ನಾವದಗಿ ನೀರಿನಲ್ಲಿ ಹೆಚ್ಚಿನ ಫ್ಲೋರೈಡ್‌ ಅಂಶ ಪತ್ತೆ, ಪರೀಕ್ಷೆಗೆ ರವಾನೆ

KannadaprabhaNewsNetwork | Published : Jun 19, 2024 1:04 AM

ಸಾರಾಂಶ

ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿರುವ ತಾಲೂಕಿನ ನಾವದಗಿ ಗ್ರಾಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಬೋರ್ವೆಲ್ ನೀರು, ಬಾವಿ ನೀರು ಮತ್ತು ಜೆಜೆಎಂ ಪೈಪ್ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರಿಶೀಲನೆ ನಡೆಸಿದರಲ್ಲದೇ ಬೋರ್ವೆಲ್ ಮತ್ತು ಬಾವಿ ನೀರಿನಲ್ಲಿ ಪ್ಲೋರೈಡ್ ಹೆಚ್ಚಿಗೆ ಕಂಡುಬಂದಿದ್ದರಿಂದ ಸದರಿ ನೀರುಗಳನ್ನು ಗ್ರಾಮಸ್ಥರು ಯಾರೂ ಬಳಸಬಾರದೆಂದು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಕಲುಷಿತ ನೀರು ಸೇವಿಸಿ ಜನರು ಅಸ್ವಸ್ಥಗೊಳ್ಳುತ್ತಿರುವ ತಾಲೂಕಿನ ನಾವದಗಿ ಗ್ರಾಮಕ್ಕೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಭೇಟಿ ನೀಡಿ ಬೋರ್‌ವೆಲ್‌ ನೀರು, ಬಾವಿ ನೀರು ಮತ್ತು ಜೆಜೆಎಂ ಪೈಪ್‌ಲೈನ್ ಮೂಲಕ ಸರಬರಾಜು ಮಾಡಲಾಗುತ್ತಿರುವ ನೀರನ್ನು ಪರಿಶೀಲನೆ ನಡೆಸಿದರಲ್ಲದೇ ಬೋರ್‌ವೆಲ್ ಮತ್ತು ಬಾವಿ ನೀರಿನಲ್ಲಿ ಪ್ಲೋರೈಡ್ ಹೆಚ್ಚಿಗೆ ಕಂಡುಬಂದಿದ್ದರಿಂದ ಸದರಿ ನೀರುಗಳನ್ನು ಗ್ರಾಮಸ್ಥರು ಯಾರೂ ಬಳಸಬಾರದೆಂದು ಮನವಿ ಮಾಡಿದರು.

ನಾವದಗಿ ಗ್ರಾಮದ ಬಡಾವಣೆಗಳಲ್ಲಿ ಸಂಚರಿಸಿದ ಅಧಿಕಾರಿಗಳ ತಂಡ ಚರಂಡಿ ಮತ್ತು ಕುಡಿಯುವ ನೀರಿನ ಮತ್ತು ಬಳಸುವ ನೀರಿನ ಕುರಿತು ಪರಿಶೀಲನೆ ನಡೆಸಿದ ಅವರು, ಸ್ಥಳದಲ್ಲಿ ಉಪಸ್ಥಿತಿರಿದ್ದ ಪಿಡಿಒ ಕಿರಣಗಿ ಅವರು ಚರಂಡಿ ಮೇಲಾಥಿನ್ ಫೌಡರ್ ಸಿಂಪಡಿಸಲು ಮತ್ತು ಓವರ್‌ ಹೆಡ್‌ ಟ್ಯಾಂಕರ್‌ನಲ್ಲಿ ಬ್ಲೀಚಿಂಗ್ ಪೌಡರ್ ಹಾಕಲು ಸೂಚಿಸಿದರಲ್ಲದೇ ಗ್ರಾಮದಲ್ಲಿರುವ ಕುಡಿಯುವ ನೀರಿನ ಮೂಲಗಳಲ್ಲಿ ಸಂಗ್ರಹಿಸಿದ ನೀರಿನ ತಪಾಸಣೆ ಆಗಿ ಬರುವವರೆಗೂ ಜಲಮೂಲಗಳೆಲ್ಲವನ್ನು ತಾತ್ಕಾಲಿಕ ಸ್ಥಗಿತಗೊಳಿಸಲು ಸೂಚಿಸಿದರು.

