ಕನ್ನಡಪ್ರಭ ವಾರ್ತೆ ವಿಜಯಪುರ ಉತ್ತರ ಕರ್ನಾಟಕದ ಜನಪ್ರಿಯ ಸಿದ್ದೇಶ್ವರ ಸಂಕ್ರಮಣ ಜಾತ್ರೆ ಮಹೋತ್ಸವ ಜ.೧೨ ರಿಂದ ಆರಂಭಗೊಳ್ಳಲಿವೆ ಎಂದು ನಗರ ಶಾಸಕ ಹಾಗೂ ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೧೨ ರಿಂದ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ನಂದಿ ಧ್ವಜ ಹಾಗೂ ಗೋಮಾತೆಯ ಪೂಜೆಯೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ದೊರಕಲಿದೆ. ಅಂದು ದೇವಾಲಯದಿಂದ ನಂದಿ ಧ್ವಜ ಹಾಗೂ ಗೋಮಾತೆ ಮೆರವಣಿಗೆ ಆರಂಭವಾಗಲಿದೆ. ಅಟಲ್ ಬಿಹಾರಿ ವಾಜಪೇಯಿ ರಸ್ತೆ ಚತುರ್ಮುಖ ಗಣಪತಿಗೆ ಪಂಚಾಮೃತ ಅಭಿಷೇಕ ಜರುಗಲಿದೆ. ೧೩ರ ಮಧ್ಯಾಹ್ನ ೧೨.೩೦ ಕ್ಕೆ ಶ್ರೀ ಸಿದ್ದೇಶ್ವರ ದೇವಾಲಯದಿಂದ ವೈಭವದ ನಂದಿ ಧ್ವಜಗಳ ಉತ್ಸವ, ಶ್ರೀ ೭೭೦ ಅಮರ ಲಿಂಗಗಳಿಗೆ ಎಣ್ಣೆ ಮಜ್ಜನದೊಂದಿಗೆ ಅಭಿಷೇಕ ಹಾಗೂ ರಾತ್ರಿ ೮ಕ್ಕೆ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಜ.೧೪ರ ಮಧ್ಯಾಹ್ನ ೧೨.೩೦ ಕ್ಕೆ ಅಕ್ಷತಾರ್ಪಣೆ ಭೋಗಿ, ರಾತ್ರಿ ೮ ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಜ.೧೫ರ ಮಧ್ಯಾಹ್ನ ಸಂಕ್ರಮಣ ಆಚರಣೆ, ನಂದಿ ಧ್ವಜಗಳ ಮೆರವಣಿಗೆ ಹಾಗೂ ಹೋಮ-ಹವನಗಳು ಹಾಗೂ ಪಲ್ಲಕ್ಕಿಯೊಂದಿಗೆ ನಂದಿ ಧ್ವಜಗಳ ಉತ್ಸವ ಹಾಗೂ ರಾತ್ರಿ ೮ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಕೋಟ್
ಜಾತ್ರೆಯಲ್ಲಿ ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶವಿದೆ. ಎಲ್ಲವೂ ಹಿಂದೂಗಳು ಪಡೆದುಕೊಂಡರೆ ಅವರಿಗೆ ಕೊಡುತ್ತೇವೆ. ವ್ಯಾಪಾರ-ವಹಿವಾಟು, ಉದ್ಯೋಗದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ. ಮುಸ್ಲಿಮರು ಹಿಂದು ದೇವಾಲಯದ ಮುಂದೆ ವ್ಯಾಪಾರ ಮಾಡುವುದು ಅವರ ಧರ್ಮದಲ್ಲಿಯೇ ನಿಷೇಧವಿದೆ. ಕಾಪಿರಗಳ ಮುಂದೆ ವ್ಯಾಪಾರ ಮಾಡಬೇಕೋ ಬಿಡಬೇಕೋ ಎಂಬುದು ಅವರೇ ತಿಳಿದುಕೊಳ್ಳಲಿ.ಬಸನಗೌಡ ಪಾಟೀಲ ಯತ್ನಾಳ. ಶಾಸಕ, ಸಿದ್ದೇಶ್ವರ ಸಂಸ್ಥೆ ಅಧ್ಯಕ್ಷ
ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶ..!ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಅನ್ಯ ಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ಹಿಂದು ಪರ ಸಂಘಟನೆಗಳ ಬ್ಯಾನರ್ ಅಳವಡಿಸಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಯತ್ನಾಳ ಅವರು, ಇಲ್ಲಿ ವ್ಯಾಪಾರ ಮಾಡಲು ಎಲ್ಲರಿಗೂ ಅವಕಾಶವಿದೆ. ಎಲ್ಲವೂ ಹಿಂದೂಗಳು ಪಡೆದುಕೊಂಡರೆ ಅವರಿಗೆ ಕೊಡುತ್ತೇವೆ, ವ್ಯಾಪಾರ-ವಹಿವಾಟು, ಉದ್ಯೋಗದಲ್ಲಿ ಈ ರೀತಿ ಮಾಡಲು ಸಾಧ್ಯವಿಲ್ಲ ಎಂದರು.ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಚಿರಕಿ ಗಾಣಾ ಯಾರು ಅಳವಡಿಸುತ್ತಾರೋ ಅಳವಡಿಸಲಿ. ಬೇಕಾದರೆ ಹಿಂದೂಪರ ಸಂಘಟನೆಯ ನಾಯಕ ನೀಲಕಂಠ ಕಂದಗಲ್ ಅವರೇ ಅಳವಡಿಸಲಿ, ಬೇಕಾದರೆ ನಾನೇ ಹೈದರಾಬಾದ್ ಕರೆದುಕೊಂಡು ಹೋಗುವೆ. ₹50 ಸಾವಿರ ನಾನೇ ಕೊಡುವೆ ಎಂದರು. ಅಲ್ಲದೆ, ಮುಸ್ಲಿಮರು ಹಿಂದು ದೇವಾಲಯದ ಮುಂದೆ ವ್ಯಾಪಾರ ಮಾಡುವುದು ಅವರ ಧರ್ಮದಲ್ಲಿಯೇ ನಿಷೇಧವಿದೆ. ಕಾಪಿರಗಳ ಮುಂದೆ ವ್ಯಾಪಾರ ಮಾಡಬೇಕೋ ಬಿಡಬೇಕೋ ಎಂಬುದು ಅವರೇ ತಿಳಿದುಕೊಳ್ಳಲಿ ಎಂದರು.