ಮುಡಾ ಹಗರಣದಲ್ಲಿ ಹೈಕೋರ್ಟ್‌ ಅಸ್ತು ಎಂದರೆ ಸಿಎಂ ರಾಜೀನಾಮೆ ನೀಡಲಿ: ಮಾಜಿ ಸಂಸದ ಪ್ರತಾಪ್ ಸಿಂಹ

KannadaprabhaNewsNetwork | Updated : Sep 11 2024, 10:54 AM IST

ಸಾರಾಂಶ

ಮುಡಾ ಹಗರಣ ಸಂಬಂಧ   ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಒಂದು ವೇಳೆ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅಸ್ತು ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಆಗ್ರಹಿಸಿದರು 

  ಹಾಸನ :  ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ಭವಿಷ್ಯ ಮುಂದೆ ಏನಾಗಲಿದೆ ಎಂಬುದು ನನಗೆ ಗೊತ್ತಿಲ್ಲ. ಮುಡಾ ಹಗರಣ ಸಂಬಂಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಕೊಟ್ಟಿರುವುದರಿಂದ ಆ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಂತಿಮ ತೀರ್ಪು ಹೊರ ಬಿದ್ದಿಲ್ಲ. ಒಂದು ವೇಳೆ ಪ್ರಾಸಿಕ್ಯೂಷನ್‌ಗೆ ಹೈಕೋರ್ಟ್ ಅಸ್ತು ಎಂದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಿ ಅಧಿಕಾರದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಆಗ್ರಹಿಸಿದರು.

ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಪಾಂಚಜನ್ಯ ಗಣೇಶನ ದರ್ಶನ ಪಡೆದ ವೇಳೆ ಮಾಧ್ಯಮದೊಂದಿಗೆ ಮಾತನಾಡಿ, ಯಾರೇ ಆಗಲಿ ನೈತಿಕ ಹೊಣೆಹೊತ್ತು ರಾಜೀನಾಮೆ ಕೊಡಬೇಕೇ ಹೊರತು, ಒತ್ತಡ ಹೇರಿ ರಾಜೀನಾಮೆ ಕೊಡಿಸಲು ಕಾನೂನಿನಲ್ಲಿ ಆಗುವುದಿಲ್ಲ. ಏಕೆಂದರೆ ದೆಹಲಿ ಸಿಎಂ ಅರವಿಂದ ಕೇಜ್ರವಾಲ್ ಜೈಲಿನಿಂದಲೇ ರಾಜ್ಯಭಾರ ಮಾಡುತ್ತಿರುವ ಕೆಟ್ಟ ಉದಾಹರಣೆ ನಮ್ಮಲ್ಲಿದೆ. ಕರ್ನಾಟಕ ಹೈಕೋರ್ಟ್ ರಾಜ್ಯಪಾಲರ ಅನುಮತಿ ಎತ್ತಿ ಹಿಡಿದರೆ ಸಿದ್ದರಾಮಯ್ಯ ಅವರು ಯಾವ ಸಂಪ್ರದಾಯಕ್ಕೆ ನಾಂದಿ ಹಾಡುತ್ತಾರೆ ಎಂಬುದರ ಮೇಲೆ ಅವರ ಮತ್ತು ಕಾಂಗ್ರೆಸ್ ಸರ್ಕಾರದ ಭವಿಷ್ಯ ನಿಂತಿದೆ ಎಂದು ಹೇಳಿದರು.

ಹಿರಿಯ ರಾಜಕಾರಣಿಗಳ ನಡುವೆ ಅಂಡರ್ ಸ್ಟ್ಯಾಂಡಿಂಗ್ ರಾಜಕೀಯ ಇದ್ದು, ತಮ್ಮ ಮಕ್ಕಳು ಹಾಗೂ ಕುಟುಂಬ ಬೆಳೆಸಲೆಂದೇ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ ಎಂದು ಲೋಕಸಭಾ ಮಾಜಿ ಸದಸ್ಯ ಪ್ರತಾಪ್ ಸಿಂಹ ಬೇಸರ ವ್ಯಕ್ತಪಡಿಸಿದರು.

