ಹಳಿಯಾಳದ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕ

KannadaprabhaNewsNetwork |  
Published : Aug 22, 2025, 01:01 AM IST
18ಎಚ್.ಎಲ್.ವೈ-1: ಹಳಿಯಾಳ ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳ. | Kannada Prabha

ಸಾರಾಂಶ

ಪ್ರಸಕ್ತ ಸಾಲಿನ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕವಾಗಿರುವ ಅಂಶ ದೃಢಪಟ್ಟಿದೆ.

ಹಳಿಯಾಳ: ಪ್ರಸಕ್ತ ಸಾಲಿನ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕವಾಗಿರುವ ಅಂಶ ದೃಢಪಟ್ಟಿದೆ. ಹಳಿಯಾಳದ ಕೃಷಿ ಇಲಾಖೆಯು ಕಳಿಸಿದ ಮೆಕ್ಕೆಜೋಳದ ಪರಿಶೀಲನೆ ನಡೆಸಿದ ಬೆಂಗಳೂರಿನ ಪೀಡೆನಾಶಕ ಶೇಷಾಂಶ ವಿಶ್ಲೇಷಣಾ ಪ್ರಯೋಗಾಲಯವು ಈ ಅಂಶವನ್ನು ಬಹಿರಂಗಪಡಿಸಿದೆ.

ತಾಲೂಕಿನಲ್ಲಿ ರೈತರು ರಾಸಾಯನಿಕ ಬಳಕೆಯನ್ನು ಅಧಿಕವಾಗಿ ಮಾಡುತ್ತಿದ್ದಾರೆಂಬ ಅಂಶವು ಈಗ ಮತ್ತೆ ದೃಢವಾಗಿದೆ. ಕಳೆದ ವರ್ಷ ಮಾವಿನ ಫಸಲಿನಲ್ಲಿ ಕೀಟನಾಶಕಗಳ ಪ್ರಮಾಣ ಅಧಿಕವಾಗಿರುವುದು ದೃಢವಾಗಿತ್ತು. ಈ ವರ್ಷ ಮೆಕ್ಕೆಜೋಳದಲ್ಲೂ ಕೀಟನಾಶಕಗಳ ಪ್ರಮಾಣ ಹೆಚ್ಚಾಗಿರುವ ಕಂಡು ಬಂದಿರುವುದು ಆತಂಕಕಾರಿ ಬೆಳವಣಿಗೆ ಎಂದು ಹೇಳಲಾಗುತ್ತಿದೆ.

ಹಳಿಯಾಳ ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ 3150 ಹೆಕ್ಟೇರ್ ಮೆಕ್ಕೆಜೋಳ ಬಿತ್ತನೆಯಾಗಿದೆ. ಮೆಕ್ಕೆಜೋಳದ ಬೆಳೆಯ ಪ್ರತಿ ಹಂತದಲ್ಲಿ ಸರಿಯಾದ ನಿರ್ವಹಣೆ ಮತ್ತು ಪೋಷಣೆ ಬಹಳ ಮುಖ್ಯವಾಗಿದೆ. ಮೆಕ್ಕೆಜೋಳಕ್ಕೆ ಪೋಷಕಾಂಶಗಳು ಬೇಕಾಗುತ್ತವೆ. ಸರಿಯಾದ ಪೋಷಕಾಂಶ ನಿರ್ವಹಣೆಯು ಬೆಳೆಯ ಇಳುವರಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಮೂರು ತಿಂಗಳಲ್ಲಿಯೇ ಈ ಬೆಳೆಯು ಕೊಯ್ಲಿಗೆ ಬರುತ್ತದೆ. ಹೀಗಿರುವಾಗ ರಾಜ್ಯದಲ್ಲಿಯೇ ಮೊಟ್ಟ ಮೊದಲು ಮಾರುಕಟ್ಟೆಗೆ ಬರುವುದೇ ಹಳಿಯಾಳ ತಾಲೂಕಿನಲ್ಲಿ ಬೆಳೆದ ಮೆಕ್ಕೆಜೋಳದ ಫಸಲು ಎಂಬ ಹೆಗ್ಗಳಿಕೆಯು ತಾಲೂಕಿಗೆ ಇದೆ. ಮೆಕ್ಕೆಜೋಳದ ಖರೀದಿಯು ಮೊದಲಿಗೆ ಹಳಿಯಾಳದಲ್ಲಿ ಆರಂಭವಾಗುವುದರಿಂದ, ಆರಂಭದಲ್ಲಿ ದರ ಕಡಿಮೆ ಇರುತ್ತದೆ. ಅದಕ್ಕಾಗಿ ಮೆಕ್ಕೆಜೋಳದ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕೆಂಬ ಬೇಡಿಕೆ ರೈತ ವರ್ಗದಿಂದ ವ್ಯಕ್ತವಾಗುತ್ತದೆ.

