ಅತ್ಯಂತ ಲಾಭದಾಯಕ, ಪರಿಸರ ಪೂರಕವಾದ ‘ಜೇನು ಕೃಷಿ’

KannadaprabhaNewsNetwork |  
Published : Mar 04, 2026, 01:15 AM IST
33 | Kannada Prabha

ಸಾರಾಂಶ

ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿಯು ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತವಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಕೃಷಿ ಉತ್ಪಾದಕತೆ ಸುಸ್ಥಿರವಾಗಿ ಹೆಚ್ಚಿಸಲು ಉಪ ಕಸುಬುಗಳ ಅಗತ್ಯತೆ ತುಂಬಾ ಇದೆ. ಇಂತಹ ಉಪಕಸುಬುಗಳಲ್ಲಿ ಅತ್ಯಂತ ಲಾಭದಾಯಕ ಮತ್ತು ಪರಿಸರ ಪೂರಕವಾದದ್ದು ಎಂದರೇ ಜೇನು ಕೃಷಿ.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಇಂದಿನ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಕೃಷಿಯು ಕೇವಲ ಬೆಳೆ ಬೆಳೆಯುವುದಕ್ಕೆ ಸೀಮಿತವಾಗಿಲ್ಲ. ರೈತರ ಆದಾಯ ದ್ವಿಗುಣಗೊಳಿಸಲು ಮತ್ತು ಕೃಷಿ ಉತ್ಪಾದಕತೆ ಸುಸ್ಥಿರವಾಗಿ ಹೆಚ್ಚಿಸಲು ಉಪ ಕಸುಬುಗಳ ಅಗತ್ಯತೆ ತುಂಬಾ ಇದೆ. ಇಂತಹ ಉಪಕಸುಬುಗಳಲ್ಲಿ ಅತ್ಯಂತ ಲಾಭದಾಯಕ ಮತ್ತು ಪರಿಸರ ಪೂರಕವಾದದ್ದು ಎಂದರೇ ಜೇನು ಕೃಷಿ.

ಜೇನುಕೃಷಿಯು ಕೇವಲ ಒಂದು ಹವ್ಯಾಸವಲ್ಲ, ಬದಲಾಗಿ ಅದು ಗ್ರಾಮೀಣ ಭಾರತದ ಆರ್ಥಿಕತೆಯನ್ನು ಬದಲಿಸುವ ಶಕ್ತಿಯುಳ್ಳ ಒಂದು ಕ್ರಾಂತಿಕಾರಿ ಉದ್ಯಮ. ಪರಿಸರಕ್ಕೆ ಯಾವುದೇ ಹಾನಿ ಮಾಡದೆ, ಕನಿಷ್ಟ ಸಂಪನ್ಮೂಲಗಳೊಂದಿಗೆ ಗರಿಷ್ಠ ಲಾಭವನ್ನು ತಂದುಕೊಡುವ ಈ ಕಾಯಕವು ಇಂದಿನ ಯುವ ರೈತರಿಗೆ ಆಶಾಕಿರಣವಾಗಿದೆ.

ಜೇನು ಕೃಷಿಯು ಅತಿ ಕಡಿಮೆ ಬಂಡವಾಳದೊಂದಿಗೆ, ಸಣ್ಣ ಭೂಮಿ ಇರುವ ಅಥವಾ ಭೂಹೀನ ರೈತರೂ ಮಾಡಬಹುದಾದ ಒಂದು ವಿಶಿಷ್ಟ ಉದ್ಯಮವಾಗಿದೆ. ಇದು ಕೇವಲ ಜೇನುತುಪ್ಪದ ಉತ್ಪಾದನೆಗೆ ಮಾತ್ರವಲ್ಲದೆ, ಸಮಸ್ತ ಜೀವಸಂಕುಲದ ಅಸ್ತಿತ್ವಕ್ಕೆ ಕಾರಣವಾಗಿರುವ ಪರಾಗಸ್ಪರ್ಶ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಜೇನುನೊಣಗಳು ರೈತನ ಅತ್ಯುತ್ತಮ ಸ್ನೇಹಿತನಂತೆ ಕಾರ್ಯ ನಿರ್ವಹಿಸಿ, ಬೆಳೆಗಳ ಇಳುವರಿಯನ್ನು ಗಣನೀಯವಾಗಿ ಹೆಚ್ಚಿಸುತ್ತವೆ. ಜೇನು ಸಾಕಣೆಯು ಕೇವಲ ಒಂದು ಆರ್ಥಿಕ ಚಟುವಟಿಕೆಯಲ್ಲ, ಅದು ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವ ಒಂದು ವಿಜ್ಞಾನವೂ ಹೌದು.

