ಐಐಎಂಬಿ ನಿರ್ದೇಶಕರ ವಿರುದ್ಧದ ಜಾತಿ ನಿಂದನೆ ಕೇಸ್‌ಗೆ ಹೈಕೋರ್ಟ್‌ ತಡೆ

KannadaprabhaNewsNetwork |  
Published : Jan 01, 2025, 01:30 AM IST

ಸಾರಾಂಶ

ಪರಿಶಿಷ್ಟ ಜಾತಿಗೆ ಸೇರಿದ ಪ್ರಾಧ್ಯಾಪಕರೊಬ್ಬರಿಗೆ ಜಾತಿ ಆಧರಿಸಿ ತಾರತಮ್ಯ ಮಾಡಿದ ಆರೋಪ ಸಂಬಂಧ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್ ಹಾಗೂ ಇತರೆ ಏಳು ಮಂದಿಯ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪರಿಶಿಷ್ಟ ಜಾತಿಗೆ ಸೇರಿದ ಪ್ರಾಧ್ಯಾಪಕರೊಬ್ಬರಿಗೆ ಜಾತಿ ಆಧರಿಸಿ ತಾರತಮ್ಯ ಮಾಡಿದ ಆರೋಪ ಸಂಬಂಧ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್ ಹಾಗೂ ಇತರೆ ಏಳು ಮಂದಿಯ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ಗೆ ಹೈಕೋರ್ಟ್ ತಡೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ಐಐಎಂಬಿ ಮಾರ್ಕೆಟಿಂಗ್‌ ವಿಭಾಗದ ಪ್ರಾಧ್ಯಾಪಕ ಗೋಪಾಲ್‌ ದಾಸ್‌ ನೀಡಿದ ದೂರು ಆಧರಿಸಿ ಮೈಕೋ ಲೇಔಟ್‌ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಐಐಎಂಬಿ ನಿರ್ದೇಶಕ ರಿಷಿಕೇಶ್ ಟಿ. ಕೃಷ್ಣನ್, ಡೀನ್ ದಿನೇಶ್ ಕುಮಾರ್ ಸೇರಿದಂತೆ ಎಂಟು ಮಂದಿ ಆರೋಪಿಗಳು ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡ್ ಅವರ ಪೀಠ ಈ ಮಧ್ಯಂತರ ಆದೇಶ ಮಾಡಿ, ಅರ್ಜಿ ಸಂಬಂಧ ಮೈಕೋ ಲೇಔಟ್‌ ಠಾಣಾ ಪೊಲೀಸರು ಮತ್ತು ದೂರುದಾರ ಗೋಪಾಲ್‌ ದಾಸ್‌ಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಗೋಪಾಲ್‌ ದಾಸ್‌ ಡಿ.20ರಂದು ಮೈಕೋ ಲೇಔಟ್‌ ಪೊಲೀಸ್‌ ಠಾಣೆಗೆ ದೂರು ನೀಡಿ, ಐಐಎಂಬಿ ನಿರ್ದೇಶಕ ರಿಷಿಕೇಷ್‌ ಕೃಷ್ಣನ್‌, ಡೀನ್‌ ದಿನೇಶ್‌ ಕುಮಾರ್‌ ಸೇರಿ ಐಐಎಂಬಿಯ ಒಟ್ಟು ಎಂಟು ಮಂದಿ ಉದ್ದೇಶಪೂರ್ವಕವಾಗಿ ನನ್ನ ಜಾತಿಯ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಕೆಲಸದ ವಾತಾವರಣದಲ್ಲಿ ಸಮಾನ ಅವಕಾಶವನ್ನು ನೀಡದೆ ಜಾತಿ ಬೇಧ-ವೈಷಮ್ಯ ಮಾಡುತ್ತಾ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಕೆಲಸದ ಸ್ಥಳದಲ್ಲಿ ಅಡಚಣೆ ಉಂಟು ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದರು.

ಆ ದೂರು ಆಧರಿಸಿ ಪೊಲೀಸರು, ಅರ್ಜಿದಾರರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ (ದೌರ್ಜನ್ಯ ನಿಯಂತ್ರಣ) ಕಾಯ್ದೆಯಡಿ ಜಾತಿ ನಿಂದನೆ, ಜೀವ ಬೆದರಿಕೆ ಹಾಕಿದ ಆರೋಪ ಸಂಬಂಧ ಎಫ್‌ಐಆರ್‌ ದಾಖಲಿಸಿದ್ದರು. ಇದರಿಂದ ತಮ್ಮ ವಿರುದ್ಧದ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದರು.

ಡಿಸಿಆರ್‌ಇ ವಿಚಾರಣೆಗೂ ತಡೆ:

ಇದೇ ಪ್ರಕರಣ ಸಂಬಂಧ ಅರ್ಜಿದಾರರ ವಿರುದ್ಧದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ (ಡಿಸಿಆರ್‌ಇ) ವಿಚಾರಣಾ ಪ್ರಕ್ರಿಯೆಗೂ ತಡೆಯಾಜ್ಞೆ ನೀಡಿ ಹೈಕೋರ್ಟ್‌ ಇತ್ತೀಚೆಗೆ ಆದೇಶಿಸಿದೆ. ಡಿಸಿಆರ್‌ಇ ವಿಚಾರಣೆ ರದ್ದುಪಡಿಸಿ ರಿಷಿಕೇಶ್‌ ಕೃಷ್ಣನ್‌ ಹಾಗೂ ಐಐಎಂಬಿ ಐವರು ಪ್ರಾಧ್ಯಾಪಕರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಬಗ್ಗೆ ವಿಚಾರಣೆ ನಡೆಸಲು ಅಧಿಕಾರವಿಲ್ಲ. ಹೀಗಾಗಿ, ಎಸ್ಸಿ-ಎಸ್ಟಿಗೆ ಸೇರಿದ ವ್ಯಕ್ತಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಅರ್ಜಿದಾರರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಡಿಸಿಆರ್‌ಗೆ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್‌, ಡಿಸಿಆರ್‌ಇ ವಿರುದ್ಧದ ವಿಚಾರಣಾ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!