ಕನ್ನಡಪ್ರಭ ವಾರ್ತೆ ಕಲಾದಗಿ
ಸೆ.28ರಂದು ಶ್ರೀಮಠದ ಲಿಂ.ಪಡದಪ್ಪಯ್ಯ ಶ್ರೀಗಳ ಹಾಗೂ ಲಿಂ.ಚಂದ್ರಶೇಖರ ಶ್ರೀಗಳ ಪುಣ್ಯಾರಾಧನೆ ಮಹೋತ್ಸವದ ಬ್ಯಾನರ್ ಮಾಡಿಸಿದ್ದು, ಬಾಳೆಹೊನ್ನೂರ ಶ್ರೀಮದ್ ರಂಭಾಪುರಿ ಪೀಠದ ಶಾಖಾಮಠ ಗುರುಲಿಂಗೇಶ್ವರ ಪಂಚಗ್ರಹ ಸಂಸ್ಥಾನ ಹಿರೇಮಠ ಮಠ ಎಂದು ಬರೆಯಿಸಲಾಗಿತ್ತು.
ಇದರಿಂದ ಅಸಮಾಧಾನಗೊಂಡ ಗಂಗಾಧರ ಸ್ವಾಮೀಜಿ ಒಪ್ಪದ ಭಕ್ತರ ಬಣದ ಪ್ರಮುಖರಾದ ನಂದೀಶ ಹೊಸೂರು, ಸಾವಳಿಗೆಪ್ಪ ಪಾಣಿಶೆಟ್ಟಿ ಮಲ್ಲಿಕಾರ್ಜುನ ಮಂಟೂರ, ಮಲ್ಲಪ್ಪ ಪಾಣಿಶೆಟ್ಟಿ, ಈಶ್ವರ ಯಮಕನಮರಡಿ, ಪರಪ್ಪ ಕಡೆಮನಿ, ಪಿ.ಪಿ.ಸಗರಿ, ಪಡದಪ್ಪ ಸಗರಿ, ಗುರುಪಾದಪ್ಪ ತುಪ್ಪದ ನೇತೃತ್ವದಲ್ಲಿ ನೂರಾರು ಜನರರೊಂದಿಗೆ ಶ್ರೀಮಠಕ್ಕೆ ಆಗಮಿಸಿ ಸಭೆ ನಡೆಸಿ ಶ್ರೀಮಠದ ಸ್ವಯಂ ಘೋಷಿತ ಪಿಠಾಧಿಪತಿ ಗಂಗಾಧರ ಸ್ವಾಮೀಜಿ ಶ್ರೀಮಠದ ಹಿಂದಿನ ಪೂಜ್ಯರ ಟಾಟಾ ಸಫಾರಿ ಕಾರನ್ನು ಯಾವ ಅಧಿಕಾರದಿಂದ ಮಾರಾಟ ಮಾಡಿದ್ದು, ನ್ಯಾಯಾಲಯ ತಾತ್ಕಾಲಿಕ ಆದೇಶದಂತೆ ಗಂಗಾಧರ ಸ್ವಾಮೀಜಿ ಪೂಜೆ ಪುನಸ್ಕಾರ ಮಾಡಲಷ್ಟೇ ಅವಕಾಶ ಇದೆ. ಶ್ರಿಮಠದ ಸಭಾಭವನ ನಿರ್ಮಾಣ ಮಾಡಲಾಗಿದೆ ಎಂದು ಅನುದಾನ ಬಿಡುಗಡೆ ಮಾಡಿಸಿಕೊಂಡು ಹಣ ಗುಳುಂ ಮಾಡಿದ್ದಾರೆ. ಸಮುಧಾನ ಭವನ ಎಲ್ಲಿದೆ. ರಂಭಾಪುರಿ ಶ್ರೀಗಳು ಪಿಠಾಧಿಪತಿ ನೇಮಕ ಮಾಡಿಲ್ಲ ಎಂದು ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದರೂ ಸಹ ಗಂಗಾಧರ ಶ್ರೀಗಳು ಮಠದ ಪಿಠಾಧಿಕಾರಿ ಎಂದು ಹೇಳಿಕೊಳ್ಳುವುದೇಕೆ ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದರು.ಕಲಾದಗಿ ಠಾಣಾ ಪಿಎಸೈ ಶ್ರೀ ಮಠಕ್ಕೆ ಆಗಮಿಸಿ ಶ್ರೀಗಳನ್ನು ಮಠದ ಪಿಠಾಧಿಪತಿ ಎಂದು ಒಪ್ಪದ ಬಣದವರಿಗೆ ಬುದ್ಧಿವಾದ ಹೇಳಿದರು. ಮಠದಲ್ಲಿ ಗುಂಪುಗೂಡಲು, ಪ್ರತಿಭಟಿಸಲು ಅವಕಾಶ ಇಲ್ಲ. ಪೊಲೀಸ್ ಇಲಾಖೆಯ ಅನುಮತಿ ಪಡೆದಿಲ್ಲ. ನ್ಯಾಯಾಲಯದ ಆದೇಶದ ಉಲ್ಲಂಘನೆ ಮಾಡಿದಲ್ಲಿ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮನವೊಲಿಸಲು ಯತ್ನಿಸಿದರು. ಈ ವೇಳೆ ನಂದೀಶ ಹೊಸೂರು ಮತ್ತು ಪಿಎಸೈ ಪ್ರವೀಣ ಬೀಳಗಿ ಅವರ ಮದ್ಯೆ ಮಾತಿನ ಚಕಮಕಿಯೂ ನಡೆಯಿತು.
ಡಿವೈಎಸ್ಪಿ ಗಜಾನನ ಸುತಾರ ಶ್ರೀಮಠಕ್ಕೆ ಆಗಮಿಸಿ, ಮಠದಲ್ಲಿ ಗುಂಪು ಸಭೆ ಸೇರಿದ್ದು ನ್ಯಾಯಾಲಯದ ಆದೇಶದ ಉಲ್ಲಂಘನೆ ಎಂಬುದು ಎದ್ದು ಕಾಣುತ್ತಿದ್ದು ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಿ ಗುಂಪನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ರಂಭಾಪುರಿ ಪೀಠದ ಜಗದ್ಗುರುಗಳು ಕೆ.ಎಂ.ಗಂಗಾಧರ ಸ್ವಾಮೀಜಿಯನ್ನು ಮಠದ ಪಿಠಾಧಿಪತಿಯನ್ನಾಗಿ ನೇಮಿಸಿದ್ದರು. ಇದಕ್ಕೆ ಗ್ರಾಮದ ಒಂದು ಗುಂಪು ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯ ಕೋರ್ಟ್ ಮೆಟ್ಟಿಲೇರಿದ್ದು, ಗಂಗಾಂಧರ ಶ್ರೀಗಳಿಗೆ ಪೂಜೆ ನಡೆಸಲು ಮಾತ್ರ ಅನುಮತಿ ನೀಡಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನ್ಯಾಯಾಲಯ ಮಧ್ಯಂತರ ತೀರ್ಪು ನೀಡಿದೆ.