ಹೆದ್ದಾರಿ ಕಾಮಗಾರಿ: ಸಾಣೂರು-ಬೈಪಾಸ್‌ ಸರ್ವಿಸ್‌ ರಸ್ತೆ ನಿರ್ಮಾಣ ಕೂಗು

KannadaprabhaNewsNetwork | Published : Jan 30, 2024 2:00 AM

ಸಾರಾಂಶ

ಸಾಣೂರು ಬಿಕರ್ನಕಟ್ಟೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಸಾಣೂರು ಪೇಟೆಯಿಂದ ಬೈಪಾಸ್ ವರೆಗೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಹೆದ್ದಾರಿ ಹೋರಾಟ ಸಮಿತಿ ಪ್ರತಿಭಟನೆ ಎಚ್ಚರಿಕೆ ನೀಡಿದೆ.

ರಾಂ ಅಜೆಕಾರು

ಕನ್ನಡಪ್ರಭ ವಾರ್ತೆ ಕಾರ್ಕಳಸಾಣೂರು ಬಿಕರ್ನಕಟ್ಟೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ169 ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಗ ಪಡೆಯುತಿದ್ದು ಕಾರ್ಕಳ ತಾಲೂಕಿನ ಗಡಿ ಭಾಗವಾದ ಸಾಣೂರಿನಿಂದ ಬೈಪಾಸ್ ವರೆಗಿನ ಕಾಮಗಾರಿ ಅಂತಿಮ ಹಂತದಲ್ಲಿದೆ. ಆದರೆ ಸಾಣೂರು ಪೇಟೆಯಿಂದ ಬೈಪಾಸ್ ವರೆಗೆ ಸರ್ವೀಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಹೆದ್ದಾರಿ ಹೋರಾಟ ಸಮಿತಿ ಪ್ರತಿಭಟನೆ ಎಚ್ಚರಿಕೆ ನೀಡಿದೆ.ಹೋರಾಟವೇಕೆ?:

ಕಾರ್ಕಳ ತಾಲೂಕು ಸಾಣೂರು ಗ್ರಾಮದ ಬೈಪಾಸ್ ಸರ್ಕಲ್‌ನಿಂದ ಮಂಗಳೂರಿನ ಬಿಕರ್ನ ಕಟ್ಟೆಯವರೆಗೆ 45 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಕಳೆದ ಒಂದೂವರೆ ವರ್ಷಗಳಿಂದ ಭರದಿಂದ ನಡೆಯುತ್ತಿದೆ. ಈಗಾಗಲೇ ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮುಕ್ತಾಯದ ಹಂತದಲ್ಲಿದೆ.ಸಾಣೂರು ಯುವಕ ಮಂಡಲದ ಎದುರಿನಿಂದ ಮುರತಂಗಡಿಯ ಸಾಣೂರು ಪದವಿಪೂರ್ವ ಕಾಲೇಜಿನವರೆಗೆ ಸುಮಾರು ಎರಡು ಕಿಲೋಮೀಟರ್ ಉದ್ದಕ್ಕೆ ಇಕ್ಕೆಲಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸಲಾಗಿದೆ. ಆದರೆ ಮುಖ್ಯ ಪೇಟೆಯಿಂದ ಬೈಪಾಸ್ ವರೆಗೆ ಸುಮಾರು 2.5 ಕಿ.ಮೀ. ವರೆಗೆ ಸರ್ವೀಸ್ ರಸ್ತೆ ವಿಸ್ತರಿಸುವಂತೆ ಹೋರಾಟಗಾರರ ಕೂಗು. ಗುತ್ತಿಗೆ ಪಡೆದಿರುವ ಕಂಪನಿ ಕೆಲವೆ ದಿನಗಳಲ್ಲಿ ದ.ಕ ಜಿಲ್ಲೆಯ ಹೆದ್ದಾರಿ ಸಾಗುವ ಭಾಗದಲ್ಲಿ ಕಾಮಗಾರಿ ನಡೆಸಲು ಸಜ್ಜಾಗುತ್ತಿದೆ.

