ಹಾಜಿ ಅಬ್ದುಲ್ ಲೆತೀಫ್ 50 ಸಾವಿರ ರು. ಗಳ ಆರಂಭಿಕ ಮೊತ್ತ ಘೋಷಿಸಿ ಪ್ರಾರಂಭಿಸಿದ ಈ ಕೆಲಸಕ್ಕೆ ಸ್ಥಳೀಯ ಶಿಕ್ಷಣ ತಜ್ಞ, ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಸುಮಂತ್ ಕುಮಾರ್ ಜೈನ್ 1 ಲಕ್ಷ ರು ಸೇರಿದಂತೆ ಹಲವರು ದೇಣಿಗೆ ನೀಡಿದ್ದಾರೆ. ಅನೇಕ ಮಂದಿ ಬಾಗಿಲು, ದಾರಂದ, ಕಿಟಕಿಗಳು, ಇನ್ವರ್ಟರ್, ಎ.ಸಿ, ಬಿಸಿಯೂಟಕ್ಕೆ ಪೂರಕವಾದ ಟೇಬಲ್ ಗಳು, ಪೈಂಟ್ ಹೀಗೆ ವಸ್ತು ರೂಪದ ಕೊಡುಗೆಗಳನ್ನೂ ಒದಗಿಸಿದ್ದಾರೆ. ಗ್ರಾ.ಪಂ ಆಡಳಿತ ವತಿಯಿಂದ ಎಲ್ಲಾ ನೆರವನ್ನೂ ಪಡೆಯಲಾಗಿದೆ. ಸದಸ್ಯರ ಗಮನಸೆಳೆದು ಅವರ ಪಾಲಿನ ಅನುದಾನಗಳನ್ನು ಇಲ್ಲಿಗೇ ಬಳಸಿ ಸಂಪರ್ಕ ರಸ್ತೆಗೆ ಕಾಂಕ್ರೀಟೀಕರಣ ಇತ್ಯಾದಿ ಕೆಲಸಗಳನ್ನು ಪೂರೈಸಿಕೊಳ್ಳಲಾಗಿದೆ. ಹಳೆ ಬೆಂಚ್ ಗಳನ್ನು ದುರಸ್ತಿಗೊಳಿಸಿ ಮರುಬಳಸಿಕೊಳ್ಳಲಾಗಿದೆ. ಶಾಲಾ ಸಭಾಂಗಣದ ಒಳ ಭಾಗವನ್ನು ಸಂಪೂರ್ಣವಾಗಿ ವರ್ಣಾಲಂಕಾರದಿಂದ ಶೃಂಗರಿಸಲಾಗಿದ್ದು, ಕಣ್ಣಿಗೆ ಮನಸ್ಸಿಗೆ ಮುದನೀಡುತ್ತಿದೆ. ಶಾಲಾ ಆಟದ ಮೈದಾನ, ಕಲಿಕಾ ಉಪಕರಣಗಳು,ಟಿ.ವಿ ಸಹಿತ ಆಧುನಿಕ ಸೌಲಭ್ಯಗಳು ಈ ಶಾಲೆಯ ವಿಶೇಷತೆಗಳು. ನಲಿ ಕಲಿ ತರಗತಿಗಳ ಮಕ್ಕಳಿಗೆ ಕುರ್ಚಿಗಳನ್ನೇ ಒದಗಿಸಲಾಗಿದೆ. ಅಲ್ಲಿಗೆ ಬೇಕಾದ ಚಿತ್ರ ಕಲೆಗಳು ಎಲ್ಲವೂ ವರ್ಣರಂಜಿತವಾಗಿದೆ.