ಜೇನು ನೊಣಗಳು ಸಂಘ ಜೀವಿಗಳು, ಗೂಡುಗಳನ್ನು ಕಟ್ಟಿಕೊಂಡು ಸಹಕಾರ ಬಾಳ್ವೆಯಲ್ಲಿ ಅನ್ಯೋನ್ಯತೆಯಿಂದ ಜೀವನ ನಡೆಸುತ್ತವೆ. ಶಿಸ್ತು, ಸಹಕಾರ, ಸ್ವಾವಲಂಭನೆಯಿಂದ ಕೂಡಿದ ಸಾಮಾಜಿಕ ಜೀವನ ನಡೆಸುವ ಕೀಟ, ಆಹಾರ ಸಂಗ್ರಹಣೆ, ಜೇನು ಉತ್ಪಾದಿಸುವುದು, ಮರಿಗಳ ಲಾಲನೆ ಪಾಲನೆ ಮಾಡುವುದು ಮತ್ತು ಕುಟುಂಬ ರಕ್ಷಣೆ ಎಂಬ ಮುಂತಾದ ಕುತೂಹಲ ಕೆರಳಿಸುವ ನಡವಳಿಕೆಗಳನ್ನು ನೋಡಬಹುದು ಎಂದು ಮೈಸೂರು ತಾಲೂಕು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಕೃಷಿ ಕೀಟಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ ಡಾ.ಎಂ.ಆರ್. ಮೌಲ್ಯ ತಿಳಿಸಿದ್ದಾರೆ.

ಪರಾಗಸ್ಪರ್ಶಕ್ರಿಯೆಯ ಅನುಕೂಲಗಳು:

ಎಲ್ಲಕ್ಕಿಂತ ಮಿಗಿಲಾಗಿ ಜೇನು ನೊಣಗಳು ಮಾಡುವ ಪರಾಗಸ್ಪರ್ಶಕ್ರಿಯೆಯಿಂದ ಬೆಳೆಗಳಲ್ಲಿ ಆಗುವ ಹೆಚ್ಚಿನ ಇಳುವರಿಯು ಅತ್ಯಂತ ಮಹತ್ತರವಾದದ್ದು, ಜೇನುತುಪ್ಪ ಉತ್ಪಾದನೆಗಿಂತ ನಮ್ಮ ಬೆಳೆಗಳಲ್ಲಿ ಜೇನುನೊಣಗಳ ಪರಾಗಸ್ಪರ್ಶಕ್ರಿಯೆಯಿಂದ ಆಗುವ ಲಾಭ ಸುಮಾರು 20 ಪಟ್ಟು ಹೆಚ್ಚು ಎಂದು ಕಂಡು ಬಂದಿದೆ.

