ಪ್ರಭಾವಿಗಳು, ಗಣಿ ಮಾಲೀಕರಿಗೆ ಹೈಕೋರ್ಟ್‌ ಮರ್ಮಾಘಾತ...!

KannadaprabhaNewsNetwork |  
Published : Jan 09, 2024, 02:00 AM IST
೮ಕೆಎಂಎನ್‌ಡಿ-೬ಕೃಷ್ಣರಾಜಸಾಗರ ಜಲಾಶಯ | Kannada Prabha

ಸಾರಾಂಶ

ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಮಹತ್ವದ ಆದೇಶ, ದಶಕದ ಗಣಿ ಕದನಕ್ಕೆ ಹೈಕೋರ್ಟ್ ತಾರ್ಕಿಕ ಅಂತ್ಯ, ಗಣಿ ಸ್ಫೋಟದಿಂದ ತಲ್ಲಣಿಸಿದ್ದ ಗ್ರಾಮಗಳಲ್ಲಿ ನೆಮ್ಮದಿ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಜೀವನಾಡಿ ಕೃಷ್ಣರಾಜಸಾಗರ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸಿ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿರುವುದು ಪ್ರಭಾವಿಗಳು ಮತ್ತು ಗಣಿ ಮಾಲೀಕರಿಗೆ ಮರ್ಮಾಘಾತ ನೀಡಿದೆ.

ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ, ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಪೀಠ ಕೆಆರ್‌ಎಸ್ ಅಣೆಕಟ್ಟು ಸುರಕ್ಷತೆಗೆ ಪ್ರಧಾನ ಆದ್ಯತೆ ನೀಡುವ ಮೂಲಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮತ್ತು ಅಣೆಕಟ್ಟು ಸುರಕ್ಷತಾ ಪುನರ್‌ ಪರಿಶೀಲನಾ ಸಮಿತಿ ನೀಡಿದ್ದ ವರದಿಯನ್ನು ಎತ್ತಿಹಿಡಿದಿದೆ. ಇದರೊಂದಿಗೆ ದಶಕದಿಂದ ಗಣಿ ಮಾಲೀಕರು ಮತ್ತು ಅಧಿಕಾರಿಗಳ ನಡುವೆ ನಡೆಯುತ್ತಿದ್ದ ಗಣಿ ಕದನಕ್ಕೆ ಘನ ನ್ಯಾಯಾಲಯ ತಾರ್ಕಿಕ ಅಂತ್ಯ ದೊರಕಿಸಿದೆ.

ಕಲ್ಲು ಗಣಿಗಾರಿಕೆ ನಡೆಸಲು ಪಾಂಡವಪುರ ತಾಲೂಕಿನ ಹೊಂಗನಹಳ್ಳಿ ವ್ಯಾಪ್ತಿಯಲ್ಲಿನ ೧೨೦ ಎಕರೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿ ೨೦೨೩ರ ಮೇ ೧೫ರಂದು ಪರವಾನಗಿ ನೀಡಿದ್ದರು. ಆದರೆ, ಕಾವೇರಿ ನೀರಾವರಿ ನಿಗಮ ಲಿಮಿಟೆಡ ಪರೀಕ್ಷಾರ್ಥ ಸ್ಫೋಟ ನಡೆಸಿದ ಬಳಿಕ ಭೂ ಪರಿವರ್ತನಾ ಆದೇಶ ಚಾಲ್ತಿಗೆ ಬರಲಿದೆ ಎಂದು ಷರತ್ತು ವಿಧಿಸಿದ್ದರು. ಈ ಷರತ್ತು ಪ್ರಶ್ನಿಸಿ ಮಂಡ್ಯದ ಚಿನಕುರಳಿ ಗ್ರಾಮದ ಸಿ.ಜಿ.ಕುಮಾರ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ವೇಳೆ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್ ಜಲಾಶಯಕ್ಕೆ ಹಾನಿಯಾಗಲಿದೆ ಎಂಬ ವಿಚಾರವನ್ನು ಹೈಕೋರ್ಟ್ ಗಂಭೀರವಾಗಿ ಪರಿಗಣಿಸುತ್ತಾ ಬಂದಿತ್ತು. ರಾಜ್ಯ ಜಲಾಶಯ ಸುರಕ್ಷತಾ ಸಮಿತಿ ವರದಿಯನ್ನು ಸಲ್ಲಿಸುವಂತೆಯೂ ಸೂಚಿಸಿತ್ತಲ್ಲದೆ, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಜಿಲ್ಲಾಧಿಕಾರಿಗೆ ನೀಡಿರುವ ವರದಿಯನ್ನು ಸಾರ್ವಜನಿಕಗೊಳಿಸದಿರುವುದನ್ನು ಪ್ರಶ್ನಿಸಿತ್ತು. ವರದಿಯ ಸುರಕ್ಷತೆ, ನಿರ್ವಹಣೆ, ಭದ್ರತೆ ಅಥವಾ ಗೌಪ್ಯತೆ ಬಗ್ಗೆ ಏನಾದರೂ ಸಮಸ್ಯೆಗಳಿದ್ದರೆ ವಿವರಿಸುವಂತೆ ರಾಜ್ಯ ಜಲಾಶಯ ಸುರಕ್ಷತಾ ಸಮಿತಿಗೆ ಸೂಚಿಸಿತ್ತು.

