ಹೊಸ ಬಸ್‌ ನಿಲ್ದಾಣಕ್ಕೂ ಹೈಟೆಕ್‌ ಸ್ಪರ್ಶ

KannadaprabhaNewsNetwork |  
Published : May 10, 2025, 01:19 AM IST
7ಎಚ್‌ಯುಬಿ23, 23ಎಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ನಡೆಯುತ್ತಿರುವ ಹೊಸ ಬಸ್‌ ನಿಲ್ದಾಣದ ಕಾಮಗಾರಿ | Kannada Prabha

ಸಾರಾಂಶ

ಈ ಬಸ್ ನಿಲ್ದಾಣಕ್ಕೆ ಮತ್ತೆ ಹೊಸ ರೂಪ ನೀಡುವ ಮೂಲಕ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮ ಕಾಮಗಾರಿ ಕೈಗೆತ್ತಿಕೊಂಡಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಅಂದಾಜು ಮೊತ್ತ ₹23 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಮಹಮ್ಮದ ರಫೀಕ್ ಬೀ‍ಳಗಿ

ಹುಬ್ಬಳ್ಳಿ: ಕಳೆದ ಕೆಲ ತಿಂಗಳ ಹಿಂದೆ ಹುಬ್ಬಳ್ಳಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ಬಳಿಯ ಹಳೆಯ ಬಸ್ ನಿಲ್ದಾಣ ಪುನರ್ ನಿರ್ಮಾಣವಾಗಿ ಹೈಟೆಕ್ ಸ್ಪರ್ಶ ಪಡೆದ ಬೆನ್ನಲ್ಲೇ ಇದೀಗ ನಗರದ ಗೋಕುಲ್ ರಸ್ತೆಯ ಹೊಸ ಬಸ್ ನಿಲ್ದಾಣ ಮತ್ತೆ ಹೊಸ ರೂಪ ಪಡೆಯಲು ಸಜ್ಜಾಗಿದೆ.

ಈ ಬಸ್ ನಿಲ್ದಾಣಕ್ಕೆ ಮತ್ತೆ ಹೊಸ ರೂಪ ನೀಡುವ ಮೂಲಕ ಮತ್ತಷ್ಟು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ವಾಯವ್ಯ ರಸ್ತೆ ಸಾರಿಗೆ ನಿಗಮ ಕಾಮಗಾರಿ ಕೈಗೆತ್ತಿಕೊಂಡಿದೆ. ನಗರ ಭೂ ಸಾರಿಗೆ ನಿರ್ದೇಶನಾಲಯದ ಸಹಯೋಗದಲ್ಲಿ ಅಂದಾಜು ಮೊತ್ತ ₹23 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

ಫೆಬ್ರವರಿ 2024ರಿಂದ ಕಾಮಗಾರಿ ಆರಂಭವಾಗಿದ್ದು, ಪೂರ್ಣಗೊಳ್ಳಲು ಇನ್ನು 3-4 ತಿಂಗಳು ಬೇಕಾಗಬಹುದು. ಈ ಮೊದಲೇ ಇದ್ದ ಪ್ರಯಾಣಿಕರಿಗೆ ಬಸ್‌ಗಳ ವೇಳಾಪಟ್ಟಿ ಪ್ರದರ್ಶನ, ಉದ್ಘೋಷಣಾ ವ್ಯವಸ್ಥೆಯೊಂದಿಗೆ ಮಾಹಿತಿ ಕೇಂದ್ರ ತೆರೆಯಲಾಗುತ್ತಿದೆ. ಅಲ್ಲದೇ ಪ್ರಯಾಣಿಕರ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ, ಹೆಚ್ಚಿನ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿದೆ.

ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸಾಕಷ್ಟು ಆಸನಗಳ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಹೆಚ್ಚುವರಿ ಶೌಚಾಲಯ ಒದಗಿಸಲಾಗುತ್ತಿದೆ.

ಫ್ರೌಡ್ ಇಂಡಿಯಾ ಪ್ರಮೋಟರ್ಸ್ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ. ನಿಲ್ದಾಣದಲ್ಲಿ ಉಪಹಾರ ಗೃಹ, ವಾಣಿಜ್ಯ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ನಗರ ಸಾರಿಗೆ ಬಸ್ ನಿಲ್ದಾಣ, ದ್ವಿ ಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ‌ ಪಾರ್ಕಿಂಗ್ ಮತ್ತಿತರ ಸೌಲಭ್ಯಗಳಿವೆ. ನಿರಂತರ ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ.

ಈ ಹಿಂದೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಕುಳಿತುಕೊಳ್ಳಲು ಸ್ಥ‍ಳಾವಕಾಶದ ಕೊರತೆ ಇತ್ತು. ನಿಲ್ದಾಣದ ಅಂಚಿನಲ್ಲಿ ಮತ್ತು ಮಧ್ಯದಲ್ಲಿ ಅಲ್ಲಲ್ಲಿ ಕುಳಿತುಕೊಳ್ಳಲು ಕಟ್ಟೆ ನಿರ್ಮಿಸಲಾಗಿತ್ತು. ಆದರೀಗ ಬಹಳಷ್ಟು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ, ಬಹಳ ಹೊತ್ತು ಬಸ್‌ಗೆ ಕಾಯುವ ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಿದೆ.

