ಬೆಂಗಳೂರು : ಕಾರ್ಖಾನೆ ಹಾಗೂ ವಸತಿ ಕಟ್ಟಡಗಳಿಂದ ಅರ್ಕಾವತಿ ನದಿ ಜಲಾಯನ ಪ್ರದೇಶದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಯಲು ಎಂಟು ವಾರಗಳಲ್ಲಿ ಕ್ರಮ ಜರುಗಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಕೆಎಸ್‌ಪಿಸಿಬಿ) ಹೈಕೋರ್ಟ್ ನಿರ್ದೇಶಿಸಿದೆ.
ಅರ್ಕಾವತಿ ನದಿಯ ಮಾಲಿನ್ಯ ತಡೆಯಲು ಮತ್ತು ನದಿಯ ಜಲಾಯನ ಪ್ರದೇಶದಿಂದ ಬಫರ್ ವಲಯದ ರಕ್ಷಣೆ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ಎನ್.ಕಿರಣ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಅರ್ಜಿದಾರರು ತಮ್ಮ ಕೋರಿಕೆಗಳ ಕುರಿತು ಮೂರು ವಾರಗಳಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಬೇಕು. ಮನವಿ ಸಲ್ಲಿಸಿದ ಎಂಟು ವಾರಗಳಲ್ಲಿ ಅರ್ಕಾವತಿ ನದಿ ಮಾಲಿನ್ಯದ ತಡೆಗೆ ಸರ್ಕಾರ ಕ್ರಮ ಜರುಗಿಸಬೇಕು. ನದಿಯನ್ನು ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ನದಿಯ ಬಫರ್ ವಲಯದಲ್ಲಿ ನಡೆದಿರುವ ಒತ್ತುವರಿ ತೆರವುಗೊಳಿಸಬೇಕು. ಒತ್ತುವರಿದಾರರ ವಿರುದ್ಧ ಕಾನೂನು ಪ್ರಕಾರ ಅಗತ್ಯ ಕ್ರಮ ಜರುಗಿಸಬೇಕು ಎಂದು ನಿರ್ದೇಶನ ನೀಡಿದೆ.
ಅರ್ಜಿದಾರರ ಮನವಿ ವಿವರ
ಅರ್ಕಾವತಿ ನದಿಯ ಜಲಾಯನ ಪ್ರದೇಶದ ಒಂದು ಕಿಲೋ ಮೀಟರ್ ಸುತ್ತಳತೆಯಲ್ಲಿ ಬಫರ್ ವಲಯದ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಬಫರ್ ವಲಯದಲ್ಲಿ ಯಾವುದೇ ವಸತಿ ಕಟ್ಟಡ ಅಥವಾ ಕೈಗಾರಿಕೆ ನಿರ್ಮಾಣ ಮಾಡಲು ಅನುಮತಿ ನೀಡಬಾರದು. ನದಿಯ ಸಂರಕ್ಷಣೆ ಮತ್ತು ನಿರ್ವಹಣೆಗೆ ಶಾಸನಬದ್ಧ ಪ್ರಾಧಿಕಾರ ರಚನೆ ಮಾಡಬೇಕು. ಅರ್ಕಾವತಿ ನದಿ ಜಲಾಶಯನ ಪ್ರದೇಶದಲ್ಲಿ ಆಗಿರುವ ಒತ್ತುವರಿ ಮತ್ತು ಅದರ ತೆರವಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸಬೇಕು. ನದಿಗೆ ನಿರ್ಮಿಸಲಾಗಿರುವ ಚಾಮರಾಜಸಾಗರ ಮತ್ತು ಮಂಚನ ಬೆಲೆ ಜಲಾಶಯದಲ್ಲಿ ನೀರು, ಡೆಡ್ಡ್ ಸ್ಟೋರೇಜ್ ಮತ್ತು ಹೂಳಿನ ಮಟ್ಟದ ಬಗ್ಗೆ ವರದಿ ಸಲ್ಲಿಸಲು ರಾಜ್ಯ ಸರ್ಕಾರ, ಕೆಎಸ್‌ಪಿಸಿಬಿ, ಜಲಸಂಪನ್ಮೂಲ ಇಲಾಖೆ, ರಾಮನಗರ ಜಿಲ್ಲಾಡಳಿತ ಮತ್ತು ಬೆಂಗಳೂರು ಜಲಮಂಡಳಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.