ರಾಜ್ಯ ಸರ್ಕಾರದ ಕೆಲಸ ಹೇಳಿ, ಲಿಂಬಿಕಾಯಿ ಗೆಲ್ಲಿಸಿ: ಸಚಿವ ಸಂತೋಷ್ ಲಾಡ್

KannadaprabhaNewsNetwork |  
Published : Oct 12, 2026, 02:15 AM IST
ಕಾಂಗ್ರೆಸ್‌ | Kannada Prabha

ಸಾರಾಂಶ

ಯುಪಿಎ ಸರ್ಕಾರ ಇದ್ದಾಗ ಶೈಕ್ಷಣಿಕ ಚಟುವಟಿಕೆಗೆ ಬಜೆಟ್‌ನಲ್ಲಿ ಶೇ. 4ರಷ್ಟು ಅನುದಾನ ಮೀಸಲಿಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ಶೇ. 2.2ಕ್ಕೆ ಇಳಿಸಿತು. ದೇಶದಲ್ಲಿ 1.20 ಲಕ್ಷ ಶಾಲೆಗಳು ಮುಚ್ಚಿವೆ. ಡ್ರಗ್ಸ್ ಹಾವಳಿ ಹೆಚ್ಚಾಗಿದೆ.

ಹುಬ್ಬಳ್ಳಿ: ಮೋಹನ ಲಿಂಬಿಕಾಯಿ ಅವರು ಈ ಹಿಂದೆ ವಿಧಾನ ಪರಿಷತ್‌ ಸದಸ್ಯರಾಗಿ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪದವೀಧರರ ಪರವಾಗಿ ಧ್ವನಿ ಎತ್ತಿದ್ದಾರೆ. ಅವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸಬೇಕು. ರಾಜ್ಯ ಸರ್ಕಾರದ ಕಾರ್ಯಕ್ರಮಗಳು ಅವರ ಗೆಲುವಿಗೆ ಶ್ರೀರಕ್ಷೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದರು.

ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ ಮೋಹನ ಲಿಂಬಿಕಾಯಿ ಪರ ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಯುಪಿಎ ಸರ್ಕಾರ ಇದ್ದಾಗ ಶೈಕ್ಷಣಿಕ ಚಟುವಟಿಕೆಗೆ ಬಜೆಟ್‌ನಲ್ಲಿ ಶೇ. 4ರಷ್ಟು ಅನುದಾನ ಮೀಸಲಿಡಲಾಗಿತ್ತು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದನ್ನು ಶೇ. 2.2ಕ್ಕೆ ಇಳಿಸಿತು. ದೇಶದಲ್ಲಿ 1.20 ಲಕ್ಷ ಶಾಲೆಗಳು ಮುಚ್ಚಿವೆ. ಡ್ರಗ್ಸ್ ಹಾವಳಿ ಹೆಚ್ಚಾಗಿದೆ. ಇದನ್ನು ಮತದಾರರಿಗೆ ತಿಳಿಸಬೇಕು ಎಂದರು.

ಕೇಂದ್ರ ಸರ್ಕಾರಿ ವ್ಯಾಪ್ತಿಯ ಮತ್ತು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ 12 ವರ್ಷಗಳಲ್ಲಿ 150 ಬಾರಿ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿ 10 ಕೋಟಿ ಯುವಕರು ತೊಂದರೆ ಅನುಭವಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಒಂದೇ ಮೊಬೈಲ್‌ ಹೆಸರಿನಲ್ಲಿ 13 ಸಾವಿರ ಕೋಟಿ ಅಕ್ರಮ ಹಣ ವರ್ಗಾವಣೆ ಆಗಿದೆ. ಇಸ್ರೋದಲ್ಲಿ 100 ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ. ಡಿಆರ್‌ಡಿಒ ಮುಚ್ಚುವ ಹಂತಕ್ಕೆ ಬಂದಿದೆ. ಜನರಿಗೆ ಹೇಳಬೇಕಲ್ಲವೇ ಎಂದು ಪ್ರಶ್ನಿಸಿದರು.

ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ದೇಶದಲ್ಲಿ ಆತಂಕ ಎದುರಿಸುತ್ತಿರುವ ಪ್ರಜಾಪ್ರಭುತ್ವ ಉಳಿಸಲು ಯುವಕರು ಕೈಗೊಂಡ ಹೋರಾಟ ಹತ್ತಿಕ್ಕಲು ಬಿಜೆಪಿ ಸರ್ಕಾರ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಉದ್ಯೋಗ ಕೊಡದ ಬಿಜೆಪಿಗೆ ಯುವಕರು ಪಾಠ ಕಲಿಸಬೇಕು ಎಂದರು.

ಕ್ಷೇತ್ರದ ಅಭ್ಯರ್ಥಿ ಮೋಹನ ಲಿಂಬಿಕಾಯಿ ಮಾತನಾಡಿ, ಕ್ಷೇತ್ರದಲ್ಲಿ 96,320 ಮತಗಳಿವೆ. ಧಾರವಾಡ ಜಿಲ್ಲೆಯಲ್ಲಿ 35 ಸಾವಿರ ಮತಗಳಿವೆ. ಮತ ಚಲಾವಣೆ ವೇಳೆ ರದ್ದಾಗದಂತೆ ನೋಡಿಕೊಳ್ಳಬೇಕಿದೆ. ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು. ಪ್ರತಿಯೊಬ್ಬರೂ ನಾನೇ ಅಭ್ಯರ್ಥಿ ಎಂದುಕೊಂಡು ಪ್ರಚಾರ ಮಾಡಿ ತಮ್ಮನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ರಾಷ್ಟ್ರೀಯ ಶಿಕ್ಷಕರ ಒಕ್ಕೂಟದ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಶತಾಯ-ಗತಾಯ ಕಾಂಗ್ರೆಸ್‌ ಗೆಲುವು ಸಾಧಿಸಲೇಬೇಕು. ಪ್ರತಿಯೊಬ್ಬರೂ ಪದವೀಧರರ ಮನವೊಲಿಸುವ ಕೆಲಸ ಆಗಬೇಕಿದೆ ಎಂದರು.

ಸಭೆಯಲ್ಲಿ ಶಾಸಕ ಎನ್‌.ಎಚ್‌. ಕೋನರೆಡ್ಡಿ, ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ಸದಾನಂದ ಡಂಗನವರ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಹು-ಧಾ ಜಿಲ್ಲಾಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ, ಅನಿಲಕುಮಾರ ಪಾಟೀಲ, ಅಲ್ತಾಫ ಹಳ್ಳೂರ, ಮಹಿಳಾ ಘಟಕದ ಗೌರಮ್ಮ ಬಲೋಗಿ, ಎ.ಎಂ. ಹಿಂಡಸಗೇರಿ, ಅಲ್ತಾಫ ಕಿತ್ತೂರ, ಪ್ರಫುಲಚಂದ್ರ ರಾಯನಗೌಡರ, ಸತೀಶ ಮೆಹರವಾಡೆ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಕಾವ್ಯಕ್ಕೆ ಹೊಸ ಹೊಳಪು ತಂದ ಕವಿ ಬೇಂದ್ರೆ: ಡಾ. ಶಿವಪ್ಪ
ದಸರಾ ಉತ್ಸವ: ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