ಜಿಲ್ಲಾಧಿಕಾರಿ ಸೂಚನೆ: ಸುನಿಲ್ ಕುಮಾರ್ ಅವರು ರಾಜ್ಯ ಸಂಪುಟದಲ್ಲಿ ಸಚಿವರಾಗಿದ್ದಾಗ ಅಂದಿನ ಉಡುಪಿ ಜಿಲ್ಲಾಧಿಕಾರಿ ಕೂರ್ಮ ರಾವ್ ಅಧ್ಯಕ್ಷತೆಯಲ್ಲಿ ಕಾರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ, ಭೂಸ್ವಾಧೀನಾಧಿಕಾರಿ, ಗುತ್ತಿಗೆದಾರರು ಮತ್ತು ಸಾಣೂರು ಗ್ರಾಮಸ್ಥರ ಸಭೆ ನಡೆದಿತ್ತು. ಆಗ, ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 4.5 ಕಿಲೋಮೀಟರ್ ಹೆದ್ದಾರಿ ಇಕ್ಕೆಲಗಳಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಮಾಡುವಂತೆ ಇಲಾಖೆಗೆ ಸೂಚಿಸಲಾಗಿತ್ತು ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಯೋಜನಾಧಿಕಾರಿ ಕಚೇರಿಗೆ ಪ್ರಸ್ತಾವನೆ ಕೂಡ ಸಲ್ಲಿಸಿದ್ದರು

ಕಳೆದ ತಿಂಗಳಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಸಭೆ ನಡೆದಿತ್ತು. ಈ ಸಂದರ್ಭ, ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ಸಾಣೂರು ನರಸಿಂಹ ಕಾಮತ್ ಅವರು ಸಾಣೂರಿನ ಮುಖ್ಯಪೇಟೆಯಲ್ಲಿಯೇ ಸರ್ವಿಸ್ ರಸ್ತೆ ನಿರ್ಮಾಣ ಕಾರ್ಯ ಕೈಬಿಟ್ಟಿರುವ ಬಗ್ಗೆ ಗಮನ ಸೆಳೆದಿದ್ದರು. ಹೊಸ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾರ್ಯ ಮಾಡುವಾಗ ಪ್ರಮುಖ ಸ್ಥಳಗಳಲ್ಲಿ ಸರ್ವಿಸ್ ರಸ್ತೆ ಕಡ್ಡಾಯವಾಗಿ ಮಾಡುವ ಅವಶ್ಯಕತೆಯನ್ನು ಹೆದ್ದಾರಿ ಇಲಾಖೆಗೆ ಸೂಚಿಸಿದ್ದರುಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹೊಸ ಡಿಪಿಆರ್‌ (ಯೋಜನಾ ವರದಿ) ತಯಾರಿಸಿ ಸರ್ವೀಸ್ ರಸ್ತೆ ನಿರ್ಮಾಣ ಮಾಡುವಂತೆ ತಿಳಿಸಿದ್ದರು.---ಸಾಣೂರು ಗ್ರಾಮಸ್ಥರ ನಿರಂತರ ಮನವಿ, ಹಕ್ಕೊತ್ತಾಯ ಕಡೆಗಣಿಸಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಈ ಬಗ್ಗೆ ಕೇಂದ್ರ ಸಾರಿಗೆ ಸಚಿವಾಲಯಕ್ಕೆ ಪ್ರಸ್ತಾವನೆ ಹಾಗೂ ಒತ್ತಡ ತಂದು ಸರ್ವಿಸ್ ರೋಡ್ ರಸ್ತೆ ನಿರ್ಮಾಣ ಮಾಡಬೇಕು. ಇಲ್ಲವಾದರೆ ಸಾಣೂರು ಗ್ರಾಮಸ್ಥರೆಲ್ಲರೂ ಒಟ್ಟಾಗಿ ಅನಿವಾರ್ಯವಾಗಿ ತೀವ್ರ ಪ್ರತಿಭಟನೆಗೆ ಮುಂದಾಬೇಕಾಗುತ್ತದೆ.

-ಸಾಣೂರು ನರಸಿಂಹ ಕಾಮತ್, ಹೆದ್ದಾರಿ ಹೋರಾಟ ಸಮಿತಿ ಅಧ್ಯಕ್ಷ ------------

ಹೊಸ ಡಿಪಿಆರ್‌ ತಯಾರಿಸಿ ಸರ್ವಿಸ್ ರಸ್ತೆ ನಿರ್ಮಾಣ ಮಾಡಲು ಹೆದ್ದಾರಿ ಇಲಾಖೆ ಗೆ ಸೂಚಿಸಲಾಗಿದೆ. ಈಗಾಗಲೇ ಡಿಪಿಆರ್‌ ಆದ ರಸ್ತೆಗೆ ಎರಡು ಕಿ.ಮೀ. ಸರ್ವಿಸ್‌ ರಸ್ತೆಗೆ ಒಪ್ಪಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ಡಿಪಿಆರ್‌ ಆಧರಿಸಿ ಸರ್ವೀಸ್ ರಸ್ತೆಯನ್ನು ಬೈಪಾಸ್ ವರೆಗೆ ವಿಸ್ತರಣೆ ಮಾಡಲಾಗುವುದು.-ಡಾ. ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ.

Share this article