ಪ್ರಯೋಗಾಲಯದ ರಿಪೋರ್ಟ್‌:

ಹಳಿಯಾಳ ತಾಲೂಕಿನ ಕೃಷಿ ಇಲಾಖೆಯು ತಾಲೂಕಿನ ರೈತರು ಬೆಳೆದ ಮೆಕ್ಕೆಜೋಳವನ್ನು ಅದರ ಗುಣಮಟ್ಟ ಪರಿಶೀಲನೆಗಾಗಿ ಬೆಂಗಳೂರಿನ ಪೀಡೆನಾಶಕ ಶೇಷಾಂಶ ವಿಶ್ಲೇಷಣಾ ಪ್ರಯೋಗಾಲಯಕ್ಕೆ ಕಳಿಸಿತ್ತು. ಬೆಳೆಯನ್ನು ಪರಿಶೀಲಿಸಲಾಗಿ ಕೀಟನಾಶಕಗಳ ಪ್ರಮಾಣವು ಅಧಿಕ ಪ್ರಮಾಣದಲ್ಲಿರುವ ಅಂಶವು ದೃಢಪಡಿಸಿದೆ. ಅದಕ್ಕಾಗಿ ತಾಲೂಕಿನ ರೈತರು ಉತ್ತಮ ಬೇಸಾಯ ಕ್ರಮಗಳನ್ನು ಅನುಸರಿಸದೇ ಇರುವುದು, ಶಿಫಾರಸಿಗಿಂತ ಅಧಿಕ ಪ್ರಮಾಣದಲ್ಲಿ ಪೀಡೆನಾಶಕಗಳನ್ನು ಬಳಸಿರುವುದು ಅಥವಾ ಉದ್ದೇಶಪೂರ್ವಕವಾಗಿ ಮತ್ತು ಕಲಬೆರಕೆಯಿಂದ ಬೆಳೆಯಲ್ಲಿ ಪೀಡೆನಾಶಕಗಳ ಅಂಶಗಳ ಪ್ರಮಾಣ ಹೆಚ್ಚಿಗೆ ಕಂಡು ಬರುತ್ತಿದೆ ಎಂದು ಹೇಳಿದೆ. ಅದಕ್ಕಾಗಿ ತಾಲೂಕಿನ ರೈತರಿಗೆ ಪೀಡೆನಾಶಕಗಳ ಅಧಿಕ ಬಳಕೆಯ ದುಷ್ಪರಿಣಾಮಗಳ ಬಗ್ಗೆ ಹಾಗೂ ಹಾನಿಕಾರಕವಲ್ಲದ ಪೀಡೆನಿರ್ವಹಣಾ ಕ್ರಮಗಳನ್ನು ಮನವರಿಕೆ ಮಾಡುವ ಅವಶ್ಯಕತೆಯಿದೆ ಎಂದು ವರದಿಯಲ್ಲಿ ಎಚ್ಚರಿಸಿದೆ.

ಇಲಾಖೆಯಿಂದ ಮೆಕ್ಕೆಜೋಳದ ಬೆಳೆಯ ಸ್ಯಾಂಪಲ್ ಪರೀಕ್ಷೆಗೆ ಬೆಂಗಳೂರಿಗೆ ನಾವು ಕಳಿಸಿದ್ದೆವು. ಪ್ರಯೋಗಾಲಯದ ಪರಿಶೀಲನೆಯಲ್ಲಿ ಮೆಕ್ಕೆಜೋಳದಲ್ಲಿ ಕೀಟನಾಶಕಗಳ ಬಳಕೆ ಪ್ರಮಾಣ ಅಧಿಕವಾಗಿರುವುದು ದೃಢಪಟ್ಟಿದೆ. ಮೆಕ್ಕೆಜೋಳವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಆಹಾರ ಪದಾರ್ಥವನ್ನಾಗಿ ಬಳಸಲಾಗುತ್ತಿದ್ದು, ಹೀಗಿರುವಾಗ ಕೀಟನಾಶಕವುಳ್ಳ ಮೆಕ್ಕೆಜೋಳದ ಬಳಕೆಯು ಆರೋಗ್ಯಕ್ಕೆ ಮಾರಕ. -ಪಿ.ಐ.ಮಾನೆ, ಹಳಿಯಾಳ-ದಾಂಡೇಲಿ ತಾಲೂಕು ಕೃಷಿ ಸಹಾಯಕ ನಿರ್ದೇಶಕ

PREV

Recommended Stories

ಗುತ್ತಲದಲ್ಲಿ ಸಂಭ್ರಮದ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಬಸ್ತಿಮಕ್ಕಿಯಲ್ಲಿ ಕಾಮಧೇನು-ಕಲ್ಪತರು ಸೌಹಾರ್ದ ಸಹಕಾರಿ ಶಾಖೆ ಉದ್ಘಾಟನೆ