ಹೆದ್ದಾರಿ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ಬಂದ್, ಜನ ಪರದಾಟ

KannadaprabhaNewsNetwork |  
Published : Apr 22, 2025, 01:51 AM IST
21ಕೆಪಿಕೆವಿಟಿ01:  | Kannada Prabha

ಸಾರಾಂಶ

ಪಟ್ಟಣದಲ್ಲಿ ಹುಸೇನಪುರ ಕ್ರಾಸ್‌ನಿಂದ ಮಸ್ಕಿ ಕ್ರಾಸ್ ವರೆಗೆ ಕೈಗೊಂಡ ಬೆಳಗಾವಿ ಹೈದರಾಬಾದ್ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಬೇಸಿಗೆಯ ಬಿಸಿಲಿನ ಜೊತೆ ವಿಪರೀತ ಧೂಳಿನಿಂದ ಸಾರ್ವಜನಿಕರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಕವಿತಾಳ

ಪಟ್ಟಣದಲ್ಲಿ ಹುಸೇನಪುರ ಕ್ರಾಸ್‌ನಿಂದ ಮಸ್ಕಿ ಕ್ರಾಸ್ ವರೆಗೆ ಕೈಗೊಂಡ ಬೆಳಗಾವಿ ಹೈದರಾಬಾದ್ ರಾಜ್ಯ ಹೆದ್ದಾರಿ ವಿಸ್ತರಣೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಬೇಸಿಗೆಯ ಬಿಸಿಲಿನ ಜೊತೆ ವಿಪರೀತ ಧೂಳಿನಿಂದ ಸಾರ್ವಜನಿಕರು ಪರದಾಡುವಂತಾಗಿದೆ.ಈ ಹಿಂದೆ ಅವೈಜ್ಞಾನಿಕವಾಗಿ ನಿರ್ಮಿಸಿದ ವಿಭಜಕದಿಂದ ರಸ್ತೆ ಕಿರಿದಾಗಿ ವಾಹನಗಳು ಮಣ್ಣಿನ ರಸ್ತೆಯಲ್ಲಿ ಚಲಿಸುವಂತಾಗಿದೆ ಹೀಗಾಗಿ ಧೂಳು ಹರಡುತ್ತಿದೆ. ಕಾಮಗಾರಿ ಕೈಗೊಂಡಿರುವುದರಿಂದ ರಸ್ತೆ ದುರಸ್ತಿಯಾದರೆ ಧೂಳು ನಿಯಂತ್ರಣವಾಗುತ್ತದೆ ಎಂದು ಕನಸು ಕಾಣುತ್ತಿದ್ದ ನಾಗರಿಕರಿಗೆ ಈಗ ಭ್ರಮನಿರಸನವಾಗಿದೆ.ಅಂದಾಜು ₹23 ಕೋಟಿ ವೆಚ್ಚದಲ್ಲಿ ಆರಂಭವಾಗಿದ್ದ ರಸ್ತೆ ವಿಸ್ತರಣೆ, ವಿಭಜಕ ನಿರ್ಮಾಣ, ಸಣ್ಣ ಸಣ್ಣ ಸೇತುವೆಗಳ ನಿರ್ಮಾಣ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ ಗುತ್ತಿಗೆದಾರರು ಕಳೆದ ಒಂದು ತಿಂಗಳಿಂದ ಇತ್ತ ಮುಖ ಮಾಡಿಲ್ಲ. ಹೀಗಾಗಿ ಅಧಿಕಾರಿ, ಜನಪ್ರತಿನಿಧಿಗಳು ಪಟ್ಟಣದ ನಾಗರಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಸರ್ಕಾರದಲ್ಲಿ ಕೆಲಸ ಮಾಡಲು ಹಣದ ಕೊರತೆ ಇದೆ ಹೀಗಾಗಿ ಕಾಮಗಾರಿ ಆರಂಭ ಮಾಡಿ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಜನರು ಲೇವಡಿ ಮಾಡುತ್ತಿದ್ದಾರೆ.ಕೆಲವು ಸೇತುವೆಗಳ ನಿರ್ಮಾಣ ಸೇರಿದಂತೆ ಹುಸೇನಪುರ ಕ್ರಾಸ್‌ನಿಂದ ಜೆಸ್ಕಾಂ ಕಚೇರಿವರೆಗೆ ರಸ್ತೆ ವಿಸ್ತರಣೆ ಮಾಡಿದ ಗುತ್ತಿಗೆದಾರ ರಸ್ತೆ ಬದಿ ಕಂಕರ್ ಹರಡಿ ಹಾಗೆಯೇ ಬಿಟ್ಟಿದ್ದಾರೆ. ವಿದ್ಯುತ್ ಕಂಬಗಳ ಸ್ಥಳಾಂತರವೂ ಆಮೆ ವೇಗದಲ್ಲಿ ನಡೆದಿದೆ. ರಂಜಾನ್ ಹಬ್ಬ ಮತ್ತು ಜಾತ್ರೆ ನೆಪದಲ್ಲಿ ಕಾಮಗಾರಿ ನಿಲ್ಲಿಸಿದ ಗುತ್ತಿಗೆದಾರರು ಜಾತ್ರೆ ಮುಗಿದು ತಿಂಗಳು ಕಳೆದರೂ ಕಾಮಗಾರಿ ಆರಂಭ ಮಾಡದಿರವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ವಾಹನಗಳು ಸಂಚರಿಸಿದಂತೆಲ್ಲಾ ಧೂಳು ಹರಡುತ್ತಿದ್ದು ವಅಹನ ಸವಾರರು ಮತ್ತು ವರ್ತಕರು ಬೇಸತ್ತಿದ್ದಾರೆ. ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಹೀಗಾಗಿ ಬೇಗ ಕಾಮಗಾರಿ ಆರಂಭಿಸಬೇಕು ಮಳೆಗಾಲ ಆರಂಭವಾಗುವದರೊಳಗೆ ಕಾಮಗಾರಿ ಮುಗಿಸಿದರೆ ಸುಗಮ ಸಂಚಾರ ಸಾಧ್ಯವಾಗುತ್ತದೆ ಎಂದು ಮುಖಂಡರಾದ ವಿಶ್ವಾನಾಥ ಕಾಮರಡ್ಡಿ ಒತ್ತಾಯಿಸಿದ್ದಾರೆ.

ರಸ್ತೆ ವಿಸ್ತರಣೆ ಕಾಮಗಾರಿ ಮುಗಿಯುವವರೆಗೆ ಧೂಳು ನಿಯಂತ್ರಣಕ್ಕೆ ನಿತ್ಯ ನೀರು ಸಿಂಪಡಣೆ ಮಾಡಬೇಕು ಎಂದು ವರ್ತಕರಾದ ರಾಘವೇಂದ್ರ, ತಾಯಪ್ಪ, ಲಕ್ಷ್ಮಿಕಾಂತ, ಸಂತೋಷ, ರಮೇಶ ಆಗ್ರಹಿಸಿದ್ದಾರೆ.

PREV

Recommended Stories

ಕಾರ್ಮಿಕರು ಒಪ್ಪಿದ್ರೆ 10 ಗಂಟೆ ಕೆಲಸಕ್ಕೆ ಓಕೆ : ಲಾಡ್‌
‘ಸಾವಿರಾರು ಶವ ಹೂಳಲು ಧರ್ಮಸ್ಥಳ ಗ್ರಾಮದಲ್ಲಿ ಮಹಾಭಾರತ ಯುದ್ಧ ನಡೆದಿಲ್ಲ’