ಜಲಾಶಯದ ಸುರಕ್ಷತೆಯು ಗಂಭೀರ ವಿಷಯವಾಗಿದೆ. ಅದನ್ನು ನಿರ್ಲಕ್ಷಿಸಲಾಗದು. ಕಲ್ಲು ಗಣಿಗಾರಿಕೆ ಚಟುವಟಿಕೆಯ ಭಾಗವಾಗಿ ನಡೆಸುವ ಸ್ಫೋಟವು ಜಲಾಶಯಕ್ಕೆ ಹಾನಿ ಮಾಡುತ್ತದೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತ್ತು.

ತದನಂತರದಲ್ಲಿ ಪರೀಕ್ಷಾರ್ಥ ಸ್ಫೋಟಕ್ಕೆ ಅವಕಾಶ ನೀಡುವಂತೆ ಅರ್ಜಿದಾರರು ಕೋರಿದಾಗಲೂ, ಕೃಷ್ಣರಾಜಸಾಗರ ಜಲಾಶಯದ ಬಳಿ ಪ್ರಾಯೋಗಿಕ ಸ್ಫೋಟಕ್ಕೆ ಅನುಮತಿ ನೀಡಿ ಅಪಾಯವನ್ನು ಆಹ್ವಾನಿಸುವುದಕ್ಕೆ ಸಾಧ್ಯವಿಲ್ಲ. ಅಣೆಕಟ್ಟು ಸುರಕ್ಷತಾ ಕಾಯಿದೆಯನ್ನು ಪರಿಗಣಿಸಬೇಕಾದ ಅಗತ್ಯವಿದೆ. ಎಲ್ಲ ಅಂಶಗಳನ್ನು ಪರಿಗಣಿಸದೆ ಏಕಾಏಕಿ ಪ್ರಾಯೋಗಿಕ ಸ್ಫೋಟಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಅಪಾಯವನ್ನು ಆಹ್ವಾನ ಮಾಡಿಕೊಳ್ಳುವುದೂ ಇಲ್ಲ. ಪ್ರಾಯೋಗಿಕ ಸ್ಫೋಟದಂತಹ ಸಣ್ಣ ಲೋಪ ದೊಡ್ಡ ಅಪಾಯಕ್ಕೂ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿ ಅನುಮತಿ ನಿರಾಕರಿಸಿತ್ತು.

ಅಂತಿಮವಾಗಿ ಕೆಆರ್‌ಎಸ್ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನೇ ನಿಷೇಧ ಮಾಡಿ ಹೊರಡಿಸಿರುವ ಆದೇಶ ಸದಾ ಗಣಿಸ್ಫೋಟದಿಂದ ತಲ್ಲಣಿಸುತ್ತಿದ್ದ ಸುತ್ತಮುತ್ತಲ ಗ್ರಾಮಸ್ಥರಿಗೆ ನೆಮ್ಮದಿಯನ್ನು ನೀಡಿದೆ. ನಿರಂತರ ಗಣಿಗಾರಿಕೆಯಿಂದ ಬೇಬಿಬೆಟ್ಟ ಸುತ್ತಮುತ್ತ ಪರಿಸರ ಹಾಳಾಗುವುದೂ ತಪ್ಪಿದಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?