ಪುತ್ತೂರು : ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿ, ಹಾಲಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರ ಅವಧಿ ಮುಂದುವರಿಕೆಗೆ ಅವಕಾಶ ಕಲ್ಪಿಸಿ ವಿಚಾರಣೆಯನ್ನು ಮುಂದೂಡಿದೆ.
ತಮ್ಮ ಅಧಿಕಾರದವಧಿ ಇನ್ನೂ ಮುಗಿಯದೇ ಇದ್ದರೂ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ನಗರಸಭೆಗೆ ಆಡಳಿತಾಧಿಕಾರಿ ನೇಮಕ ಮಾಡಲು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿರುವುದನ್ನು ಪ್ರಶ್ನಿಸಿ ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಹಾಗೂ ಸದಸ್ಯರಾದ ಜೀವಂಧರ್ ಜೈನ್ ಮತ್ತು ಭಾಮಿ ಅಶೋಕ್ ಶೆಣೈ ಅವರು ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.
ವಿಚಾರಣೆಗೆತ್ತಿಕೊಂಡ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಮುಂದಿನ ದಿನಾಂಕದ ವರೆಗೆ ಪುತ್ತೂರು ನಗರಸಭೆಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡದಂತೆ ಮಧ್ಯಂತರ ಆದೇಶ ಮಾಡಿದೆ.ಪುತ್ತೂರು ನಗರಸಭೆಗೆ 2018 ರ ಸೆ.3 ರಂದು ಚುನಾವಣೆ ನಡೆದಿತ್ತು. ಅದಾದ ಬಳಿಕ 30 ತಿಂಗಳ ಪ್ರಥಮ ಅವಧಿಗೆ ೨೦೨೦ರ ನ.೨ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ನಡೆದಿತ್ತು.30 ತಿಂಗಳ ಪ್ರಥಮ ಅವಧಿ ಮುಗಿದು ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮತ್ತೆ ವಿಳಂಬವಾಗಿ ಆಡಳಿತಾಧಿಕಾರಿ ನೇಮಕವಾಗಿತ್ತು. ಸುಮಾರು ೧೬ ತಿಂಗಳ ಅವಧಿಯಲ್ಲಿ ಆಡಳಿತಾಧಿಕಾರಿಯವರೇ ಆಡಳಿತ ನಡೆಸಿದ್ದರಿಂದ ಚುನಾಯಿತ ಸಮಿತಿಗೆ ಯಾವುದೇ ಅಧಿಕಾರವಿರಲಿಲ್ಲ. ಕೊನೆಗೂ 30 ತಿಂಗಳ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ 2024 ರ ಸೆ.3 ರಂದು ಚುನಾವಣೆ ನಡೆದಿದೆ. 30 ತಿಂಗಳ ಎರಡನೇ ಅವಧಿ ಪೂರ್ಣಗೊಳ್ಳುವ ಮೊದಲೇ ಇದೀಗ ನಗರಸಭೆಗೆ ಆಡಳಿತಾಧಿಕಾರಿ ನೇಮಕಕ್ಕೆ ಕರ್ನಾಟಕ ರಾಜ್ಯ ಚುನಾವಣಾ ಆಯೋಗ ದ.ಕ.ಜಿಲ್ಲಾಧಿಕಾರಿಗೆ ಇದೇ ಸೆ. 15 ರಂದು ಪತ್ರ ಬರೆದು ನಿರ್ದೇಶನ ನೀಡಿದೆ.
ಪ್ರಥಮ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಪ್ರಥಮ ಸಭೆ ನಡೆದಿದ್ದ 2020 ರ ನ.2ರ ಲೆಕ್ಕಾಚಾರದಲ್ಲಿ 5 ವರ್ಷ ಪೂರ್ಣಗೊಂಡಿದೆ ಎಂದು ಚುನಾವಣಾ ಆಯೋಗ ಈ ರೀತಿಯ ಕ್ರಮಕ್ಕೆ ಮುಂದಾಗಿದೆ. ಆದರೆ ಪ್ರಥಮ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ವಿಳಂಬವಾಗಿ ಸುಮಾರು 16 ತಿಂಗಳು ಆಡಳಿತಾಧಿಕಾರಿಯವರೇ ಆಡಳಿತ ನಡೆಸುವಂತಾಗಿ ಚುನಾಯಿತ ಸದಸ್ಯರಿಗೆ ಯಾವುದೇ ಅಧಿಕಾರ ನಡೆಸಲು ಅವಕಾಶ ಲಭಿಸಿರಲಿಲ್ಲ.
ಜೊತೆಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾದ ಬಳಿಕ ನಿಯಮಾನುಸಾರ 30 ತಿಂಗಳ ಕಾಲ ಆಡಳಿತ ನಡೆಸಲು ಅವಕಾಶ ನೀಡಬೇಕು. ಆದರೆ ಈ ಅವಧಿ ಮುಗಿಯುವ ಮೊದಲೇ ಆಡಳಿತಾಧಿಕಾರಿ ನೇಮಕಕ್ಕೆ ಮುಂದಾಗಿರುವುದು ಸರಿಯಲ್ಲ. ಹಾಲಿ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರ ಅಧಿಕಾರದ ಅವಧಿ ಮುಗಿಯುವ ತನಕ ಯಾವುದೇ ಕಾರಣಕ್ಕೂ ನಗರಸಭೆಗೆ ಆಡಳಿತಾಧಿಕಾರಿ ನೇಮಕಕ್ಕೆ ಅವಕಾಶ ನೀಡದೆ ನ್ಯಾಯ ಮತ್ತು ಸಮಾನತೆಯನ್ನು ಕಾಪಾಡಬೇಕು ಎಂದು ಅರ್ಜಿದಾರರು ರಿಟ್ ಅರ್ಜಿಯಲ್ಲಿ ಆಗ್ರಹಿಸಿದ್ದಾರೆ.ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅರುಣ್‌ಶ್ಯಾಮ್ ವಾದಿಸಿದ್ದರು. ವಕೀಲ ಸುಯೋಗ್ ಹೇರಳೆ ವಕಾಲತ್ತು ವಹಿಸಿದ್ದರು.