ದಾಂಡೇಲಿ: ಹಣ ಪಡೆದು ಫಲಾನುಭವಿಗಳಿಗೆ ಮನೆ ನೀಡದ ಗೃಹ ಮಂಡಳಿ ವಿರುದ್ಧ ಹೋರಾಟ ನಡೆಸುತ್ತಿರುವ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ, ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಲೋಕಸಭೆ ಚುನಾವಣೆ ಬಹಿಷ್ಕರಿಸುವುದಾಗಿ ಘೋಷಿಸಿದೆ.ಹೋರಾಟ ಸಮಿತಿ ಅಧ್ಯಕ್ಷ ಅಕ್ರಮ್ ಖಾನ ಮಾತನಾಡಿ, ೨೦೧೬ರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಂಯುಕ್ತಾಶ್ರಯದಲ್ಲಿ ಅವಾಸ್ ಯೋಜನೆಯಲ್ಲಿ ೧೧೦೦ ಬಡ ಫಲಾನುಭವಿಗಳಿಂದ ಮನೆಗಳಿಗೆ ಅರ್ಜಿ ಕರೆದಿದ್ದರು. ಅದರಲ್ಲಿ ೮೪೦ ಫಲಾನುಭವಿಗಳು ₹೫೦ ಸಾವಿರದಿಂದ ₹೭೦ ಸಾವಿರದ ವರೆಗೆ ಹಣ ಸಂದಾಯ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಆ ಫಲಾನುಭವಿಗಳಿಗೆ ಮನೆಗಳನ್ನು ನೀಡಿಲ್ಲ. ಗುತ್ತಿಗೆದಾರರಿಗೆ ಹಣ ಸಂದಾಯವಾಗಿದೆ. ಆದರೆ ಮನೆಗಳು ಸಂಪೂರ್ಣಗೊಂಡಿಲ್ಲ. ಮನೆಗಳು ಫಲಾನುಭವಿಗಳಿಗೆ ಹಂಚಿಕೆಯಾಗಿಲ್ಲ ಮತ್ತು ೨೦೧೩ರಲ್ಲಿ ಗೃಹ ಮಂಡಳಿ ಅಂದಿನ ಕಾರ್ಪೊರೇಶನ್ ಬ್ಯಾಂಕ್ ಮೂಲಕ ನಿವೇಶನಕ್ಕೆ ಅರ್ಜಿ ಆಹ್ವಾನಿಸಿತ್ತು. ಸುಮಾರು ೩,೪೧೬ ಅರ್ಜಿದಾರರು ಮುಂಗಡ ಠೇವಣಿ ಜತೆಗೆ ಅರ್ಜಿ ಸಲ್ಲಿಸಿದ್ದಾರೆ. ಅವರಿಗೂ ಯಾವುದೇ ನಿವೇಶನ ನೀಡದೆ ಹಣವನ್ನು ಮರಳಿಸದೆ ಗೃಹ ಮಂಡಳಿ ಸತಾಯಿಸುತ್ತಿದೆ. ಈ ಎರಡು ಕಾರಣಗಳಿಗೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಆದರೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇಲ್ಲಿಯವರೆಗೆ ಯಾವುದೆ ಕ್ರಮಕೈಗೊಂಡಿಲ್ಲ. ಆದ್ದರಿಂದ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರವನ್ನು ಸಮಿತಿ ಕೈಗೊಂಡಿದೆ ಅಕ್ರಮ ಖಾನ ತಿಳಿಸಿದ್ದಾರೆ.ಈ ಕುರಿತು ಕುಟುಂಬ ಸದಸ್ಯರ ಸಮೇತ ಆಗಮಿಸಿ, ರಾಜ್ಯ ಚುನಾವಣೆ ಆಯುಕ್ತರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ನೀಡಲಾಗಿದೆ. ಸ್ಥಳೀಯ ಶಾಸಕ ಆರ್.ವಿ. ದೇಶಪಾಂಡೆ, ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ, ಗೃಹಮಂಡಳಿ ಸಚಿವ ಜಮೀರ ಅಹಮ್ಮದ ಖಾನ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಹೀಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿರುವುದಾಗಿ ಹೇಳಿದ್ದಾರೆ. ಸಮಿತಿಯ ಉಪಾಧ್ಯಕ್ಷ ಅಶೋಕ ಪಾಟೀಲ, ಕಾರ್ಯದರ್ಶಿ ರಾಘವೇಂದ್ರ ಗಡಪ್ಪನವರ, ಮುಜೀಬಾ ಛಬ್ಬಿ, ಮಹಮ್ಮದ್ ಗೌಸ್, ದತ್ತಾತ್ರೇಯ ಕಲ್ಗುಟಕರ, ಶಹಜಾದಿ ಕಲಶಾಪುರ ಹಾಗೂ ಹೋರಾಟ ಸಮಿತಿ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.