ಆದರ್ಶ ಜೀವನ ಸಾಗಿಸಿ ಮುನ್ನಡೆಯಿರಿ

KannadaprabhaNewsNetwork | Published : Jan 29, 2024 1:31 AM

ಸಾರಾಂಶ

ಜಿಲ್ಲೆಯ ಫಲಿತಾಂಶ ಉತ್ತಮ ಪಡಿಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಸಂವಾದ ಕಾರ್ಯಕ್ರಮ, ಶಿಕ್ಷಕರೊಂದಿಗೆ ಸಮಾಲೋಚನೆ, ಪ್ರಶ್ನೆ ಪತ್ರಿಕೆ ವಿಶ್ಲೇಷಣೆ, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ಮಕ್ಕಳಿಗೆ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಹಾಗೂ ತೆರೆದ ಪುಸ್ತಕ ಪರೀಕ್ಷೆ ನಡೆಸುತ್ತಿದ್ದು ಮಕ್ಕಳು ಆ ಎಲ್ಲಾ ಪರೀಕ್ಷೆಗಳಲ್ಲಿ ನಿರ್ಭಯವಾಗಿ ಭಾಗವಹಿಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದು ಫಲಿತಾಂಶ ಉತ್ತಮ ಮಟ್ಟದಲ್ಲಿ ಬರುವಂತೆ ಅರ್ಪಣಾ ಮನೋಭಾವದಿಂದ ವೇಳಾಪಟ್ಟಿಗೆ ಅನುಗುಣವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು

- ವಿದ್ಯಾರ್ಥಿಗಳಿಗೆ ಡಿಡಿಪಿಐ ಪಾಂಡು ಸಲಹೆ

ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣ

ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಲು ವ್ಯಾಸಂಗದಲ್ಲಿ ನಿಷ್ಠೆ, ಬದ್ಧತೆ, ಸಾತ್ವಿಕ ಗುಣಗಳಿಂದ ಸರಿತೂಕದ ಆದರ್ಶ ಜೀವನ ಸಾಗಿಸಬೇಕು ಎಂದು ಡಿಡಿಪಿಐ ಎಚ್.ಕೆ. ಪಾಂಡು ತಿಳಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮೀಕರಣ ಪಡಿಸುವ ಸಂಬಂಧ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳಿನ ನಾಡಿನ ನವ ನಾಗರಿಕರಾಗಿದ್ದು ಕಲಿಯುವ ಕಾಯಕದಲ್ಲಿ ತಂದೆ, ತಾಯಿ, ಗುರು ಹಿರಿಯರ ಸೂಕ್ತ ಮಾರ್ಗದರ್ಶನ ಪಡೆದು ನಿರ್ದಿಷ್ಟ ಗುರಿ ತಲುಪಬೇಕು. ಸ್ವತಂತ್ರ ಹೋರಾಟಗಾರರ, ಸಮಾಜ ಸುಧಾರಕರ, ಸಾಧು, ಸಜ್ಜನರ, ವಿಭೂತಿ ಪುರುಷರ ಜೀವನ ಚರಿತ್ರೆಯನ್ನು ಅರಿತು ಆದರ್ಶಮಯ ಜೀವನ ನಡೆಸಬೇಕು ಎಂದರು.

ಜಿಲ್ಲೆಯ ಫಲಿತಾಂಶ ಉತ್ತಮ ಪಡಿಸುವ ಸಂಬಂಧ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲೆಯ ಎಲ್ಲಾ ಶಿಕ್ಷಕರಿಗೆ ಸಂವಾದ ಕಾರ್ಯಕ್ರಮ, ಶಿಕ್ಷಕರೊಂದಿಗೆ ಸಮಾಲೋಚನೆ, ಪ್ರಶ್ನೆ ಪತ್ರಿಕೆ ವಿಶ್ಲೇಷಣೆ, ಮಾದರಿ ಪ್ರಶ್ನೆ ಪತ್ರಿಕೆ ತಯಾರಿಸಿ ಮಕ್ಕಳಿಗೆ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದ ಹಾಗೂ ತೆರೆದ ಪುಸ್ತಕ ಪರೀಕ್ಷೆ ನಡೆಸುತ್ತಿದ್ದು ಮಕ್ಕಳು ಆ ಎಲ್ಲಾ ಪರೀಕ್ಷೆಗಳಲ್ಲಿ ನಿರ್ಭಯವಾಗಿ ಭಾಗವಹಿಸಿ ವಾರ್ಷಿಕ ಪರೀಕ್ಷೆಯಲ್ಲಿ ಉನ್ನತ ಅಂಕ ಪಡೆದು ಫಲಿತಾಂಶ ಉತ್ತಮ ಮಟ್ಟದಲ್ಲಿ ಬರುವಂತೆ ಅರ್ಪಣಾ ಮನೋಭಾವದಿಂದ ವೇಳಾಪಟ್ಟಿಗೆ ಅನುಗುಣವಾಗಿ ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದರು.

ಪೋಷಕರು ಮಕ್ಕಳ ಸಾಧನೆಯ ಬಗೆಗೆ ವಿಶೇಷ ಕಾಳಜಿ ಇಟ್ಟು ಮಕ್ಕಳ ಶ್ರೇಯಸ್ಸಿಗಾಗಿ ಹಗಲಿರುಳು ದುಡಿಯುತ್ತಾರೆ. ಅಂತಹ ತ್ಯಾಗಮಯಿ ಪೋಷಕರ ಕನಸು ನನಸಾಗಲು ಮಕ್ಕಳು ಕಲಿಕಾ ನಿಷ್ಠೆ, ನಿಯಮಿತ ಅಧ್ಯಯನ, ಅರ್ಪಣಾ ಮನೋಭಾವನೆಯಿಂದ ತಮ್ಮ ಗುರಿ ತಲುಪಲು ಸರಿ ದಾರಿಯಲ್ಲಿ ಮುನ್ನಡೆಯಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಪಾಂಡು, ಕೆಪಿಎಸ್ ಶಾಲೆಯ ಉಪ ಪ್ರಾಂಶುಪಾಲ ರೇವಣ್ಣ, ಸಂಸ್ಥೆಯ ನೂತನ ಉಪ ಪ್ರಾಂಶುಪಾಲ ಮಂಜೇಗೌಡ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಭಾಷಾ ಸಂಪನ್ಮೂಲ ಶಿಕ್ಷಕ ಮೈಸೂರು ಸಂಜಯ್, ನಿಂಗರಾಜು, ಸೋಮಯ್ಯ, ಜಗದೀಶ್, ಮಮತಾ ನಾಯಕ್, ರೂಪಾ ಕುಮಾರಿ, ಜ್ಯೋತಿ ಸುರೇಶ್, ಕಾಂತರಾಜ್, ಅಭಿಲಾಷ್, ಅವಿನಾಶ್, ಕಾವ್ಯಶ್ರೀ, ಸ್ನೇಹಾ, ಇಂದಿರಮ್ಮ, ಮಹೇಶ್ವರಿ ಇದ್ದರು.

Share this article