ಚಿಂತಾಮಣಿ: ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರ ಹಾಗೂ ಪವಿತ್ರ ಯಾತ್ರಾಸ್ಥಳವಾಗಿರುವ ತಾಲೂಕಿನ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಾಜಾನ್ ಬಾವಾಜಾನ್ ದರ್ಗಾದಲ್ಲಿ ಕಳೆದ ಮೂರು ದಿನಗಳಿಂದ ಮಹಾಗಂಧೋತ್ಸವ ಮತ್ತು ಉರುಸ್ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಸರ್ಕಾರದ ಗಂಧೋತ್ಸವವಾಗಿದ್ದು ಅಮ್ಮಾಜಾನ್ ಬಾವಾಜಾನ್‌ರ ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಎಲ್ಲರಿಗೂ ಒಳಿತು ಮಾಡಲೆಂದು ಪ್ರಾರ್ಥಿಸಿರುವುದಾಗಿ ಉನ್ನತ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ಈ ದರ್ಗಾವನ್ನು ಮೇಲ್ದರ್ಜೆಗೇರಿಸುವ ಮತ್ತು ಅಂತಾರಾಷ್ಟ್ರೀಯ ಗುಣಮಟ್ಟದ ಕಾಮಗಾರಿ ಮೂಲಕ ನಿರ್ಮಾಣಗೊಳ್ಳಲಿರುವ ಹಾಗೂ ದೇಶದಲ್ಲೇ ಮಾದರಿ ಸ್ಥಳವನ್ನಾಗಿಸುವ ಉದ್ದೇಶದಿಂದ 65 ಕೋಟಿಯ ವಿಸೃತ್ತ ಯೋಜನೆ ಸಿದ್ಧಪಡಿಸಿದ್ದು ಈಗಾಗಲೇ 32 ಕೋಟಿ ಮಂಜೂರಾಗಿದೆ. ಶೀಘ್ರದಲ್ಲೇ ಇದಕ್ಕೆ ಸಹಕಾರಿಯಾದ ಸಚಿವ ಜಮೀರ್ ಅಹಮ್ಮದ್ ಮತ್ತು ವಿಧಾನ ಪರಿಷತ್ ಸದಸ್ಯ ನಾಸಿರ್ ಅಹಮ್ಮದ್ ಹಾಗೂ ಅತೀಕ್‌ರನ್ನು ಕರೆಯಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದೆಂದರು.
ವಿಧಾನ ಪರಿಷತ್ ಸದಸ್ಯ ನಾಸಿರ್ ಅಹಮ್ಮದ್ ಮಾತನಾಡಿ, ದೇಶದಲ್ಲೇ ಹೆಸರು ಪಡೆದಿರುವ ದರ್ಗಾವಾಗಿದ್ದು ಎಲ್ಲಾ ಧರ್ಮದವರಿಗೂ ಸೇರಿರುವ ಸ್ಥಳವಾಗಿದೆ. ಅವರ ನಂಬಿಕೆಗೆ ತಕ್ಕಂತೆ ಅವರು ಜೀವನ ನಿರ್ವಹಣೆ ಮಾಡಲು ಪ್ರಾರ್ಥನೆ ಸಲ್ಲಿಸುತ್ತಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ದರ್ಗಾವನ್ನಾಗಿ ರೂಪಿಸಲು ಎಲ್ಲಾ ರೂಪುರೇಷೆಗಳನ್ನು ಸಿದ್ಧಪಡಿಸಿದ್ದು ಕೆಲವೇ ದಿನಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದೆಂದರು.ಈ ಸಂದರ್ಭದಲ್ಲಿ ದರ್ಗಾ ಕಮಿಟಿಯ ಅಧ್ಯಕ್ಷ ಮಹಮದ್ ಹನೀಫ್, ಜಿ.ಪಂ. ಮಾಜಿ ಸದಸ್ಯ ಶ್ರೀರಾಮರೆಡ್ಡಿ, ರಾಜಣ್ಣ, ಮೂರ್ತಿ, ಶಂಕರಪ್ಪ, ಗ್ರಾ.ಪಂ. ಅದ್ಯಕ್ಷ ಹಾಜಿ ಅನ್ಸರ್ ಖಾನ್, ಎಂ.ಜಿ. ಸುಹೇಲ್ ಅಹಮದ್, ಅಮ್ಮಾನುಲ್ಲಾ, ಜಬೀವುಲ್ಲಾ, ಆರೀಫ್‌ಖಾನ್, ಅಲ್ಲಾಬಕಾಶ್, ನಜೀರ್, ಅಮೀರ್‌ಖಾನ್, ತಲಿಂ, ಪೈಯಾಜ್, ಅಬ್ದುಲ್‌ಸಲಾಂ, ಮುರುಗಮಲ್ಲ ದರ್ಗಾ ಮೇಲ್ವಿಚಾರಕ ಎಂ.ಎ ತಯೋಬ್ ನವಾಜ್, ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.