ಮುಡಾ ಹಗರಣದಲ್ಲೂ ಕೂಡ ಸಿಎಂ ಅವರು ತೆಗೆದುಕೊಂಡಿರುವ ಸೈಟ್‌ಗಳನ್ನು ಸರೆಂಡರ್ ಮಾಡಿ ತನಿಖೆಗೆ ಆದೇಶ ಮಾಡಿದರೆ ಅದು ಒಂದು ಲಾಜಿಕಲ್ ಎಂಡ್‌ಗೆ ಹೋಗ್ತಾ ಇತ್ತು. ಇಲ್ಲ ಅಂದ್ರೆ ಏನೂ ಆಗಲ್ಲ, ಹಿರಿಯರಿಗೆ ಒಂದು ವಿಷಯ, ವಿವಾದ, ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗುವ ಕರ್ನಾಟಕದ ಹಿರಿಯ ರಾಜಕಾರಣಿಗಳ ನಡೆ ನುಡಿ ನನಗೂ ಬೇಸರ ತರಿಸಿದೆ. ಒಬ್ಬರ ಹಗರಣ ಮತ್ತೊಬ್ಬರು ಬಿಚ್ಚಿಡುತ್ತೇನೆ ಅಂತಾರೆ, ಪೆಟ್ಟಿಗೆ ತೋರಿಸಿ ಹಾವು ಬಿಡ್ತೀನಿ ಅಂತಾರೆ, ಹಿರಿಯ ರಾಜಕಾರಣಿಗಳ ನಡುವೆ ಅಂಡರ್ ಸ್ಟ್ಯಾಂಡಿಂಗ್ ಪಾಲಿಟಿಕ್ಸ್ ಇದೆ. ಎಲ್ಲರೂ ತಮ್ಮ ಮಕ್ಕಳು ಹಾಗೂ ಕುಟುಂಬ ಬೆಳೆಸಲೆಂದೇ ರಾಜಕಾರಣದಲ್ಲಿ ಇದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

ಸ್ವ ಉದ್ದಾರ ಬಿಟ್ಟು, ರಾಜ್ಯ ಉದ್ಧಾರ ಮಾಡುವ ಯಾವ ಕೆಲಸ ಮಾಡುತ್ತಿದ್ದಾರೆ ಹೇಳಲಿ ಎಂದು ಖಾರವಾಗಿ ಪ್ರಶ್ನಿಸಿದ ಅವರು, ಒಂದು ಪಕ್ಷದಲ್ಲಿ ಕೋಟ್ಯಂತರ ಜನ ಕಾರ್ಯಕರ್ತರು, ಪದಾಧಿಕಾರಿಗಳು, ಲೀಡರ್ ಇರುತ್ತಾರೆ. ಅವರನ್ನು ಬಿಟ್ಟು ತಮ್ಮವರ ಕಲ್ಯಾಣಕ್ಕಾಗಿ ಹೊಂದಾಣಿಕೆ ರಾಜಕೀಯ ಮಾಡುತ್ತಿರುವವರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ರಾಜಕಾರಣದಲ್ಲಿ ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣ ಹೋಗಬೇಕು. ಮೋದಿ ಅವರೂ ಯಾವುದೇ ಹಿನ್ನೆಲೆ ಇರದ ಒಂದು ಲಕ್ಷ ಯುವಕರನ್ನು ರಾಜಕೀಯಕ್ಕೆ ತನ್ನಿ ಎಂದಿದ್ದಾರೆ. ನನಗೆ ಸಿದ್ಧಾಂತ, ರಾಷ್ಟ್ರೀಯತೆಯೇ ಮುಖ್ಯ ಎಂದು ಹೇಳಿದರು.