ಕೀಟಗಳು ಮಕರಂದ ಮತ್ತು ಪರಾಗವನ್ನು ಪಡೆಯಲು ಬೆಳೆಗಳ ಮೇಲೆ ಆಧಾರಪಟ್ಟಿದ್ದರೆ, ಬೆಳೆಗಳು ತಮ್ಮ ಅನ್ಯ ಪರಾಗಸ್ಪರ್ಶಕ್ರಿಯೆಗೆ ಕೀಟಗಳ ಮೇಲೆ ಅವಲಂಭಿತವಾಗಿರುತ್ತವೆ. ಜೇನುನೊಣಗಳು ತಮ್ಮ ಹಾಗೂ ತಮ್ಮ ಸಂತಾನದ ಆಹಾರವಾದ ಪರಾಗ ಮತ್ತು ಮಕರಂದವನ್ನು ಪಡೆಯಲು ಅನೇಕ ಬಗೆಯ ಹೂವುಗಳಿಗೆ ಭೇಟಿ ಕೊಡುತ್ತವೆ. ಆ ಸಮಯದಲ್ಲಿ ಪರಾಗವು ನೊಣಗಳ ಮೈ ಮೇಲಿರುವ ಕೂದಲುಗಳಿಗೆ ಅಂಟಿಕೊಂಡಿದ್ದು, ಇದೇ ನೊಣವು ಬೇರೊಂದು ಹೂವಿಗೆ ಭೇಟಿ ಕೊಟ್ಟಾಗ ಆ ಹೂವಿನ ಶಲಾಕೆಯ ಮೇಲೆ ಬೀಳುತ್ತವೆ. ಈ ರೀತಿ ಜೇನುನೊಣಗಳು ತಮಗೇಗೊತ್ತಿಲ್ಲದೇ ಅನ್ಯ ಪರಾಗಸ್ಪರ್ಶಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ. ಬೆಳೆಗಳು ಕೀಟಗಳನ್ನು ತಮ್ಮತ್ತ ಬಣ್ಣ ಬಣ್ಣದ ಹೂವುಗಳಿಂದ ಮತ್ತು ಅವುಗಳ ಸುವಾಸನೆ ಹಾಗೂ ವಿಶಿಷ್ಟ ರೀತಿಯ ರಚನೆಗಳಿಂದ ಆಕರ್ಷಿಸಿ, ಪರಾಗ ಮತ್ತು ಮಕರಂದವನ್ನು ಒದಗಿಸಿ ಪರಾಗಸ್ಪರ್ಶಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತವೆ.

ಜೇನು ಕೃಷಿ ತಿಳವಳಿಕೆ ಅವಶ್ಯಕ:

ಜೇನು ನೊಣಗಳ ಸ್ವಭಾವ, ಜೇನು ಸಾಕಣೆ ಉಪಕರಣಗಳ, ಜೇನು ಕುಟುಂಬಗಳ ನಿರ್ವಹಣೆ ಮತ್ತು ಜೇನುನೊಣಗಳಿಗೆ ಬೇಕಾಗಿರುವ ಉಪಯುಕ್ತ ಸಸ್ಯಗಳ ಬಗ್ಗೆ, ಜೇನು ಕೃಷಿ ಪ್ರಾರಂಭಿಸುವ ಮುಂಚೆ ತಿಳವಳಿಕೆ ಗಳಿಸುವುದು ಅತ್ಯಂತ ಅವಶ್ಯಕ.

ಜೇನು ಮನೆಯಿಂದ ಒಂದು ಕಿ.ಮೀ. ಸುತ್ತಳತೆಯಲ್ಲಿ ವರ್ಷಪೂರ್ತಿ ಹೂ ಬಿಡುವ ಸಸ್ಯ ಸಂಪತ್ತು ಸಿಗುವಂತಿರಬೇಕು. ಶುದ್ಧವಾದ ನೀರು ಸಿಗುತ್ತಿರಬೇಕು. ಮಳೆ, ಗಾಳಿ ಮತು ಬಿಸಿಲಿನಿಂದ ಜೇನು ಕುಟುಂಬಗಳಿಗೆ ರಕ್ಷಣೆ ಇರಬೇಕು. ಐಎಸ್ಐ ಜೇನು ಪೆಟ್ಟಿಗೆಗಳನ್ನೇ ಜೇನು ಸಾಕಾಣಿಕೆಗೆ ಉಪಯೋಗಿಸಬೇಕು.

ತೆಂಗು, ಹೊಂಗೆ, ಸಂಪಿಗೆ, ಬೇವು, ಹುಣಸೆ, ಮಾವು, ನೇರಳೆ, ರಬ್ಬರ್, ಅಂಟುವಾಳ, ನಿಂಬೆ, ನೀಲಗಿರಿ, ಕಿತ್ತಳೆ ಮುಂತಾದ ಮರಗಳು ಜೇನು ನೊಣಗಳ ಆಸರೆ ಸಸ್ಯಗಳಾಗಿವೆ.

