ಕೂಡ್ಲಿಗಿಯಲ್ಲಿ ಹೈಟೆಕ್ ಬಸ್ ನಿಲ್ದಾಣ: ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork |  
Published : Jul 11, 2024, 01:38 AM IST
ಕೂಡ್ಲಿಗಿ ಪಟ್ಟಣದ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂತನ 4 ಬಸ್‌ಗಳಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಬುಧವಾರ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮತ್ತು ಮುಖಂಡರು ಹಾಜರಿದ್ದರು.  | Kannada Prabha

ಸಾರಾಂಶ

ತೀರಾ ಹಳೆಯದಾದ ಬಸ್ ನಿಲ್ದಾಣದ ಸ್ಥಿತಿಗತಿಯನ್ನು ಶಾಸಕರು ತಮ್ಮ ಗಮನಕ್ಕೆ ತಂದಿದ್ದಾರೆ.

ಕೂಡ್ಲಿಗಿ: ಪಟ್ಟಣದಲ್ಲಿ ನಾಲ್ಕು ಎಕರೆ ಪ್ರದೇಶದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಆದ್ಯತೆ ನೀಡುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಅವರು ಬುಧವಾರ ಸಂಜೆ ಪಟ್ಟಣದ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನೂತನ ನಾಲ್ಕು ಬಸ್‌ಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತೀರಾ ಹಳೆಯದಾದ ಬಸ್ ನಿಲ್ದಾಣದ ಸ್ಥಿತಿಗತಿಯನ್ನು ಶಾಸಕರು ತಮ್ಮ ಗಮನಕ್ಕೆ ತಂದಿದ್ದಾರೆ. ಈಗಿರುವ ಹಳೆಯ ಬಸ್‌ಗಳ ಬದಲಾಗಿ ಮತ್ತಷ್ಟು ಹೊಸ ಬಸ್‌ಗಳನ್ನು ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಪಟ್ಟಣದ ಹೊರವಲಯದಲ್ಲಿ ಸರ್ಕಾರದ ಜಾಗ ಗುರುತಿಸಿದ್ದು, ಆ ಸ್ಥಳದಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಡಿಪೋ ನಿರ್ಮಾಣಕ್ಕೂ ಮನವಿ ಸಲ್ಲಿಸಿರುವುದರಿಂದ ಆ ಬಗ್ಗೆಯೂ ಗಮನಹರಿಸಲಾಗುವುದು ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.

ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಮಾತನಾಡಿ, ಕೂಡ್ಲಿಗಿ ಸಾರಿಗೆ ಸಂಸ್ಥೆ ಘಟಕಕ್ಕೆ ನೂತನ ಬಸ್‌ಗಳನ್ನು ನೀಡುವಂತೆ ಸಲ್ಲಿಸಿದ ಮನವಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಂದು ವರ್ಷದಲ್ಲಿ 19 ಬಸ್‌ಗಳನ್ನು ನೀಡಿದ್ದಾರೆ. ಇನ್ನಷ್ಟು ಹೊಸ ಬಸ್‌ಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ತಾಲೂಕು ಕೇಂದ್ರದಲ್ಲಿರುವ ಸಾರಿಗೆ ಬಸ್ ನಿಲ್ದಾಣವು ತೀರಾ ಹಳೆಯದಾಗಿದ್ದು, ಹೈಟೆಕ್ ಬಸ್ ನಿಲ್ದಾಣಕ್ಕೂ ಅನುದಾನ ನೀಡುವ ಮೂಲಕ ಹಿಂದುಳಿದ ತಾಲೂಕಿನ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಸಂಸ್ಥೆ ವಿಭಾಗೀಯ ಸಂಚಾರ ಅಧಿಕಾರಿ ವಾಜಂತ್ರಿ, ಆಡಳಿತಾಧಿಕಾರಿ ದೇವರಾಜ, ಘಟಕ ವ್ಯವಸ್ಥಾಪಕ ಮರಿಲಿಂಗಪ್ಪ, ಪಪಂ ಸದಸ್ಯ ಕಾವಲಿ ಶಿವಪ್ಪ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ಧನಗೌಡ, ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ, ಮುಖಂಡರಾದ ಕೋಗಳಿ ಮಂಜುನಾಥ, ಮಾದಿಹಳ್ಳಿ ನಜೀರ್, ದಿನ್ನೆ ಮಲ್ಲಿಕಾರ್ಜುನ, ಜಯರಾಮ್ ನಾಯಕ, ಟಿ.ಜಿ. ಮಲ್ಲಿಕಾರ್ಜುನಗೌಡ, ಬಣವಿಕಲ್ಲು ಯರಿಸ್ವಾಮಿ ಇದ್ದರು.

ಸಾರಿಗೆ ನೌಕರರ ವೇತನ ಪರಿಷ್ಕರಣೆ ವಿಳಂಬವಾಗಿ ಶೇ.15 ನೀಡಿದ್ದು, ಉಳಿದ 35 ತಿಂಗಳ ಹಿಂಬಾಕಿ ವೇತನ ಒಂದೇ ಕಂತಿನಲ್ಲಿ ನೀಡುವುದು, ನೌಕರರಿಗೆ ಸರಿ ಸಮಾನ ವೇತನ, ವಸತಿ ನಿವೇಶನಗಳ ಹಂಚಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರಿಗೆ ನೌಕರರಾದ ಮೆಹಬೂಬ್, ಜಿ.ಎಂ. ಮಹಾಂತೇಶ್, ಜೆ.ಚಂದ್ರಮೌಳಿ, ಶಿವಮೂರ್ತಿ, ವೀರಣ್ಣ, ಮಂಜುನಾಥ ಹೆಗಡೆ ಸೇರಿ ಇತರರು ಮನವಿ ಸಲ್ಲಿಸಿದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