ಬಳ್ಳಾರಿ: ಪಡಿತರ ಅಕ್ಕಿ ದಂಧೆಯಲ್ಲಿ ದೊಡ್ಡಮಟ್ಟದ ಅಧಿಕಾರಿಗಳು ಶಾಮೀಲಾಗಿದ್ದು, ಅವರು ಪಾರಾಗಲು ಪ್ರಕರಣದಲ್ಲಿ ಗನ್ ಮ್ಯಾನ್‌ನನ್ನು ಬಲಿಪಶು ಮಾಡಲಾಗಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಯಾವುದೇ ಅಧಿಕಾರಿಯ ಅನುಮತಿ ಇಲ್ಲದೆ ಕೆಳ ಹಂತದ ಸಿಬ್ಬಂದಿ ಈ ರೀತಿ ಮಾಡಲು ಸಾಧ್ಯವಿಲ್ಲ. ಪ್ರತಿ ತಿಂಗಳು ಯಾರಿಗೆ ಎಷ್ಟು ಹಣ ಮುಟ್ಟುತ್ತದೆ ಎಂಬುದು ಬಯಲಾಗಬೇಕಿದೆ. ಇದು ಬೆಳಕಿಗೆ ಬರುತ್ತಿದ್ದಂತೆ ದೊಡ್ಡವರು ಉಳಿದುಕೊಳ್ಳಲು ಸಣ್ಣ ಅಧಿಕಾರಿಯಾದ ಗನ್‌ಮ್ಯಾನ್ ಅನ್ನು ಬಲಿ ಮಾಡಲಾಗಿದೆ ಎಂದರು.
ಜಿಂದಾಲ್ ಕಾರ್ಖಾನೆ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಕಟ್ಟಬೇಕಾದ ತೆರಿಗೆಯನ್ನು ಕಟ್ಟದಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಜಿಂದಾಲ್‌ನವರು ಸ್ಥಳೀಯರಿಗೆ ಉದ್ಯೋಗ ನೀಡಲ್ಲ, ಇದೀಗ ತೆರಿಗೆನೂ ಪಾವತಿ ಮಾಡಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರಲ್ಲದೆ, ಜೆಎಸ್‌ಡಬ್ಲೂ ಕಾರ್ಯವೈಖರಿಯ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಂಚರಾಜ್ಯ ಚುನಾವಣೆ ಮುಗಿಯುವ ತನಕ ಗ್ಯಾಸ್ ರೇಟ್ ಹೆಚ್ಚಳ ಮಾಡಲಿಲ್ಲ. ಚುನಾವಣೆ ಮುಗಿದ ಒಂದೇ ವಾರದಲ್ಲಿ ಹೆಚ್ಚಳ ಮಾಡಿದರು. ಬಿಜೆಪಿಯವರು ಮೊದಲಿನಿಂದಲೂ ಗಿಮಿಕ್ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ ಎಂದು ಶಾಸಕ ಭರತ್ ರೆಡ್ಡಿ ಟೀಕಿಸಿದರು.