ಬಾಳೆ, ಹುಚ್ಚೆಳ್ಳು, ತುಂಬೆ, ಹುರುಳಿ, ಕಾಫಿ, ಎಳ್ಳು, ಏಲಕ್ಕಿ, ಸೂರ್ಯಕಾಂತಿ, ಸಾಸಿವೆ, ಕೊತ್ತಂಬರಿ, ಹತ್ತಿ ಗಿಡಗಳು, ಕುದುರೆ ಮಸಾಲೆ, ಸೀಗೆ, ರಾಗಿ, ಈರುಳ್ಳಿ, ಭತ್ತ, ಜೋಳ, ಅಂಟಿಗೋನಂ ಇತ್ಯಾದಿ ಹುಲು ಮತ್ತು ಬಳ್ಳಿಗಳು ಜೇನು ನೊಣಗಳಿಗೆ ಆಹಾರವನ್ನೊದಗಿಸುವ ಪ್ರಮುಖ ಬೆಳೆಗಳು.

ಆರಂಭದ ವರ್ಷದಲ್ಲಿ ಪ್ರತಿ ಜೇನು ಕುಟುಂಬಕ್ಕೆ ಸರಾಸರಿ 800 ರಿಂದ 1000 ರು. ಗಳವರೆವಿಗೂ ಖರ್ಚು ಬರಬಹುದು. ತದನಂತರ ಬರುವ ವರ್ಷಗಳಲ್ಲಿ ನಿರ್ವಹಣೆಯ ಖರ್ಚು ಕೇವಲ 50 ರಿಂದ 95 ರು. ಮಾತ್ರ ಬರಬಹುದು. ಸಮರ್ಪಕವಾಗಿ ಜೇನು ಕುಟುಂಬಗಳನ್ನು ನಿರ್ವಹಿಸಿದರೆ ಪ್ರತಿಯೊಂದು ಕುಟುಂಬದಿಂದ ವರ್ಷವೊಂದಕ್ಕೆ ಸರಾಸರಿ 8 ರಿಂದ 10 ಕೆ.ಜಿ. ಜೇನುತುಪ್ಪ ಪಡೆಯಬಹುದು. ಇದರಿಂದ 1000 ರಿಂದ 1500 ರು. ನಿವ್ವಳ ಆದಾಯ ಪಡೆಯಬಹುದು.

ಇದಕ್ಕಿಂತ ಮುಖ್ಯವಾಗಿ ಜೇನುನೊಣಗಳ ಪರಾಗಸ್ಪರ್ಶ ಕಾರ್ಯದಿಂದ ವಿವಿಧ ಬೆಳೆಗಳಲ್ಲಿ ಉತ್ತಮ ಗುಣಮಟ್ಟ ಕಾಳಿನ ಹೆಚ್ಚಿನ ಇಳುವರಿಯಿಂದ ಬರುವ ಆದಾಯ ಇನ್ನು ಹೆಚ್ಚಾಗಿರುತ್ತದೆ. ಬೇಕಾದರೆ ಜೇನು ಕುಟುಂಬಗಳನ್ನು ಬೇರೆ ರೈತರ ಬೆಳೆಗಳ ಪರಾಗಸ್ಪರ್ಶ ಕಾರ್ಯಕ್ಕೆ ಒದಗಿಸಿ ಅದರಿಂದಲೂ ಹೆಚ್ಚಿನ ಜೇನುತುಪ್ಪದ ಜೊತೆಗೆ ಹಣವನ್ನು ಸಹ ಸಂಪಾದಿಸಬಹುದು.

ಕೃಷಿ ವಿಜ್ಞಾನ ಕೇಂದ್ರಗಳು, ವಿಸ್ತರಣಾ ಶಿಕ್ಷಣ ಘಟಕಗಳ ವತಿಯಿಂದ ಹಳ್ಳಿಗಳಲ್ಲಿ ಜೇನು ಪೆಟ್ಟಿಗೆಗಳನ್ನು ಇರಿಸಿ, ರೈತರಿಗೆ ನೇರ ಪ್ರಾತ್ಯಕ್ಷಿಕೆ ನೀಡುವುದು, ಜೇನು ನೊಣಗಳನ್ನು ಹಿಡಿಯುವುದು, ಪೆಟ್ಟಿಗೆ ಬದಲಿಸುವುದು ಮತ್ತು ಜೇನುತುಪ್ಪ ತೆಗೆಯುವ ಪ್ರಕ್ರಿಯೆಯನ್ನು ರೈತರಿಗೆ ಪ್ರಾಯೋಗಿಕವಾಗಿ ತೋರಿಸಿ ಅವರಲ್ಲಿ ಆಸಕ್ತಿ ಹೆಚ್ಚಿಸುತ್ತಿದೆ.ಗೂಡಿಗೊಂದು ರಾಣಿ ಜೇನು

