ಧಾರವಾಡಕ್ಕೆ ಹಿಡ್ಕಲ್‌ ನೀರು, ಇಂದು ಡಿಸಿ ಕಚೇರಿಗೆ ಮುತ್ತಿಗೆ

KannadaprabhaNewsNetwork |  
Published : May 30, 2025, 01:21 AM IST
ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹಿಡಕಲ್‌ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಪೈಪ್‌ಲೈನ್‌ ಕಾಮಗಾರಿ ವಿರೋಧಿಸಿ ಮೇ 30 ರಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಹಿಡಕಲ್‌ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಪೈಪ್‌ಲೈನ್‌ ಕಾಮಗಾರಿ ವಿರೋಧಿಸಿ ಮೇ 30 ರಂದು ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಾರದೇ ಈ ಯೋಜನೆ ಕಾಮಗಾರಿಯನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿತ್ತು. ನಮ್ಮನೀರು ನಮ್ಮ ಹಕ್ಕು ವೇದಿಕೆಯಡಿ ವಿವಿಧ ಸಂಘ ಸಂಸ್ಥೆಗಳು ಹೋರಾಟ ಮಾಡಿದ್ದರಿಂದ ಈ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಆದರೆ, ಈಗ ಈ ಯೋಜನೆಗೆ ಜಲಸಂಪನ್ಮೂಲ ಇಲಾಖೆಯಿಂದ ಅನುಮತಿ ನೀಡಲಾಗಿದೆ. ಇದು ದೊಡ್ಡ ದುರಂತವಾಗಿದೆ. ಹಿಡಕಲ್‌ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಸುವ ಯೋಜನೆಗೆ ನಮ್ಮ ತೀವ್ರ ವಿರೋಧವಿದೆ. ಯಾವುದೇ ಕಾರಣಕ್ಕೂ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಬಿಡುವುದಿಲ್ಲ. ಯಾವುದೇ ಹೋರಾಟ, ತ್ಯಾಗಕ್ಕೂ ನಾವು ಸಿದ್ಧರಿದ್ದೇವೆ ಎಂದು ಗುಡುಗಿದರು.ಬೆಳಗಾವಿ ಜಿಲ್ಲೆಯ ಕಚೇರಿ, ಯೋಜನೆಗಳನ್ನು ಧಾರವಾಡ ರಾಜಕಾರಣಿಗಳು ತಮ್ಮ ಪ್ರಭಾವದಿಂದ ಧಾರವಾಡಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಮಲಪ್ರಭಾ ಜಲಾಶಯದಿಂದ ಈಗಾಗಲೇ ಧಾರವಾಡಕ್ಕೆ ನೀರು ಪೂರೈಕೆಯಾಗುತ್ತಿದೆ. ಇದಕ್ಕೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ, ಹಿಡಕಲ್‌ ಜಲಾಶಯದಿಂದ ಧಾರವಾಡಕ್ಕೆ ನೀರು ಪೂರೈಸುವ ಯೋಜನೆಗೆ ನಮ್ಮ ವಿರೋಧವಿದೆ. ಹಿಡಕಲ್‌ ಜಲಾಶಯದಿಂದ ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಯ ಜನತೆಗೆ ಅನುಕೂಲವಿದೆ. ಹಾಗಾಗಿ, ಬಾಗಲಕೋಟೆ ಜಿಲ್ಲೆ ಜನತೆ ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿ, ನಮ್ಮ ಹೋರಾಟದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಹಿಡಕಲ್‌ ಜಲಾಶಯದಿಂದ ಧಾರವಾಡಕ್ಕೆ ನೀರು ಪೂರೈಸುವ ಯೋಜನೆ ಸ್ಥಗಿತಗೊಳಿಸುವಂತೆ ಕೋರಿ ಜಿಲ್ಲೆಯ ಇಬ್ಬರು ಸಚಿವರ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವೊಂದನ್ನು ಮುಖ್ಯಮಂತ್ರಿ ಬಳಿಗೆ ಕರೆದುಕೊಂಡು ಹೋಗಬೇಕು. ಬೆಳಗಾವಿ ಜಿಲ್ಲೆಯ ಕೈಗಾರಿಕಾ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಹೆಚ್ಚಳ ಮಾಡದೇ ಧಾರವಾಡಕ್ಕಾಗಿ ಏಕೆ ಮಾಡಲಾಗುತ್ತಿದೆ? ಕದ್ದು ಮುಚ್ಚಿ ಈ ಯೋಜನೆ ಜಾರಿಗೆ ತರುವ ಹುನ್ನಾರ ನಡೆಯುತ್ತಿದೆ. ಈ ಯೋಜನೆ ಹಿಂದೆ ಕಾಣದ ಕೈಗಳ ಕೈವಾಡವಿದೆ. ಈ ಯೋಜನೆಗೆ ನಮ್ಮ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ. ಕಾನೂನು ಹೋರಾಟವನ್ನು ಕೂಡ ಮಾಡುತ್ತೇವೆ. ಅಗತ್ಯ ಬಿದ್ದರೆ ಬೆಳಗಾವಿ ಜಿಲ್ಲಾ ಬಂದ್‌ ಕರೆ ಕೊಡಲಾಗುವುದು ಎಂದು ಎಚ್ಚರಿಕೆ ಕೂಡ ನೀಡಿದರು.ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕ ಸುರೇಶ ಗವನ್ನವರ ಮಾತನಾಡಿ, ಬೆಳಗಾವಿ ಜನರ ಜೀವನಾಡಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್‌ಲೈನ್ ಕಾಮಗಾರಿಗೆ ನಮ್ಮ ವಿರೋಧ ಇದೆ. ನಮ್ಮ ಜಿಲ್ಲೆಯಲ್ಲಿ ಐದು ಕೈಗಾರಿಕಾ ಘಟಕಗಳಿವೆ. ಇಲ್ಲಿಯೇ‌ ನೀರಿನ ಅಭಾವ ಇದೆ. ಅದರ ಹೊರತಾಗಿಯೂ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಪೈಪ್ ಲೈನ್ ಕಾಮಗಾರಿ ಮಾಡುತ್ತಿರುವುದು ಸರಿಯಲ್ಲ. ಇಲ್ಲಿನ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರದೆ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಧ್ಯಸ್ಥಿಕೆ ವಹಿಸಿ ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರಿನ ಪೈಪ್ ಲೈನ್ ಕಾಮಗಾರಿ ಸ್ಥಗಿತಗೊಳಿಸಲು ನಿರ್ಧಾರ ಮಾಡಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಕರವೇ ಉಪಾಧ್ಯಕ್ಷ ಗಣೇಶ ರೋಕಡೆ ಮೊದಲಾದವರು ಉಪಸ್ಥಿತರಿದ್ದರು.

PREV

Recommended Stories

ಯೂರಿಯಾ: ರೈತ ಬಾಂಧವರಲ್ಲಿ ಅತಂಕ ಬೇಡ
ಪಂಚಪೀಠ ನಿರ್ಣಯ ಒಪ್ಪಲ್ಲ, ರಂಭಾಪುರಿ ಶ್ರೀಗಳ ಮನಸ್ಥಿತಿ ಕಲುಷಿತ: ವಚನಾನಂದ ಶ್ರೀ