ಜಾತಿ ರಾಜಕಾರಣ, ದುಡ್ಡಿನ ಮೇಲಾಟ ಇರಬಾರದು. ನಾನು ರಾಜಕೀಯಕ್ಕೆ ದುಡ್ಡು ಮಾಡಲು ಬಂದಿಲ್ಲ, ಮುಡಾ ಅಥವಾ ಹುಡಾದಲ್ಲಿ ಸೈಟ್ ಮಾಡಲು ಬಂದಿಲ್ಲ. ನಮ್ಮ ತಂದೆ ೧೯೬೮ರಲ್ಲೇ ಸಂಘದ ಸದಸ್ಯರಾಗಿದ್ದರು. ನಾನು ಸಿದ್ದಾಂತದ ಹಿನ್ನೆಲೆಯಿಂದ ಬಂದವನು. ಯಾವ ಹುದ್ದೆ ಬೇಕಾಗಿಲ್ಲ. ಮೈಸೂರು ನನ್ನ ಕರ್ಮಭೂಮಿ, ಅಲ್ಲೇ ಇದ್ದು, ರಾಜಕಾರಣ ಮಾಡಲಾಗುವುದು ಎಂದು ತಿಳಿಸಿದರು.

ನಾನು ಸ್ವಪಕ್ಷೀಯರ ಮೇಲೆ ಅಸಮಾಧಾನ ಹೊರ ಹಾಕಿಲ್ಲ, ನಾನು ಪತ್ರಕರ್ತ ಆಗಿದ್ದಾಗಲೂ ಇದ್ದುದನ್ನು ಇದ್ದ ಹಾಗೆ ಹೇಳುತ್ತಿದ್ದೆ. ರಾಜಕಾರಣಿ ಆದ ಕೂಡಲೇ ಅಧಿಕಾರಕ್ಕಾಗಿ ಸತ್ಯ ಮಾತನಾಡದೇ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕಾಂಗ್ರೆಸ್ ಸರ್ಕಾರ ಒಂದು ಕಾಲು ವರ್ಷ ಪೂರೈಸಿದೆ. ಶೇ.೪೦ ಪರ್ಸೆಂಟ್ ಕಮಿಷನ್, ಪಿಎಸ್‌ಐ, ಬಿಟ್ ಕಾಯಿನ್ ಹಗರಣ, ಪೇ ಸಿಎಂ ಆರೋಪ ಏನಾಯಿತು, ಅಧಿಕಾರಕ್ಕೆ ಇರುವವರು ಒಂದೇ ಒಂದು ಸಣ್ಣ ಸಾಕ್ಷ್ಯ ಕೊಟ್ಟಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಎಲ್ಲವನ್ನೂ ಮರೆತಿದ್ದಾರೆ. ಅಧಿಕಾರಕ್ಕೆ ಬರುವ ಮೊದಲು ಸರಣಿ ಆರೋಪ ಮಾಡಿ, ಈಗ ಮೌನವಾಗಿದ್ದಾರೆ ಎಂದು ಟೀಕಿಸಿದರು.

ಓಲೈಕೆ ರಾಜಕಾರಣ ಮಾಡಲ್ಲ:

ನಾನು ಓಲೈಕೆ ರಾಜಕಾರಣ ಮಾಡಿಲ್ಲ, ಯಾರಿಗೋ ಬೇಸರ ಆಗಲಿದೆ ಎಂದು ಹೇಳಬೇಕಾದುದನ್ನು ಹೇಳದೆ ಸುಮ್ಮನಿಲ್ಲ. ಮುಂದೆಯೂ ಸತ್ಯ ಹೇಳುವ ಸಂಪ್ರದಾಯ ಮುಂದುವರಿಸುವೆ. ನಾನು ರಾಜಕೀಯಕ್ಕೆ ಬಂದಿರುವುದು ಹುದ್ದೆಗಾಗಿ ಅಲ್ಲ, ಜನಸೇವೆಗಾಗಿ, ನನ್ನೊಳಗಿನ ರಾಜಕಾರಣಿಯನ್ನು ನನ್ನೊಳಗಿನ ಪತ್ರಕರ್ತ ಯಾವತ್ತೂ ರಿವೀವ್ ಮಾಡುತ್ತಲೇ ಇರುತ್ತಾನೆ. ನನ್ನೊಳಗಿನ ಪತ್ರಕರ್ತ ಸಾಯೋವರೆಗೂ ಬದುಕಿರುತ್ತಾನೆ ಎಂದು ಹೇಳಿದರು.

Share this article