ಒಂದು ಜೇನುಗೂಡಿನಲ್ಲಿ ರಾಣಿ, ಕೆಲಸಗಾರ ಮತ್ತು ಗಂಡು ನೊಣಗಳೆಂಬ ಮೂರು ಬಗೆಯ ಜಾತಿಗಳಿರುತ್ತವೆ. ಒಂದು ಸಾಧಾರಣ ಜೇನು ಸಂಸಾರದಲ್ಲಿ ಸುಮಾರು 20 ಸಾವಿರದಿಂದ 40 ಸಾವಿರ ಜೇನು ನೊಣಗಳಿದ್ದು, ಅವುಗಳಲ್ಲಿ ಒಂದೇ ಒಂದು ರಾಣಿ ನೊಣ ಮತ್ತು ಕೆಲವು ನೂರು ಗಂಡು ನೊಣಗಳಿದ್ದು, ಉಳಿದ ಎಲ್ಲವೂ ಕೆಲಸಗಾರ ನೊಣಗಳಾಗಿರುತ್ತವೆ.

ಜೇನುತುಪ್ಪ ಒಂದು ಪೌಷ್ಟಿಕ ನೈಸರ್ಗಿಕ ಆಹಾರವಲ್ಲದೆ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಧಾರ್ಮಿಕ ವಿಧಿ ವಿಧಾನಗಳಲ್ಲಿ ಇದಕ್ಕೆ ವಿಶಿಷ್ಟ ರೀತಿಯ ಸ್ಥಾನವಿದೆ. ಜೇನು ಕೃಷಿಯಿಂದ ಜೇನುತುಪ್ಪವಲ್ಲದೆ ಇತರೇ ಉತ್ಪನ್ನಗಳಾದ ಮೇಣ, ರಾಜಷಾಹಿರಸ, ಔಷಧೀಯ ಗುಣವುಳ್ಳ ಜೇನು ವಿಷ ಮುಂತಾದವುಗಳನ್ನು ಪಡೆಯಬಹುದು.

ಭೂಮಿಯ ಫಲವತ್ತತೆ ಮತ್ತು ಬೆಳೆಗಳ ಇಳುವರಿಯನ್ನು ಕಾಪಾಡಿಕೊಳ್ಳುತ್ತಲೇ ರೈತರು ಸ್ವಾವಲಂಬಿಗಳಾಗಲು ಜೇನು ಸಾಕಣೆ ಅತ್ಯುತ್ತಮ ಮಾರ್ಗ. ಸರ್ಕಾರ ಮತ್ತು ಸಮಾಜವು ಜಂಟಿಯಾಗಿ ಜಾಗೃತಿ ಮೂಡಿಸಿದರೆ, ಮುಂದಿನ ದಿನಗಳಲ್ಲಿ ಪ್ರತಿಯೊಬ್ಬ ರೈತನ ತೋಟದಲ್ಲೂ ಒಂದು ಜೇನು ಪೆಟ್ಟಿಗೆಯನ್ನು ಕಾಣಬಹುದು. ಆ ಮೂಲಕ ನಮ್ಮ ಕೃಷಿ ಕ್ಷೇತ್ರವು ಜೇನು ಸಮೃದ್ಧವಾಗುವುದರಲ್ಲಿ ಸಂದೇಹವಿಲ್ಲ.

- ಡಾ.ಎಂ.ಆರ್. ಮೌಲ್ಯ, ಸಹಾಯಕ ಪ್ರಾಧ್ಯಾಪಕಿ, ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ, ಮೈಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ನಿರೀಕ್ಷೆಗಳೇನು?
ಕೇಂದ್ರ ಸರ್ಕಾರದ 4 ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಲು ಆಗ್ರಹಿಸಿ ಸಿಐಟಿಯು ಪ್ರತಿಭಟನೆ