ನಿಲ್ದಾಣದ ಚಾವಣಿಯನ್ನು ಮತ್ತಷ್ಚು ಮೇಲಕ್ಕೆ ಎತ್ತರಿಸಿದ್ದು, ಮಳೆ ಬಂದರೆ ಈ ಹಿಂದೆ ನಿಲ್ದಾಣದಲ್ಲಿ ನೀರು ಬರುತ್ತಿತ್ತು. ಈಗ ಚಾವಣಿ ಮತ್ತಷ್ಟು ಎತ್ತರಕ್ಕೆ ಏರಿಸಿದ್ದರಿಂದ ನೀರು ನುಗ್ಗದಂತೆ ತಡೆಯಬಹುದಾಗಿದೆ. ಅಲ್ಲದೇ, ಮಳೆ ಬರುವ ವೇಳೆ ಪ್ರಯಾಣಿಕರು ಬಸ್ ಹತ್ತಲು ಪರದಾಡುವುದು ಇದರಿಂದ ತಪ್ಪಲಿದೆ. ಬಸ್‌ ಚಾವಣಿಯ ಒಳಗೆ ಬಸ್‌ ಬಂದು ನಿಲ್ಲುವುದರಿಂದ ಮಳೆ ಬರುವ ವೇಳೆ ಪ್ರಯಾಣಿಕರು ನೆನೆಯುವುದು ತಪ್ಪುತ್ತದೆ. ನಿಲ್ದಾಣದ ಒಂದು ಬದಿಯಲ್ಲಿಯ ಬಹುತೇಕ ಕಾಮಗಾರಿ ಮುಗಿದಿದ್ದು, ಇದನ್ನು ಕಂಡು ಪ್ರಯಾಣಿಕರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ನಿಗದಿತವಾಗಿ ಸ್ವಚ್ಛಗೊಳಿಸುತ್ತಿದ್ದು, ಉತ್ತಮ ವಾತಾವರಣ ಕಲ್ಪಿಸಿದಂತಾಗಿದೆ.

ಮುಂಭಾಗಕ್ಕೆ ಹೊಸ ರೂಪ: ನಿಲ್ದಾಣದ ಮುಂಭಾದಲ್ಲಿ ಮೊದಲಿದ್ದ ಕಟ್ಟಡ ತೆರ‍‍ವುಗೊಳಿಸಲಾಗಿದ್ದು, ಅದಕ್ಕೂ ಹೊಸರೂಪ ನೀಡಲಾಗುತ್ತಿದೆ. ಅನೇಕ ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದು, ಶೀಘ್ರದಲ್ಲೇ ಹೊಸ ರೂಪ ಪಡೆಯಲಿದೆ.

ಮೊದಲು ಬಸ್‌ ನಿಲ್ದಾಣದಲ್ಲಿ ಆಸನಗಳ ಕೊರತೆ ಇತ್ತು. ಸದ್ಯ ಒಂದು ಬದಿಯಲ್ಲಿ ಕಲ್ಪಿಸಿರುವ ಆಸನಗಳಿಂದ ಪ್ರಯಾಣಿಕರಿಗೆ ಬಹಳ ಅನುಕೂಲವಾಗಿದೆ. ಅಲ್ಲಲ್ಲಿ ಹೊಸದಾಗಿ ಡಸ್ಟ್‌ ಬಿನ್‌ ಅ‍ಳವಡಿಸಿದ್ದಾರೆ. ಸ್ವಚ್ಛತೆಗೂ ಆದ್ಯತೆ ನೀಡಲಾಗಿದೆ. ಇದನ್ನು ನೋಡಿ ಖುಷಿಯಾಗಿದೆ. ಇದೇ ರೀತಿ ನಿರ್ವಹಿಸಿ ಸ್ವಚ್ಛತೆ ಕಾಪಾಡಲಿ ಎಂದು ಪ್ರಯಾಣಿಕಳಾದ ಪ್ರೇಮಾ ಹೇಳಿದರು.

ವಾಕರಸಾ ಸಂಸ್ಥೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರ ಮಾರ್ಗದರ್ಶನದಲ್ಲಿ ಗೋಕುಲ ರಸ್ತೆಯ ಹೊಸ ಬಸ್‌ ನಿಲ್ದಾಣ ಹೊಸ ರೂಪ ಪಡೆಯುತ್ತಿದೆ. ಸಕಲ ಸೌಲಭ್ಯಗಳೊಂದಿಗೆ ಪ್ರಯಾಣಿಕ ಸ್ನೇಹಿ ಬಸ್ ನಿಲ್ದಾಣವಾಗಿ ರೂಪುಗೊಳ್ಳಲಿದೆ ಎಂದು ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ ತಿಳಿಸಿದರು.

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?