ಉಪಸ್ಥಿತ ಆರ್‌ಡಬ್ಲ್ಯುಎಸ್ ಅಧಿಕಾರಿ ಹಿರೇಗೌಡರ ಅವರಿಗೆ ಕೂಡಲೇ ೨ ದಿನಗಳ ಒಳಗಾಗಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಲು ಸೂಚಿಸಿದರು. ಆರೋಗ್ಯ ಇಲಾಖೆಯ ತಾಲೂಕಾಡಳಿತ ವೈದ್ಯಾಧಿಕಾರಿ ಡಾ.ಸತೀಶ ತಿವಾರಿ ಅವರು ವಾಂತಿ ಭೇದಿ ಕುಡಿಯುವ ನೀರಿನಿಂದಲೇ ಬಂದಿದ್ದು ಎಂಬುದು ಕಂಡು ಬಂದಿದೆ. ಹೀಗಾಗಿ ತಾಪಂ ಇಒ ಅಧಿಕಾರಿಗಳ ತಂಡ ಕ್ರಮವಹಿಸಲು ಮುಂದಾಗಿದ್ದಾರೆ. ವಾಂತಿ-ಭೇದಿ ಉಲ್ಬಣಗೊಳ್ಳದ ಹಾಗೆ ತಡೆಗಟ್ಟಲು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಗ್ರಾಮದಲ್ಲಿಯೇ ವಾಸ್ತವ್ಯ ಹೊಡಲಿದ್ದಾರೆಂದರು.

ಈ ಸಮಯದಲ್ಲಿ ತಾಲೂಕಾಡಳಿತ ವೈದ್ಯಾಧಿಕಾರಿಗಳಾದ ಡಾ.ಸತೀಶ ತಿವಾರಿ, ಡಾ.ಸುನೀಲ ಹಿರೇಗೌಡರ, ಅಭಿವೃದ್ಧಿ ಅಧಿಕಾರಿ ಅನಿಲ ಕಿರಣಗಿ, ಆರೋಗ್ಯ ಇಲಾಖೆಯ ಅಧಿಕಾರಿ ಕವಿತಾ ದೊಡಮನಿ, ಗ್ರಾಪಂ ಕಾರ್ಯದರ್ಶಿ ಹಣಮಗೌಡ ಚೌದ್ರಿ, ದೊರೆಗೋಳ, ಆರ್‌ಡಬ್ಲ್ಯುಎಸ್ ಅಧಿಕಾರಿ ಹಿರೇಗೌಡರ, ಸಿಬ್ಬಂದಿಗಳಾದ ರಾಘವೇಂದ್ರ ಟಿ.ಎನ್., ಸತೀಶ ಕುಲಕರ್ಣಿ, ಆಶಾ ಕಾರ್ಯಕರ್ತರಾದ ಮಂಜುಳಾ ಹೇಳವರ, ರೇಣುಕಾ ಬಡಿಗೇರ ಅವರು ಉಪಸ್ಥಿತರಿದ್ದರು.

----

ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಕ್ರಮ

ನಾವದಗಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಜನರಲ್ಲಿ ವಾಂತಿ, ಬೇಧಿ ಕಾಣಿಸಿಕೊಂಡಿದ್ದರಿಂದ ಕುಡಿಯುವ ನೀರಿನ ಜಲ ಮೂಲಗಳೆಲ್ಲವನ್ನು ತಾತ್ಕಾಲಿಕ ಸ್ಥಗಿತಗೊಳಿಸಿರುವ ಅಧಿಕಾರಿಗಳು ಸದ್ಯ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲು ಕ್ರಮಕೈಗೊಂಡಿದ್ದಾರಲ್ಲದೇ ಗ್ರಾಮದಲ್ಲಿಯ ಬಾವಿ ನೀರು ಮತ್ತು ಕೈಪಂಪ್‌ ಬೋರ್‌ವೆಲ್ ನೀರು ಬಳಸಬಾರದೆಂದು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ.

---

ಕೋಟ್‌

ನಾವದಗಿ ಗ್ರಾಮಕ್ಕೆ ಖುದ್ದಾಗಿ ಭೇಟಿ ನೀಡಿ ಎಲ್ಲ ಕುಡಿಯುವ ನೀರಿನ ಜಲಮೂಲಗಳಿಂದ ನೀರನ್ನು ಸಂಗ್ರಹಣ ಮಾಡಿ ತಪಾಸಣೆಗೆ ಕಳುಹಿಸಲಾಗಿದೆ. ಗ್ರಾಮದ ಜಲಮೂಲಗಳಿಂದ ಬರುವ ನೀರನ್ನು ಯಾರೂ ಬಳಸದಂತೆ ಮನವಿ ಮಾಡಿದ್ದೇವೆ. ಗ್ರಾಮದಲ್ಲಿ ಚರಂಡಿ ಇನ್ನಿತರ ಕಡೆ ನೀರಿನ ಸಂಗ್ರಹಣೆಗೊಂಡ ಸ್ಥಳಗಳಿಗೆ ಮೇಲಾಥಿನ್ ಫೌಡರ್ ಸಿಂಪಡಿಸಲು ಪಿಡಿಒಗೆ ಸೂಚಿಸಿದ್ದೇನೆ.

-ಬಿ.ಆರ್.ಬಿರಾದಾರ ತಾಪಂ ಇಒ

Share this article